7th Pay Commission: ಸರ್ಕಾರಿ ನೌಕರರ ಬೈಕ್ ಮತ್ತು ಕಂಪ್ಯೂಟರ್ ಖರೀದಿಗೆ ಮುಂಗಡ ಹೆಚ್ಚಳ
ಬೆಂಗಳೂರು, ಸೆಪ್ಟೆಂಬರ್ 12: ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಂತೆ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಜಾರಿಗೊಳಿಸುತ್ತಿದೆ. ಆಯೋಗ ಸರ್ಕಾರಕ್ಕೆ ಸಲ್ಲಿಕೆ ಮಾಡಿರುವ 558 ಪುಟಗಳ ಸಂಪುಟ-1ರ ವರದಿಯ ಭಾಗ-5ರಲ್ಲಿ ಸರ್ಕಾರಿ ನೌಕರರ ಸಾಲ ಮತ್ತು ಮುಂಗಡಗಳ ಬಗ್ಗೆ ವಿವರಣೆ ನೀಡಿದೆ. ಇವುಗಳಲ್ಲಿ ಬೈಕ್ ಖರೀದಿ, ಸೈಕಲ್ ಖರೀದಿ, ಕಂಪ್ಯೂಟರ್ ಖರೀದಿಗೆ ಪ್ರಚಲಿತದಲ್ಲಿರುವ ಮುಂಗಡವನ್ನು ಗಮನಿಸಿ ಹೊಸ ಶಿಫಾರಸುಗಳನ್ನು ಮಾಡಲಾಗಿದೆ.
ಆಯೋಗದ ವರದಿಯಲ್ಲಿ ಸಾಲಗಳು ಮತ್ತು ಮುಂಗಡಗಳಲ್ಲಿ ಇವುಗಳನ್ನು ಸೇರಿಸಲಾಗಿದ್ದು, ಎಷ್ಟು ಏರಿಕೆ ಮಾಡಬೇಕು ಎಂದು ಶಿಫಾರಸು ಮಾಡಿದೆ. ಮೋಟಾರು ಸೈಕಲ್/ ಸ್ಕೂಟರ್ ಖರೀದಿಗಾಗಿ ಮುಂಗಡ. ಪ್ರಸ್ತುತದಲ್ಲಿ, ರೂ. 34,300 ಅಥವಾ ಮೇಲ್ಪಟ್ಟ ಮೂಲ ವೇತನವನ್ನು ಪಡೆಯುತ್ತಿರುವ ಸಿಬ್ಬಂದಿಯು, ಮೋಟಾರು ಸೈಕಲ್/ ಸ್ಕೂಟರ್ ಖರೀದಿಸಲು ವಾರ್ಷಿಕ ಶೇ.11.50ರ ಬಡ್ಡಿ ದರದಲ್ಲಿ ಗರಿಷ್ಠ ರೂ. 50,000ಗಳ ಮಿತಿಗೊಳಪಟ್ಟು, ಮೂಲ ವೇತನದ 8 ತಿಂಗಳವರೆಗಿನ ಮುಂಗಡಕ್ಕೆ ಅರ್ಹರಾಗಿರುತ್ತಾರೆ. ಅಸಲನ್ನು 60 ತಿಂಗಳಲ್ಲಿ ಮತ್ತು ಬಡ್ಡಿಯನ್ನು 12 ತಿಂಗಳಲ್ಲಿ ಮರು ಪಾವತಿಸಬೇಕಾಗುತ್ತದೆ.

ಐಸಿ ಇಂಜಿನ್‌ಗಳಿರುವ ದ್ವಿಚಕ್ರ ವಾಹನಗಳಿಗಾಗಿ ಪರಿಷ್ಕೃತ ಗರಿಷ್ಠ ಮೊತ್ತ ರೂ. 80,000ಗಳ ಮಿತಿಗೊಳಪಟ್ಟು ಜಾರಿಯಲ್ಲಿರುವ ಷರತ್ತು ಮತ್ತು ನಿಬಂಧನೆಗಳೊಂದಿಗೆ 8 ತಿಂಗಳ ಪರಿಷ್ಕೃತ ಮೂಲ ವೇಶನದ ಮುಂಗಡವನ್ನು ಮಂಜೂರು ಮಾಡಲು ಆಯೋಗವು ಶಿಫಾರಸು ಮಾಡುತ್ತದೆ.
ಐಸಿ ಇಂಜಿನ್‌ಗಳಿರುವ ದ್ವಿಚಕ್ರ ವಾಹನಗಳಿಗೆ ಅವ್ಯಯವಾಗುವ ಅರ್ಹತೆ ಮತ್ತು ಮರುಪಾವತಿ ಷರತ್ತುಗಳೊಂದಿಗೆ ಗರಿಷ್ಠ ರೂ.1.25 ಲಕ್ಷಗಳ ಮಿತಿಗೊಳಪಟ್ಟು ವಿದ್ಯುತ್ ದ್ವಿಚಕ್ರ ವಾಹನಗಳನ್ನು ಖರೀದಿಸುವುದಕ್ಕಾಗಿ ಮುಂಗಡ ಹಣದ ಪ್ರಮಾಣವನ್ನು ಹೆಚ್ಚಿಸಲು ಸಹ ಆಯೋಗವು ಶಿಫಾರಸು ಮಾಡಿದೆ.
ಬೈಸಿಕಲ್/ ಇ-ಬೈಸಿಕಲ್ ಖರೀದಿಗಾಗಿ ಮುಂಗಡ: ಪ್ರಸ್ತುತದಲ್ಲಿ ರೂ. 28,950 ಅಥವಾ ಮೇಲ್ಪಟ್ಟ ಮೂಲ ವೇತನ ಪಡೆಯುವ ಸಿಬ್ಬಂದಿಯು ಬೈಸಿಕಲ್ ಖರೀದಿಗಾಗಿ ವಾರ್ಷಿಕ ಶೇ.9ರ ಬಡ್ಡಿ ದರದಲ್ಲಿ 20 ತಿಂಗಳ ಮೂಲ ವೇತನದವರೆಗೆ, ಗರಿಷ್ಠ ರೂ. 3000ಗಳ ಮಿತಿಗೊಳಪಟ್ಟು, ಮುಂಗಡ ಹಣಕ್ಕೆ ಅರ್ಹರಾಗಿರುತ್ತಾರೆ. ಅಸಲು ಹಣವನ್ನು 20 ತಿಂಗಳುಗಳಲ್ಲಿ ಮತ್ತು ಬಡ್ಡಿ ಹಣವನ್ನು 10 ತಿಂಗಳುಗಳಲ್ಲಿ ಮರು ಪಾವತಿಸಬೇಕಾಗುತ್ತದೆ.
ಚಾಲ್ತಿಯಲ್ಲಿರುವ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ಬೈಸಿಕಲ್ ಖರೀದಿಗಾಗಿ ರೂ.10,000ಗಳ ಗರಿಷ್ಠ ಮಿತಿಯೊಂದಿಗೆ ಪರಿಷ್ಕೃತ ಮೂಲ ವೇತನದ 20 ತಿಂಗಳುಗಳ ಮುಂಗಡವನ್ನು ಮುಂದುವರೆಸಲು ಆಯೋಗವು ಶಿಫಾರಸ್ಸು ಮಾಡುತ್ತದೆ.
ಬೈಸಿಕಲ್‌ಗಳಿಗೆ ಅನ್ವಯವಾಗುವ ಅರ್ಹತೆ ಮತ್ತು ಮರುಪಾವತಿ ಷರತ್ತುಗಳೊಂದಿಗೆ ವಿದ್ಯುತ್ ಬೈಸಿಕಲ್ ಅನ್ನು ಖರೀದಿಸಲು ಗರಿಷ್ಕ ಮಿತಿ ರೂ. 30,000ಗಳಿಗೆ ಮುಂಗಡದ ಪ್ರಮಾಣವನ್ನು ಹೆಚ್ಚಿಸಲು ಆಯೋಗವು ಶಿಫಾರಸ್ಸು ಮಾಡುತ್ತದೆ.
ಕಂಪ್ಯೂಟರ್ ಖರೀದಿಗಾಗಿ ಮುಂಗಡ: ಪ್ರಸ್ತುತದಲ್ಲಿ ರೂ. 39,800 ಅಥವಾ ಮೇಲ್ಮಟ್ಟ ಮೂಲ ವೇತನ ಪಡೆಯುವ ಸಿಬ್ಬಂದಿಯು ಕಂಪ್ಯೂಟರ್ ಖರೀದಿಗಾಗಿ ವಾರ್ಷಿಕ ಶೇ.8.50 ಬಡ್ಡಿ ದರದಲ್ಲಿ ಮೂಲ ವೇತನದ 72 ತಿಂಗಳವರೆಗಿನ ಗರಿಷ್ಠ ಮೊತ್ತ ರೂ. 40,000 ಮಿತಿ ಅಥವಾ ಕಂಪ್ಯೂಟರ್ ದರ, ಇವೆರಡರಲ್ಲಿ ಯಾವುದು ಕಡಿಮೆಯೋ ಆ ಮೊತ್ತದ ಮುಂಗಡವನ್ನು ಪಡೆಯಲು ಅರ್ಹರಾಗಿರುತ್ತಾರೆ. ಅಸಲನ್ನು 72 ತಿಂಗಳುಗಳಲ್ಲಿ (ಗರಿಷ್ಠ) ಮತ್ತು ಬಡ್ಡಿಯನ್ನು 28 ತಿಂಗಳುಗಳಲ್ಲಿ (ಗರಿಷ್ಠ) ಮರು ಪಾವತಿಸಬೇಕಾಗುತ್ತದೆ.
72 ತಿಂಗಳುಗಳ ಪರಿಷ್ಕೃತ ಮೂಲ ವೇತನವನ್ನು ಉಳಿಸಿಕೊಂಡು, ಗರಿಷ್ಠ ರೂ. 60,000ಗಳಿಗೆ ಮುಂಗಡವನ್ನು ಪರಿಷ್ಕರಿಸಲು ಆಯೋಗವು ಶಿಫಾರಸ್ಸು ಮಾಡುತ್ತದೆ ಮತ್ತು ಅಸಲನ್ನು 36 ತಿಂಗಳಲ್ಲಿ (ಗರಿಷ್ಠ) ಮತ್ತು ಬಡ್ಡಿಯನ್ನು (ಗರಿಷ್ಠ) 12 ತಿಂಗಳಲ್ಲಿ ಮರುಪಾವತಿಸುವ ಷರತ್ತನ್ನು ವಿಧಿಸುವುದು.
ಆರ್. ಸೋಲಾರ್ ವಾಟರ್ ಹೀಟರ್ ಮುಂಗಡ, ಸೋಲಾರ್ ಕುಕ್ಕರ್ ಮುಂಗಡ, ಮೊಪೆಡ್ ಮುಂಗಡ ಮತ್ತು ಮೋಟಾರು ವಾಹನ ದುರಸ್ತಿ ಮುಂಗಡ, ಉಪಕರಣಗಳ ಮುಂಗಡಗಳನ್ನು ಮುಂದುವರೆಸದೇ ಇರುವುದಕ್ಕೆ ಆಯೋಗವು ಶಿಫಾರಸು ಮಾಡಿದೆ.












Click it and Unblock the Notifications