ಅಷ್ಟಮಂಗಲ ಪ್ರಶ್ನೆ: ಅಲ್ಲೊಂದು ಶತಮಾನಗಳ ಹಿಂದಿನ ದೇವಸ್ಥಾನವಿತ್ತು

By: ಬಾಲರಾಜ್ ತಂತ್ರಿ
Subscribe to Oneindia Kannada

ದೇವಾಲಯದ ಜೀರ್ಣೋದ್ದಾರ, ಗರ್ಭಗುಡಿ, ಪೌಳಿ, ಕಳಸ, ಧ್ವಜಸ್ಥಂಭ ಪುನರ್ ನಿರ್ಮಾಣಕ್ಕೆ ಸಂಬಂಧ ಪಟ್ಟಂತೆ ಅಷ್ಟಮಂಗಲ ಪ್ರಶ್ನೆ, ಆರೂಢಾ ಪ್ರಶ್ನೆಯ ಮೂಲಕ ಪರಿಹಾರ ಕೇಳುವ ಪದ್ದತಿ ಪ್ರಮುಖವಾಗಿ ಕರಾವಳಿ ಜಿಲ್ಲೆಗಳಲ್ಲಿ ಮತ್ತು ಕೇರಳದಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿದ್ದವು.

ಈ ಪ್ರಶ್ನಾ ಪದ್ದತಿಯ ಮೂಲಕ ಸಿಗುವ ಪರಿಹಾರ ಹೆಚ್ಚುಕಮ್ಮಿ ಕರಾರುವಕ್ಕಾಗಿರುತ್ತದೆ ಎನ್ನುವ ನಂಬಿಕೆಯ ನಡುವೆ, ಇದು ಕ್ರಮೇಣವಾಗಿ ಕರ್ನಾಟಕದ ಇತರ ಭಾಗಗಳಲ್ಲೂ ಹೆಚ್ಚುಹೆಚ್ಚು ಪ್ರಸಿದ್ದಿ ಪಡೆಯಲಾರಂಭಿಸಿತು. (ನಂಜನಗೂಡಲ್ಲಿ ಅಷ್ಟಮಂಗಲ ಪರಿಹಾರ ಪೂಜೆ)

ಅದಕ್ಕೆ ಕೊಡಬಹುದಾದ ಲೇಟೆಸ್ಟ್ ಉದಾಹರಣೆಯೆಂದರೆ ನಂಜನಗೂಡು ನಂಜುಡೇಶ್ವರನ ಸನ್ನಿಧಾನದಲ್ಲಿ ಕೆಲವು ದಿನಗಳ ಹಿಂದೆ ನಡೆದ ಅಷ್ಟಮಂಗಲ ಪ್ರಶ್ನೆ. ಇದರಲ್ಲಿ ಸಿಕ್ಕ ಪರಿಹಾರದಂತೆ ಮುಜರಾಯಿ ವ್ಯಾಪ್ತಿಗೆ ಬರುವ ಈ ದೇವಾಲಯದಲ್ಲಿ ಅತ್ಯಂತ ಶಾಸ್ತ್ರೋಕ್ತವಾಗಿ ನಡೆದ ಧಾರ್ಮಿಕ ವಿದಿವಿಧಾನ ಪ್ರಕ್ರಿಯೆಗಳು. (ಹೊಸವರ್ಷದಲ್ಲಿ ಕೋಡಿಶ್ರೀಗಳ ಮೊದಲ ಭವಿಷ್ಯ)

ವಿಚಾರಕ್ಕೆ ಬರುವುದಾದರೆ, ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಜನತೆ ಒಂದಲ್ಲೊಂದು ಕಾರಣದಿಂದ ನೆಮ್ಮದಿಯಿಂದ ಇರಲಾಗುತ್ತಿರಲಿಲ್ಲ, ಕೈ ಹಿಡಿದ ಕೆಲಸ ಸಂಪೂರ್ಣವಾಗಿ ಕೈಹಿಡಿಯುತ್ತಿರಲಿಲ್ಲ. (ಐತಿಹಾಸಿಕ ದೇವಾಲಯದ ಬ್ರಹ್ಮಕಲಶದ ಚಿತ್ರಗಳು)

ದೇವರು ಮತ್ತು ಆ ಭಾಗದಲ್ಲಿ ಹೆಚ್ಚಾಗಿ ನಂಬುವ ದೈವಗಣಗಳಿಗೆ ಪೂಜೆ, ಪುನಸ್ಕಾರ, ಕೋಲ, ಭೋಗ ಸೇವೆ ಕೊಟ್ಟರೂ ಆರಕ್ಕೇರದೇ ಮೂರಕ್ಕಿಳಿಯದಂತಾಗಿತ್ತು ಇಲ್ಲಿನ ಗ್ರಾಮಸ್ಥರ ಸ್ಥಿತಿ. ಕೊನೆಗೆ, ಊರಿನ ಸಮಸ್ತರು, ಮುಖಂಡರು ಅಷ್ಟಮಂಗಲ ಪ್ರಶ್ನೆ ಕೇಳುವ ನಿರ್ಧಾರಕ್ಕೆ ಬಂದರು. ಕುತೂಹಲಕಾರಿಯಾದ ಈ ಘಟನೆಯನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.. (ಚಿತ್ರ: ಅಶೋಕ್ ಆಚಾರ್ಯ)

ಶ್ರೀಧರ ಗೋರೆ ಅವರ ನೇತೃತ್ವ

ಶ್ರೀಧರ ಗೋರೆ ಅವರ ನೇತೃತ್ವ

ಗ್ರಾಮಸ್ಥರ ನಿರ್ಧಾರದಂತೇ, ದಕ್ಷಿಣಕನ್ನಡ ಜಿಲ್ಲೆ ನೆಲ್ಯಾಡಿಯ (ಮಂಗಳೂರಿನಿಂದ ಬೆಂಗಳೂರಿಗೆ ಬರುವಾಗ ಶಿರಾಡಿ ಘಾಟ್ ಹತ್ತುವ ಮುನ್ನ ಸಿಗುವ ಊರು) ಶ್ರೀಧರ ಗೋರೆ ಅವರ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆ ಇಡಲಾಯಿತು. ಪ್ರಶ್ನೆಯಲ್ಲಿ ಹೊರಬಿದ್ದ ಉತ್ತರವೆಂದರೆ ಈ ಭಾಗದಲ್ಲಿ ಶತಮಾನಗಳ ಹಿಂದಿನ ದೇವಸ್ಥಾನವೊಂದಿತ್ತು ಎನ್ನುವುದು.

ನಾವೂರಿನಿಂದ ಬಂಗಾಡಿ-ಕಲ್ಲೂರು ಹೋಗುವ ಮಾರ್ಗ

ನಾವೂರಿನಿಂದ ಬಂಗಾಡಿ-ಕಲ್ಲೂರು ಹೋಗುವ ಮಾರ್ಗ

ಬೆಳ್ತಂಗಡಿ ತಾಲೂಕು ನಾವೂರಿನಿಂದ ಬಂಗಾಡಿ-ಕಲ್ಲೂರು ಹೋಗುವ ಮಾರ್ಗದಲ್ಲಿ ಸುಮಾರು 800 ವರ್ಷಗಳ ಇತಿಹಾಸವಿರುವ ಬಾಲ ಗೋಪಾಲಕೃಷ್ಣನ ದೇವಾಲಯವೊಂದಿತ್ತು. ಮುನ್ನೂರು ವರ್ಷಗಳ ಹಿಂದೆ ದೇವರಿಗೆ ಕೊನೆಯ ಪೂಜೆ ನಡೆದಿತ್ತು ಎನ್ನುವುದು ಅಷ್ಟಮಂಗಲ ಪ್ರಶ್ನೆಯಲ್ಲಿ ಹೊರಬಿದ್ದಂತಹ ಸತ್ಯ.

ಕಲ್ಲಿನ ಕಂಬಗಳ ಕುರುಹು

ಕಲ್ಲಿನ ಕಂಬಗಳ ಕುರುಹು

ಈಗ ಅಲ್ಲಿ ಕೆಲವೊಂದು ಕಲ್ಲಿನ ಕಂಬಗಳ ಕುರುಹುಗಳು ಮಾತ್ರ ಉಳಿದಿವೆ. ಮುನ್ನೂರು ವರ್ಷಗಳ ಹಿಂದೆ ಪೂಜೆ ಸಲ್ಲಿಸಿದ ಅರ್ಚಕರು ವಿಗ್ರಹ ಮೂರ್ತಿಯನ್ನು ಕೊಂಡೊಯ್ದಿದ್ದಾರೆ. ಹಾಗಾಗಿ ಮೂರ್ತಿಯನ್ನು ಪತ್ತೆಹಚ್ಚುವ ಕೆಲಸಕ್ಕೆ ಮುಂದಾಗದೇ, ಆ ಜಾಗದಲ್ಲಿ ಬಾಲಕೃಷ್ಣನ ವಿಗ್ರಹ, ಅದಕ್ಕೊಂದು ಗರ್ಭಗುಡಿ, ಪೌಳಿ ಮತ್ತು ಧ್ವಜಸ್ಥಂಭವನ್ನು ಅಷ್ಟಮಂಗಲ ಪ್ರಶ್ನೆ ಕೇಳಿದ ಐದು ವರ್ಷದೊಳಗೆ ನಿರ್ಮಿಸುವಂತೆ ಶ್ರೀಧರ ಗೋರೆಯವರು ಪರಿಹಾರ ನೀಡುತ್ತಾರೆ.

ಐದು ಗ್ರಾಮದ ಗ್ರಾಮದೇವರು

ಐದು ಗ್ರಾಮದ ಗ್ರಾಮದೇವರು

ಇದು ಒಂದು ಗ್ರಾಮಕ್ಕೆ ಸೀಮಿತವಾದ ದೇವರಲ್ಲ, ಐದು ಗ್ರಾಮದ ಗ್ರಾಮದೇವರು ಎನ್ನುವ ಶ್ರೀಧರ ಗೋರೆಯವರು ಸೂಚಿಸಿದ ಪರಿಹಾರದಂತೆ (ಐದು ವರ್ಷದ ಹಿಂದೆ ನಡೆದಿದ್ದ ಅಷ್ಟಮಂಗಲ ಪ್ರಶ್ನೆ) ಗ್ರಾಮಸ್ಥರು, ಊರಿನ ಸಮಸ್ಥರು ದೇವಾಲಯ ನಿರ್ಮಾಣಕ್ಕೆ ಸಮ್ಮತಿ ಸೂಚಿಸುತ್ತಾರೆ. ಅಷ್ಟಮಂಗಲ ಪ್ರಶ್ನೆಯ ವೇಳೆ ಸಿಗುವ ಪರಿಹಾರಕ್ಕೆ ಅಲ್ಲೇ ಒಪ್ಪಿಗೆ ಸೂಚಿಸಬೇಕು ಎನ್ನುವುದು ಇದರ ಪದ್ದತಿ.

ಅನ್ಯಕೋಮಿನವರ ಸ್ವಾಧೀನದಲ್ಲಿದ್ದ ಜಮೀನು

ಅನ್ಯಕೋಮಿನವರ ಸ್ವಾಧೀನದಲ್ಲಿದ್ದ ಜಮೀನು

ದೇವಾಲಯ ನಿರ್ಮಾಣಕ್ಕೆ ಮುಂದಾಗುವ ಗ್ರಾಮಸ್ಥರು ಮೊದಲು ದೇವಾಲಯವಿರುವ ಜಾಗವನ್ನು ಮೊದಲು ಸ್ವಾಧೀನ ಪಡಿಸಿಕೊಳ್ಳಬೇಕಾಗಿರುವುದುದು ಕಾನೂನು. ಈ ದೇವಾಲಯವಿರುವ ಜಾಗ ಅನ್ಯಕೋಮಿನವರ ಸ್ವಾಧೀನದಲ್ಲಿದ್ದವು. ದೇವಾಲಯ ನಿರ್ಮಾಣಕ್ಕೆಂದು ಯಾವುದೇ ತಕರಾರುಯೆತ್ತದೇ ಸುಮಾರು 77 ಸೆಂಟ್ಸ್ ಜಾಗವನ್ನು (ಸೆಂಟ್ಸಿಗೆ ತಲಾ ಮೂವತ್ತು ಸಾವಿರ ರೂಪಾಯಿ ನೀಡಿ) ಜೀರ್ಣೋದ್ಧಾರ ಮಂಡಳಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು.

ಎರಡು ಕೋಟಿ ಅಂದಾಜು ವೆಚ್ಚ

ಎರಡು ಕೋಟಿ ಅಂದಾಜು ವೆಚ್ಚ

ಸುಮಾರು ಎರಡು ಕೋಟಿ ಅಂದಾಜು ವೆಚ್ಚದಲ್ಲಿ ಶಿಖರವೇರಂಭಿಸಲಾರಂಭಿಸಿದ ಈ ದೇವಾಲಯದ ಜೀರ್ಣೋದ್ಧಾರಕ್ಕೆ ಪ್ರವಾಹೋಪಾದಿಯಲ್ಲಿ ಭಕ್ತಾದಿಗಳು ವಿವಿಧ ರೂಪದಲ್ಲಿ ದೇಣಿಗೆ ನೀಡಿ, ಪ್ರಮುಖವಾಗಿ ಆರ್ಥಿಕ ವಿಚಾರದಲ್ಲಿ ಬಾಲಗೋಪಾಲಕೃಷ್ಣನನ್ನು ಊರಿಗೆ ಪ್ರೀತಿಯಿಂದ ಬರಮಾಡಿಕೊಂಡರು.

ಒಂದೇ ಗ್ರಾಮದ ಜನರ 1.3 ಕೋಟಿ ದೇಣಿಗೆ

ಒಂದೇ ಗ್ರಾಮದ ಜನರ 1.3 ಕೋಟಿ ದೇಣಿಗೆ

ಅಂದಾಜು ಎರಡು ಕೋಟಿ ಬಜೆಟಿನ ಈ ಧಾರ್ಮಿಕ ಕೆಲಸಕ್ಕೆ ಒಂದೇ ಗ್ರಾಮದ ಜನರು 1.3 ಕೋಟಿ ದೇಣಿಗೆ ನೀಡಿದ್ದು ವಿಶೇಷ. ಜೊತೆಗೆ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಹತ್ತು ಲಕ್ಷ ರೂಪಾಯಿ ದೇವಾಲಯದ ವತಿಯಿಂದ ನೀಡಿದರು ಎಂದು ಜೀರ್ಣೋದ್ದಾರ ಕಮಿಟಿಯ ಕಾರ್ಯಾಧ್ಯಕ್ಷರಾದ ಡಾ. ಪ್ರದೀಪ್ 'ಒನ್ ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ.

ನಭೂತೋ.. ನಭಿಷ್ಯತಿ

ನಭೂತೋ.. ನಭಿಷ್ಯತಿ

ಗುರುರಾಜ ಶಬರಾಯ, ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆದ ಬ್ರಹ್ಮಕಲಶ, ಶಿಲಾ ಗರ್ಭಗುಡಿ ಪ್ರತಿಷ್ಠಾನ, ದೈವಸಂಸ್ಥಾನದ ಪುನರ್ ಪ್ರತಿಷ್ಠೆ ಮುಂತಾದ ಧಾರ್ಮಿಕ ಕಾರ್ಯಕ್ರಮಕ್ಕೆ ಇಡೀ ಬೆಳ್ತಂಗಡಿ ತಾಲೂಕಿನ ಜನ ಕೈಜೋಡಿಸಿದ್ದು ವಿಶೇಷ. ಈ ಭಾಗದಲ್ಲಿ ನಭೂತೋ.. ನಭಿಷ್ಯತಿ ಎನ್ನುವ ರೀತಿಯಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮ ಜನವರಿ 26ರಿಂದ 31ರ ವರೆಗೆ ನಡೆಯಿತು. ಸುಮಾರು ಅರವತ್ತು ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 ಆಸ್ತಿಕರು ಸಮಯಾವಕಾಶ ಇದ್ದಾಗ ಒಮ್ಮೆ ಭೇಟಿ ನೀಡಿ

ಆಸ್ತಿಕರು ಸಮಯಾವಕಾಶ ಇದ್ದಾಗ ಒಮ್ಮೆ ಭೇಟಿ ನೀಡಿ

ನೂತನವಾಗಿ ನಿರ್ಮಾಣವಾದ ಈ ದೇವಾಲಯದಲ್ಲಿ ಬಾಲಗೋಪಾಲಕೃಷ್ಣ, ಗಣಪತಿ ಮತ್ತು ದೈವ ಉಳ್ಳಾಕ್ಳುಗಳಿಗೆ ಗರ್ಭಗುಡಿ ನಿರ್ಮಿಸಲಾಗಿದೆ. ಮಂಗಳೂರಿನಿಂದ ಅಂದಾಜು ಸುಮಾರು 60-70 ಕಿಲೋಮೀಟರ್ ದೂರದಲ್ಲಿರುವ ಈ ಕಾರ್ಣಿಕ ದೇವಾಲಯಕ್ಕೆ ಆಸ್ತಿಕರು ಸಮಯಾವಕಾಶ ಇದ್ದಾಗ ಒಮ್ಮೆ ಭೇಟಿ ನೀಡಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
800 year old Gopalakrishna temple renovation in Belthangady, DK. Temple renovated based on the result from Asthamangala Prashne.
Please Wait while comments are loading...