7th Pay Commission: ನಿವೃತ್ತ ಸರ್ಕಾರಿ ನೌಕರರಿಗೆ ಸಿಗುವ ವೈದ್ಯಕೀಯ ಸೌಲಭ್ಯಗಳು
ಬೆಂಗಳೂರು, ಸೆಪ್ಟೆಂಬರ್ 12: ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಸರ್ಕಾರಿ ನೌಕರರಿಗೆ ಮಾತ್ರವಲ್ಲ ನಿವೃತ್ತ ನೌಕರರಿಗೂ ಅನೇಕ ಶಿಫಾರಸುಗಳನ್ನು ಮಾಡಿದೆ. ಆಯೋಗ ಸರ್ಕಾರಕ್ಕೆ ಸಲ್ಲಿಕೆ ಮಾಡಿರುವ 558 ಪುಟಗಳ ಸಂಪುಟ-1ರ ವರದಿಯಲ್ಲಿ ನಿವೃತ್ತ ಸರ್ಕಾರಿ ನೌಕರರ ವೈದ್ಯಕೀಯ ಸೌಲಭ್ಯಗಳ ಕುರಿತು ವಿವರಣೆಯನ್ನು ನೀಡಿದೆ. ನಿವೃತ್ತ ನೌಕರರು, ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರಿಂದ ಹಲವು ಮನವಿಗಳನ್ನು ಸ್ವೀಕರಿಸಿರುವ ಆಯೋಗ ಸರ್ಕಾರಕ್ಕೆ ಶಿಫಾರಸುಗಳನ್ನು ಮಾಡಿದೆ. ಅವುಗಳ ಮಾಹಿತಿ ಇಲ್ಲಿದೆ.
ನಿವೃತ್ತ ಸಿಬ್ಬಂದಿಗೆ ವೈದ್ಯಕೀಯ ಸೌಲಭ್ಯಗಳು ಎಂಬ ಶೀರ್ಷಿಕೆಯಡಿ ರಾಜ್ಯ 7ನೇ ವೇತನ ಆಯೋಗ ಹಲವು ಅಂಶಗಳನ್ನು ದಾಖಲಿಸಿದೆ. ಇತ್ತೀಚಿನ ದಿನಗಳಲ್ಲಿ ದೀರ್ಘ ಆಯುಸ್ಸು ಮತ್ತು ವೈದ್ಯಕೀಯ ಸೇವೆಗಳ ವೆಚ್ಚದ ಹೆಚ್ಚಳದ ಕಾರಣದಿಂದ ಮತ್ತು ವಯೋ ಸಹಜ ಪರಿಣಾಮವಾಗಿ ದೀರ್ಘ ಕಾಲಿಕವಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಹ ನಿವೃತ್ತ ನೌಕರರಿಗೆ ಗುಣಮಟ್ಟದ ಆರೋಗ್ಯ ಸೌಲಭ್ಯಗಳು ದೊರಕುವುದನ್ನು ಖಚಿತಪಡಿಸಿಕೊಳ್ಳುವ ವಿಷಯವು ತೀವ್ರ ಗಮನ ಸೆಳೆದಿದೆ. ಪ್ರಸ್ತುತ, ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರು ಯಾವುದೇ ವ್ಯದ್ಯಕೀಯ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುವುದಿಲ್ಲ.

ಇತರೆ ರಾಜ್ಯಗಳಲ್ಲಿ ಮತ್ತು ಕೇಂದ್ರ ಸರ್ಕಾರದ ನಿವೃತ್ತ ನೌಕರರಿಗೆ ನೀಡಲಾಗುವ ಮಾಸಿಕ ವೈದ್ಯಕೀಯ ಭತ್ಯೆಯ ಮಾದರಿಯಲ್ಲಿಯೇ ತಮಗೂ ಸಹ ವೈದ್ಯಕೀಯ ಭತ್ಯೆ ಮಂಜೂರು ಮಾಡುವಂತೆ ಹಲವು ನಿವೃತ್ತ ನೌಕರರ ಸಂಘಗಳಿಂದ ಮತ್ತು ಸಂಸ್ಥೆಗಳಿಂದ ಹಾಗೂ ವೈಯಕ್ತಿಕವಾಗಿ ನಿವೃತ್ತ ನೌಕರರಿಂದ ಮನವಿಗಳನ್ನು ಆಯೋಗವು ಸ್ವೀಕರಿಸಿರುತ್ತದೆ ಎಂದು ಆಯೋಗ ವರದಿಯಲ್ಲಿ ಹೇಳಿದೆ.
ಅನೇಕ ನಿವೃತ್ತ ನೌಕರರು ತಮ್ಮ ವೈದ್ಯಕೀಯ ವೆಚ್ಚವನ್ನು ಭರಿಸಲು ನಿವೃತ್ತಿ ವೇತನವನ್ನೇ ಅವಲಂಬಿಸಿರುವುದರಿಂದ, ನಿವೃತ್ತಿ ವೇತನದಾರರಿಗೆ ಮತ್ತು ಕುಟುಂಬ ನಿವೃತ್ತಿ ವೇತನದಾರರಿಗೆ ಆಸ್ಪತ್ರೆಗೆ ದಾಖಾಲಾಗುವುದಕ್ಕೆ ನಗದು ರಹಿತ ಆರೋಗ್ಯ ಯೋಜನೆಯ ವಿಸ್ತರಣೆಯ ಜೊತೆಗೆ ಮಾಸಿಕ ರೂ. 1,000 ಗಳ ವೈದ್ಯಕೀಯ ಭತ್ಯೆಯನ್ನು ಮಂಜೂರು ಮಾಡುವಂತೆ ಕೋರಿ ಕೆಎಸ್‌ಜೆಆರ್‌ಇ ಮನವಿ ಮಾಡಿರುತ್ತದೆ.
ವೈದ್ಯಕೀಯ ಭತ್ಯೆ ಶಿಫಾರಸು: ಪ್ರಸ್ತುತ ಭಾರತ ಸರ್ಕಾರ, ಹಿಮಾಚಲ ಪ್ರದೇಶ, ಆಂಧ್ರ ಪ್ರದೇಶ ಮತ್ತು ಕೇರಳ ರಾಜ್ಯಗಳಲ್ಲಿ ಕ್ರಮವಾಗಿ ಮಾಸಿಕ ರೂ. 1000, ರೂ. 500, ರೂ. 500 ಮತ್ತು ರೂ. 300ಗಳನ್ನು ನಿವೃತ್ತಿ ವೇತನದಾರರಿಗೆ ವೈದ್ಯಕೀಯ ಭತ್ಯೆಯಾಗಿ ನೀಡಲಾಗುತ್ತಿದೆ. ನಿವೃತ್ತ ವೇತನದಾರರಿಗೆ ಅವರ ವೈದ್ಯಕೀಯ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು, ಪೂರ್ಣವಾಗಿ ಅಲ್ಲದಿದ್ದರೂ, ಸ್ವಲ್ಪ ಮಟ್ಟಿನ ಆರ್ಥಿಕ ನೆರವು ನೀಡುವುದಕ್ಕೆ ಸೂಕ್ತ ಸಮರ್ಥನೆಯಿದೆಯೆಂದು ನಾವು ಭಾವಿಸುತ್ತೇವೆ ಎಂದು ಆಯೋಗ ಹೇಳಿದೆ.
ನಿವೃತ್ತ ವೇತನದಾರರಿಗೆ ಮತ್ತು ಕುಟುಂಬ ನಿವೃತ್ತ ವೇತನದಾರರಿಗಾಗಿ 'ಸಂಧ್ಯಾಕಿರಣ' ಎಂಬ ಹೆಸರಿನ ಹೊಸ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರವು ಪ್ರಸ್ತಾಪಿಸಿದೆ ಎಂದು ಆಯೋಗಕ್ಕೆ ಮಾಹಿತಿ ಒದಗಿಸಲಾಗಿದೆ ಮತ್ತು ಈ ಹೊಸ ಯೋಜನೆಯ ರೂಪುರೇಷೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅಂತಿಮಗೊಳಿಸಿರುತ್ತದೆ. ಈ ಯೋಜನೆಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಮತ್ತು ಹಣಕಾಸು ಇಲಾಖೆಗಳ ಪರಿಶೀಲನೆಯಲ್ಲಿರುವುದಾಗಿ ತಿಳಿದು ಬಂದಿದೆ. ಒಮ್ಮೆ ಈ ಯೋಜನೆಯು ಅನುಮೋದನೆಗೊಂಡಲ್ಲಿ ಪಿಂಚಣಿದಾರರು ಖಾತ್ರಿಪಡಿಸುವ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಅರ್ಹರಾಗುವ ನಿರೀಕ್ಷೆಯಿದೆ ಎಂದು ಆಯೋಗ ತಿಳಿಸಿದೆ.
ನಿವೃತ್ತಿ ವೇತನದಾರರು ಮತ್ತು ಕುಟುಂಬ ನಿವೃತ್ತಿ ವೇತನದಾರರನ್ನು ಒಳಗೊಳ್ಳುವ ಪ್ರಸ್ತಾವಿತ 'ಸಂಧ್ಯಾಕಿರಣ' ಯೋಜನೆಯನ್ನು ಶೀಘ್ರವಾಗಿ ಜಾರಿಗೊಳಿಸಲು ಆಯೋಗವು ಒತ್ತಾಯಿಸುತ್ತದೆ. ಈ ಯೋಜನೆಯನ್ನು ಸರ್ಕಾರವು ವಾಸ್ತವವಾಗಿ ಜಾರಿಗೊಳಿಸುವವರೆಗೆ ವೈದ್ಯಕೀಯ ಭತ್ಯೆಯಾಗಿ ಪ್ರತಿ ತಿಂಗಳು ರೂ. 500 ಗಳನ್ನು ಎಲ್ಲಾ ನಿವೃತ್ತಿ ವೇತನದಾರರಿಗೆ ಮತ್ತು ಕುಟುಂಬ ನಿವೃತ್ತಿ ವೇತನದಾರರಿಗೆ ಪಾವತಿಸಲು ಸಹ ಆಯೋಗವು ಶಿಫಾರಸು ಮಾಡುತ್ತದೆ ಎಂದು ವರದಿಯಲ್ಲಿ ಹೇಳಿದೆ.
ಅಂತ್ಯ ಸಂಸ್ಕಾರದ ವೆಚ್ಚ: ಕೆಎಸ್‌ಜಿಆರ್‌ಇಎ, ನಿವೃತ್ತ ನೌಕರರಿಗೆ ಮತ್ತು ಕುಟುಂಬ ವೇತನದಾರರಿಗೆ ಅಂತ್ಯಕ್ರಿಯೆಯ ವೆಚ್ಚಕ್ಕಾಗಿ ರೂ. 25,000 ಗಳನ್ನು ಪಾವತಿಸಲು ಮನವಿಯನ್ನು ಮಾಡಿರುತ್ತದೆ. ಪ್ರಸ್ತುತ, ಕರ್ನಾಟಕದಲ್ಲಿ ಸರ್ಕಾರಿ ಸೇವೆ ಸಲ್ಲಿಸುತ್ತಿರುವ ನೌಕರರು ಅಂತಿಮ ವಿಧಿ ವಿಧಾನಗಳ ವೆಚ್ಚಗಳನ್ನು ನಿರ್ವಹಿಸಲು ರೂ. 5,000 ದಿಂದ ರೂ.15,000 ಗಳವರೆಗಿನ ಪಾವತಿಗೆ ಅರ್ಹರಾಗಿರುತ್ತಾರೆ.
ಈ ಅವಕಾಶವನ್ನು ನಿವೃತ್ತಿ ವೇತನದಾರರ ಕುಟುಂಬಗಳಿಗೂ ಸಹ ವಿಸ್ತರಿಸಬೇಕು ಮತ್ತು ನಿವೃತ್ತಿ ವೇತನದಾರನು ಮರಣ ಹೊಂದಿದಂತಹ ಪ್ರಕರಣಗಳಲ್ಲಿ ಅಂತಿಮ ವಿಧಿ-ವಿಧಾನಗಳ ವೆಚ್ಚಗಳನ್ನು ನಿರ್ವಹಿಸುವುದಕ್ಕಾಗಿ ಆತ ಅಥವಾ ಆಕೆಯ ನಾಮ ನಿರ್ದೇಶಿತರಿಗೆ ರೂ. 10,000 ಗಳ ಮೊತ್ತವನ್ನು ಪಾವತಿಸಲು ಆಯೋಗವು ಶಿಫಾರಸು ಮಾಡಿದೆ.












Click it and Unblock the Notifications