7th Pay Commission: ಪಿಂಚಣಿ, ನಾಮ ನಿರ್ದೇಶನದ ಕುರಿತು ಆಯೋಗದ ಶಿಫಾರಸುಗಳು
ಬೆಂಗಳೂರು, ಅಕ್ಟೋಬರ್ 15: ಕರ್ನಾಟಕ ಸರ್ಕಾರಕ್ಕೆ ವರದಿ ನೀಡಿರುವ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಪಿಂಚಣಿ, ನಾಮ ನಿರ್ದೇಶ, ಎನ್‌ಪಿಸ್ ಮತ್ತು ಒಪಿಎಸ್ ಕುರಿತು ಹಲವು ಶಿಫಾರಸುಗಳನ್ನು ಮಾಡಿದೆ. 558 ಪುಟಗಳ ಸಂಪುಟ-1ರ ವರದಿಯನ್ನು ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಿದೆ. ವರದಿಯಲ್ಲಿ ಮಹಿಳಾ ಸರ್ಕಾರಿ ನೌಕರರು/ ಪಿಂಚಣಿದಾರರಿಂದ ಕುಟುಂಬ ಪಿಂಚಣಿಗಾಗಿ ತಮ್ಮ ಪತಿಯ ಬದಲು ಮಕ್ಕಳ ನಾಮ ನಿರ್ದೇಶನ ಮಾಡುವ ಕುರಿತು ಶಿಫಾರಸು ಮಾಡಲಾಗಿದೆ, ಅದರ ವಿವರಗಳು ಇಲ್ಲಿವೆ.
ವರದಿಯಲ್ಲಿ ಆಯೋಗ ಸರ್ಕಾರಗಳು ಎನ್‌ಪಿಎಸ್ ಅನ್ನು ಹೆಚ್ಚು ಆಕರ್ಷಕವಾಗಿರುವಂತೆ ಮಾಡಲು ಪಯತ್ನಿಸುತ್ತಿವೆ. ಕೇಂದ್ರ ಸರ್ಕಾರವು ತನ್ನ ವಂತಿಗೆಯನ್ನು ಶೇ.10 ರಿಂದ ಶೇ.14ಕ್ಕೆ ಹೆಚ್ಚಿಸಿದೆ ಮತ್ತು ಇದನ್ನು ಕೆಲ ರಾಜ್ಯ ಸರ್ಕಾರಗಳು ಅನುಕರಿಸುತ್ತಿದ್ದು, ವಾಸ್ತವವಾಗಿ ಇದನ್ನು ಎಲ್ಲಾ ಸರ್ಕಾರಿ ನೌಕರರು ಅಳವಡಿಸಿಕೊಳ್ಳಬೇಕು. ಅಲ್ಲದೆ ನೌಕರರಿಗೆ ತಮ್ಮ ನಿಧಿ ನಿರ್ವಾಹಕರನ್ನು ಮತ್ತು ಸ್ವತ್ತಿನ ಹಂಚಿಕೆಯನ್ನು ಆಯ್ಕೆ ಮಾಡಿಕೊಳ್ಳಲು ಸಹ ಅನುಮತಿಸಲಾಗಿದೆ ಎಂದು ಹೇಳಿದೆ.

ಅಲ್ಲದೆ, ಪಿಎಫ್‌ಆರ್‌ಡಿಎಯು ದಿನಾಂಕ 27.10.2023 ರಂದು ಸುತ್ತೋಲೆಯೊಂದನ್ನು ಹೊರಡಿಸಿ ಎನ್‌ಪಿಎಸ್ ಚಂದಾದಾರರು ಅವರ ಆಯ್ಕೆಯಂತೆ ಅವರ ಸಂಚಿತ ಪಿಂಚಣಿಯ ಮೊತ್ತದ ಶೇ. 60ರಷ್ಟನ್ನು ಮಾಸಿಕವಾಗಿ, ತ್ರೈಮಾಸಿಕವಾಗಿ, ಆರು ತಿಂಗಳಿಗೆ ಅಥವಾ ವಾರ್ಷಿಕ ಆಧಾರದ ಮೇಲೆ 75 ವರ್ಷ ವಯಸ್ಸಿನವರೆಗೆ SLW facility ಮೂಲಕ ಹಿಂತೆಗೆದುಕೊಳ್ಳಬಹುದಾಗಿ ತಿಳಿಸಿರುತ್ತದೆ.
ಬಹುಶಃ ಪಿಎಫ್‌ಆರ್‌ಡಿಎ ನಿರ್ಧರಿಸಿದ ಎನ್‌ಪಿಎಸ್ ಅಥವಾ ತಮ್ಮದೆ ಸ್ವಂತ ಯೋಜನೆಯನ್ನು ರೂಪಿಸುವ ಆಯ್ಕೆ ಮಾಡಲು ರಾಜ್ಯಗಳಿಗೆ ಅವಕಾಶ ನೀಡುವ ಅವಶ್ಯಕತೆಯಿದೆ. ಉದಾಹರಣೆಗೆ ಆಂಧ್ರ ಪ್ರದೇಶವು ಮಿಶ್ರ ಯೋಜನೆಯೊಂದನ್ನು ಪರಿಚಯಿಸಿದ್ದು, ಅದು, ವಂತಿಗೆ ಖಾತರಿ ಪಿಂಚಣಿ ಯೋಜನೆ (ಜಿಪಿಎಸ್)ಯಾಗಿದ್ದು, ನೌಕರನು ಪಡೆಯುವ ಅಂತಿಮ ವೇತನದ ಅಂದಾಜು ಶೇ.50 ಪಿಂಚಣಿ ಪ್ರಮಾಣದ ಖಾತ್ರಿಯ ಮೂಲಕ ನಡುವಿನ ದಾರಿಯನ್ನು ತೋರಿಸುತ್ತದೆ.
ಇದರಲ್ಲಿ ಯಾವುದೇ ಕೊರತೆ ಉಂಟಾದಲ್ಲಿ ಆ ಕೊರತೆಯನ್ನು ರಾಜ್ಯ ಸರ್ಕಾರವು ಭರಿಸುತ್ತದೆ. ಒಂದು ಅಂದಾಜಿನ ಲೆಕ್ಕಾಚಾರವು ಸೂಚಿಸುವಂತ ಕೇಂದ್ರ ಸರ್ಕಾರದ ಯೋಜನೆಯ ಅನುಸಾರ, ನೌಕರನು ಅಂತಿಮವಾಗಿ ಪಡೆಯುವ ವೇತನದ ಶೇ.40 ರಷ್ಟು ಎನ್‌ಪಿಎಸ್ ಪಿಂಚಣಿಯಾಗಿರುತ್ತದೆ. ಆಂಧ್ರ ಪ್ರದೇಶದ ಮಿಶ್ರ ಯೋಜನೆಯ ಅಡಿಯಲ್ಲಿ ನೌಕರನು ಪಡೆಯುವ ಅಂತಿಮ ವೇತನದ ಶೇ.50ರಷ್ಟು ಪಿಂಚಣಿಯನ್ನು ಖಾತ್ರಿ ಪಡಿಸಲು ರಾಜ್ಯ ಸರ್ಕಾರವು ಕೇವಲ ಉಳಿದ ಶೇ.10 ರಷ್ಟು ಮೊತ್ತವನ್ನು ಭರಿಸುವುದು ಅಗತ್ಯವಾಗಿರುತ್ತದೆ.
ಕರ್ನಾಟಕದಲ್ಲಿ ಸರ್ಕಾರಿ ನೌಕರರಿಗೆ ಓಪಿಎಸ್ ಮರುಜಾರಿಗೊಳಿಸುವ ವಿಷಯವನ್ನು ಅಧ್ಯಯನ ಮಾಡುವುದಕ್ಕೆ ಪ್ರತ್ಯೇಕ ಸಮಿತಿಯೊಂದನ್ನು ರಚಿಸಿದೆ. ಇದನ್ನು ಗಮನಿಸಿರುವ ಆಯೋಗವು ಈ ವಿಷಯದ ಮೇಲೆ ಯಾವುದೇ ಶಿಫಾರಸ್ಸುಗಳನ್ನು ಮಾಡುವುದು ಸೂಕ್ತವಲ್ಲ ಎಂದು ಭಾವಿಸುತ್ತದೆ. ಆದ್ದರಿಂದ, ರಾಜ್ಯ ಸರ್ಕಾರವು ಈ ವಿಷಯವನ್ನು ಪರಿಶೀಲಿಸುವ ಮತ್ತು ಸಾಧ್ಯವಾದಷ್ಟು ಬೇಗ ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳುವ ಅಗತ್ಯವಿರುತ್ತದೆ ಎಂಬ ಅಭಿಪ್ರಾಯದೊಂದಿಗೆ ಎನ್‌ಪಿಎಸ್‌ಗೆ ಸಂಬಂಧಿಸಿದ ಎಲ್ಲಾ ಮನವಿಗಳನ್ನು ರಾಜ್ಯ ಹಣಕಾಸು ಇಲಾಖೆಗೆ ಕಳುಹಿಸಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ನಾಮ ನಿರ್ದೇಶನ: ಆಯೋಗ ತನ್ನ ವರದಿಯಲ್ಲಿ ಮಹಿಳಾ ಸರ್ಕಾರಿ ನೌಕರರು/ಪಿಂಚಣಿದಾರರಿಂದ ಕುಟುಂಬ ಪಿಂಚಣಿಗಾಗಿ ತಮ್ಮ ಪತಿಯ ಬದಲು ಮಕ್ಕಳ ನಾಮ ನಿರ್ದೇಶನದ ಕುರಿತು ಶಿಫಾರಸುಗಳನ್ನು ಮಾಡಿದೆ.
ಕೇಂದ್ರ ಸರ್ಕಾರವು, ಕೇಂದ್ರ ನಾಗರಿಕ ಸೇವೆಗಳು (ಪಿಂಚಣಿ) ನಿಯಮಾವಳಿಗಳು, 2021ರ ನಿಯಮ 50ಕ್ಕೆ ತಿದ್ದುಪಡಿ ಮಾಡಿರುವುದನ್ನು ಆಯೋಗವು ಸಂಕ್ಷಿಪ್ತವಾಗಿ ಚರ್ಚಿಸಲು ಬಯಸುತ್ತದೆ. ಹಿಂದೆ, ಈ ನಿಯಮವು ಸರ್ಕಾರಿ ನೌಕರರ ನಿಧನರಾದಲ್ಲಿ, ಆತ ಅಥವಾ ಆಕೆಯ ಪತಿ/ ಪತ್ನಿಗೆ (spouse) ಕುಟುಂಬ ನಿವೃತ್ತಿ ವೇತನವನ್ನು ಪಾವತಿಸಲಾಗುತ್ತಿತ್ತು ಮತ್ತು ಪತಿ/ ಪತ್ನಿ ನಿಧನ ಹೊಂದಿದಲ್ಲಿ ಅಥವಾ ಅನರ್ಹರಾದಲ್ಲಿ, ಅವರ ಮಕ್ಕಳು ಕುಟುಂಬ ನಿವೃತ್ತಿ ವೇತನ ಪಡೆಯಲು ಅರ್ಹರಾಗುತ್ತಿದ್ದರು.
ಪ್ರಸ್ತಾವಿತ ತಿದ್ದುಪಡಿಯು ಮಹಿಳಾ ಸರ್ಕಾರಿ ನೌಕರರು ಸಕ್ಷಮ ನ್ಯಾಯಾಲಯದಲ್ಲಿ ವಿಚ್ಛೇದನ ಪ್ರಕ್ರಿಯೆ ಬಾಕಿಯಿರುವಾಗ ಅಥವಾ ಸರ್ಕಾರಿ ನೌಕರರು/ ಮಹಿಳಾ ಪಿಂಚಣಿದಾರರು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅಥವಾ ವರದಕ್ಷಿಣೆ ನಿಷೇಧ ಕಾಯ್ದೆ ಅಥವಾ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ತನ್ನ ಗಂಡನ ವಿರುದ್ಧ ಪ್ರಕರಣವನ್ನು ದಾಖಲು ಮಾಡಿದ್ದಲ್ಲಿ, ಕುಟುಂಬ ಪಿಂಚಣಿಯನ್ನು ಪಡೆಯುವುದಕ್ಕಾಗಿ ಆಕೆಯು ತನ್ನ ಮಗುವನ್ನು/ ಮಕ್ಕಳನ್ನು ನಾಮ ನಿರ್ದೇಶನ ಮಾಡಬಹುದಾಗಿದೆ ಎಂದು ಸೂಚಿಸುತ್ತದೆ.
ಇದೊಂದು ಪ್ರಗತಿಪರ ಹೆಜ್ಜೆಯಾಗಿದ್ದು, ರಾಜ್ಯ ಸರ್ಕಾರವು ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ಪಿಂಚಣಿ) ನಿಯಮಗಳು, 2002ಕ್ಕೆ ತತ್ಸಮಾನ ಅವಕಾಶವನ್ನು ಕಲ್ಪಿಸಬೇಕೆಂದು ಆಯೋಗವು ಶಿಫಾರಸ್ಸು ಮಾಡುತ್ತದೆ ಎಂದು ಹೇಳಿದೆ.












Click it and Unblock the Notifications