7th Pay Commission: ಸರ್ಕಾರಿ ನೌಕರರ ಪ್ರಭಾರ, ನಿಯೋಜನೆ, ಇತರ ಭತ್ಯೆ ಎಷ್ಟು ಏರಿಕೆ?
ಬೆಂಗಳೂರು, ಸೆಪ್ಟೆಂಬರ್ 02: ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿಯನ್ನು ಕರ್ನಾಟಕ ಸರ್ಕಾರ ಜಾರಿಗೊಳಿಸಿದೆ. ವರದಿ ಜಾರಿ ಬಳಿಕ ಸರ್ಕಾರಿ ನೌಕರರ ವೇತನ ಮಾತ್ರ ಏರಿಕೆಯಾಗುವುದಿಲ್ಲ. ವಿವಿಧ ಭತ್ಯೆಗಳು ಸಹ ಹೆಚ್ಚಳವಾಗಲಿದೆ. ಆಯೋಗ ತನ್ನ 558 ಪುಟಗಳ ಸಂಪುಟ-1ರ ವರದಿಯಲ್ಲಿ ಭತ್ಯೆಗಳ ಹೆಚ್ಚಳದ ಕುರಿತು ರಾಜ್ಯ ಸರ್ಕಾರಕ್ಕೆ ಹಲವು ಶಿಫಾರಸುಗಳನ್ನು ಮಾಡಿದೆ. ಪ್ರಭಾರ ಭತ್ಯೆ, ಅನ್ಯ ಸೇವೆ ಭತ್ಯೆ, ನಿಯೋಜನೆ ಭತ್ಯೆಗಳ ಶಿಫಾರಸುಗಳ ಮಾಹಿತಿ ಇಲ್ಲಿದೆ.
ಸ್ವತಂತ್ರ ಪ್ರಭಾರ ಅಥವಾ ಹೆಚ್ಚುವರಿ ಪ್ರಭಾರ ವಹಿಸಿಕೊಳ್ಳುವ ಸರ್ಕಾರಿ ನೌಕರರಿಗೆ ತತ್ಸಮಾನ ಅಥವ ಮೇಲ್ದರ್ಜೆಯ ಹುದ್ದೆಯ ಹೆಚ್ಚುವರಿ ಜವಾಬ್ದಾರಿಗಳನ್ನು ನಿರ್ವಹಿಸುವುದಕ್ಕೆ ಪ್ರಭಾರ ಭತ್ಯೆಯನ್ನು ಮಂಜೂರು ಮಾಡಲಾಗುತ್ತದೆ ಎಂದು ಆಯೋಗ ವರದಿಯಲ್ಲಿ ಹೇಳಿದೆ.

ರಾಜ್ಯ ಸರ್ಕಾರವು ಇತ್ತೀಚೆಗೆ ಸರ್ಕಾರಿ ನೌಕರರ ಮೂಲ ವೇತನದ ಶೇ 15ರಷ್ಟು ದರಕ್ಕೆ ಪ್ರಭಾರ ಭತ್ಯೆಯನ್ನು ಪರಿಷ್ಕರಿಸಿರುತ್ತದೆ. ಜಾರಿಯಲ್ಲಿರುವ ಷರತ್ತು ಮತ್ತು ನಿಬಂಧನೆಗಳ ಪ್ರಕಾರ ಪರಿಷ್ಕೃತ ವೇತನ ಶ್ರೇಣಿಯಲ್ಲಿಯೂ ಶೇ.15 ರಷ್ಟು ಪ್ರಭಾರ ಭತ್ಯೆಯನ್ನು ಮುಂದುವರೆಸಲು ಆಯೋಗವು ಶಿಫಾರಸ್ಸು ಮಾಡುತ್ತದೆ ಎಂದು ತಿಳಿಸಿದೆ.
ನಿಯೋಜನೆ ಭತ್ಯೆ/ ಅನ ಸೇವೆ ಭತ್ಯೆ: ಈ ಭತ್ಯೆಯನ್ನು ವಿದೇಶಿ ಸೇವೆಯಲ್ಲಿರುವ ಮತ್ತು ರಾಜ್ಯದ ಕಾನ್ಸಾಲಿಡೇಟೆಡ್ ಫಂಡ್ ಹೊರತುಪಡಿಸಿ ಬೇರ ಮೂಲದಿಂದ ಸರ್ಕಾರದ ಮಂಜೂರಾತಿಯೊಂದಿಗೆ ಅವರ ವೇತನವನ್ನು ಪಡೆಯುವ ರಾಜ್ಯ ಸರ್ಕಾರಿ ನೌಕರರಿಗೆ ಪಾವತಿಸಲಾಗುತ್ತದೆ. ಅವರು ತಿಂಗಳಿಗೆ ಗರಿಷ್ಠ ರೂ. 200ಕ್ಕೆ ಒಳಪಟ್ಟು ಮೂಲ ವೇತನದ 5% ರಷ್ಟು ನಿಯೋಜನ ಭತ್ಯೆ/ ವಿದೇಶಿ ಸೇವಾ ಭತ್ಯೆಗೆ ಅರ್ಹರಾಗಿರುತ್ತಾರೆ. ಈ ಭತ್ಯೆಯನ್ನು ಕೊನೆಯದಾಗಿ 1988ರಲ್ಲಿ ಪರಿಷ್ಕರಿಸಲಾಯಿತು.
ಪ್ರಸ್ತುತ ಜಾರಿಯಲ್ಲಿರುವ ಷರತ್ತು ಮತ್ತು ನಿಬಂಧನೆಗಳಡಿ ಪ್ರತಿ ಮಾಸಿಕ ಮೂಲ ವೇತನದ ಶೇ.5 ರಷ್ಟು ಮತ್ತು ಗರಿಷ್ಟ ರೂ. 2000ಗಳ ಹೆಚ್ಚಳದೊಂದಿಗೆ ಜಾರಿಯಲ್ಲಿರುವ ನಿಯೋಜನೆ ಭತ್ಯೆ/ ಅನ್ಯ ಸೇವೆ ಭತ್ಯೆಯನ್ನು ಮುಂದುವರೆಸಲು ಆಯೋಗವು ಶಿಫಾರಸ್ಸು ಮಾಡುತ್ತದೆ ಎಂದು ಹೇಳಿದೆ.
ವೈದ್ಯಕೀಯ ಭತ್ಯೆ: ಗ್ರೂಪ್ 'ಸಿ' ಮತ್ತು 'ಡಿ' ನೌಕರರಿಗೆ ಹೊರರೋಗಿ ವ್ಯದ್ಯಕೀಯ ವೆಚ್ಚವನ್ನು ಭರಿಸಲು ಪ್ರತಿ ಮಾಸಿಕ ರೂ. 200ಗಳ ಸಂಚಿತ ಭತ್ಯೆಯನ್ನು ನೀಡಲಾಗುತ್ತಿದೆ. ಈ ಮೊತ್ತವನ್ನು ಪ್ರತಿ ಮಾಸಿಕ ರೂ.1,000 ಗಳಿಗೆ ಹೆಚ್ಚಿಸುವಂತೆ ಕೆ.ಎಸ್.ಜಿ.ಇ.ಎ ಆಯೋಗಕ್ಕೆ ಮನವಿ ಮಾಡಿರುತ್ತದೆ.
ಇಂತಹ ಭತ್ಯೆಯು ನೆರೆಯ ರಾಜ್ಯಗಳಲ್ಲಿ ಜಾರಿಯಲ್ಲಿದ್ದು, ತಮಿಳುನಾಡಿನಲ್ಲಿ ಮಾಸಿಕ ರೂ.300, ಆಂಧ್ರ ಪ್ರದೇಶದಲ್ಲಿ ಮಾಸಿಕ ರೂ.500 ಮತ್ತು ತೆಲಂಗಾಣದಲ್ಲಿ ಮಾಸಿಕ ರೂ. 600 ಇರುವುದು ಆಯೋಗಕ್ಕೆ ಕಂಡುಬಂದಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಗ್ರೂಪ್ 'ಸಿ' ಮತ್ತು 'ಡಿ' ನೌಕರರಿಗಾಗಿ ಈ ಭತ್ಯೆಯನ್ನು ಪ್ರತಿ ಮಾಹೆಯಾನ ರೂ.500 ಗಳಿಗೆ ಹೆಚ್ಚಿಸಲು ಆಯೋಗವು ಶಿಫಾರಸ್ಸು ಮಾಡುತ್ತದೆ ಎಂದು ಹೇಳಿದೆ.
ಹೊರ ರಾಜ್ಯ ಭತ್ಯೆ: ಪ್ರಸ್ತುತ, ನವದೆಹಲಿಯಲ್ಲಿನ ರಾಜ್ಯ ಸರ್ಕಾರಿ ಕಛೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಮೂಲ ವೇತನದ ಶೇ.35 ರಷ್ಟು ಮತ್ತು ಹೊರ ರಾಜ್ಯದ ಇತರೆ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಮೂಲ ವೇತನದ ಶೇ.10 ರಷ್ಟು ಹೊರ ರಾಜ್ಯ ಭತ್ಯೆಯನ್ನು ನೀಡಲಾಗುತ್ತಿದೆ.
ಪ್ರಸ್ತುತ ಜಾರಿಯಲ್ಲಿರುವ ಷರತ್ತು ಮತ್ತು ನಿಬಂಧನೆಗಳ ಅಡಿಯಲ್ಲಿ ನವದೆಹಲಿಯಲ್ಲಿ ಪರಿಷ್ಕೃತ ವೇತನ ಶ್ರೇಣಿಯ ಮೂಲ ವೇತನದ ಶೇ.35 ರಷ್ಟು ಹೊರ ರಾಜ್ಯ ಭತ್ಯೆಯನ್ನು ಮುಂದುವರೆಸಲು ಆಯೋಗವು ಶಿಫಾರಸ್ಸು ಮಾಡುತ್ತದೆ. ಪ್ರಸ್ತುತ ಜಾರಿಯಲ್ಲಿರುವ ಷರತ್ತು ಮತ್ತು ನಿಬಂಧನೆಗಳ ಅಡಿಯಲ್ಲಿ ಹೊರ ರಾಜ್ಯದ ಇತರೆ ಸ್ಥಳಗಳಲ್ಲಿ ಪರಿಷ್ಕೃತ ವೇತನ ಶ್ರೇಣಿಯ ಮೂಲ ವೇತನದ ಶೇ.15 ರಷ್ಟು ದರಕ್ಕೆ ಹೆಚ್ಚಿಸಲು ಸಹ ಆಯೋಗವು ಶಿಫಾರಸ್ಸು ಮಾಡುತ್ತದೆ ಎಂದು ವರದಿಯಲ್ಲಿ ತಿಳಿಸಿದೆ.












Click it and Unblock the Notifications