7th Pay Commission: ನಿವೃತ್ತ ಸರ್ಕಾರಿ ನೌಕರರ ಪಿಂಚಣಿ, ನಿವೃತ್ತಿ ಸೌಲಭ್ಯ ಪರಿಷ್ಕರಣೆ
ಬೆಂಗಳೂರು, ಆಗಸ್ಟ್ 29: ಕರ್ನಾಟಕ ಸರ್ಕಾರ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ನೀಡಿರುವ 558 ಪುಟಗಳ ಸಂಪುಟ-1ರ ವರದಿಯನ್ನು ಅಂಗೀಕರಿಸಿದೆ. ಆಗಸ್ಟ್‌ನಿಂದಲೇ ಜಾರಿಗೆ ಬರುವಂತೆ ವರದಿಯನ್ನು ಜಾರಿಗೊಳಿಸಲಾಗುತ್ತದೆ. ಆದ್ದರಿಂದ 5 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರು, ನಿವೃತ್ತ ನೌಕರರಿಗೆ ಅನುಕೂಲವಾಗಲಿದೆ. ಸರ್ಕಾರ ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವೇತನ ಮತ್ತು ನಿವೃತ್ತಿ ಸೌಲಭ್ಯಗಳನ್ನು ಪರಿಷ್ಕರಣೆ ಮಾಡಿ ಆದೇಶವನ್ನು ಹೊರಡಿಸಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಡಾ. ರೇಜು ಎಂ. ಟಿ. ಸರ್ಕಾರದ ಕಾರ್ಯದರ್ಶಿ (ವೆಚ್ಚ) ಆರ್ಥಿಕ ಇಲಾಖೆ ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶ ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವೇತನ ಮತ್ತು ನಿವೃತ್ತಿ ಸೌಲಭ್ಯಗಳ ಪರಿಷ್ಕರಣೆ ಎಂಬ ವಿಷಯವನ್ನು ಒಳಗೊಂಡಿದೆ.

ರಾಜ್ಯ ಸರ್ಕಾರದ ನೀತಿ ನಿರ್ಣಯದಂತೆ ದಿನಾಂಕ 22.07.2024ರ ಆದೇಶದಲ್ಲಿ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳು ಮತ್ತು ಪಿಂಚಣಿಯನ್ನು ಪರಿಷ್ಕರಿಸಿ ಅನುಷ್ಠಾನಗೊಳಿಸಲು ಆದೇಶಗಳನ್ನು ಹೊರಡಿಸಲಾಗಿರುತ್ತದೆ. ಮುಂದುವರೆದು, ಕರ್ನಾಟಕ ನಾಗರೀಕ ಸೇವಾ (ಪರಿಷ್ಕೃತ ವೇತನ) ನಿಯಮಗಳು, 2024ರ ಅವಕಾಶಗಳಂತೆ ಪರಿಷ್ಕೃತ ವೇತನ ಶ್ರೇಣಿಗಳು ಮತ್ತು ಪರಿಷ್ಕೃತ ಪಿಂಚಣಿಯನ್ನು ಅನುಷ್ಠಾನಗೊಳಿಸಲು ವಿಸ್ತ್ರತವಾದ ಆದೇಶಗಳನ್ನು ಹೊರಡಿಸಲಾಗಿರುತ್ತದೆ ಎಂದು ತಿಳಿಸಿದೆ.
7ನೇ ರಾಜ್ಯ ವೇತನ ಆಯೋಗವು ಶಿಫಾರಸ್ಸು ಮಾಡಿ ಸರ್ಕಾರದ ಆದೇಶದಲ್ಲಿ ಅಂಗೀಕರಿಸಿರುವಂತೆ ರಾಜ್ಯ ಸರ್ಕಾರಿ ನೌಕರರ ಪಿಂಚಣಿ ಮತ್ತು ಪಿಂಚಣಿ ಸೌಲಭ್ಯಗಳನ್ನು ಪರಿಷ್ಕರಿಸಿ ಈ ಕೆಳಕಂಡಂತೆ ಆದೇಶಗಳನ್ನು ಹೊರಡಿಸಲಾಗಿದೆ. ರಾಜ್ಯ ಸರ್ಕಾರವು ರಚಿಸಿದ್ದ 7ನೇ ರಾಜ್ಯ ವೇತನ ಆಯೋಗವು ಶಿಫಾರಸ್ಸು ಮಾಡಿರುವಂತೆ ರಾಜ್ಯ ಸರ್ಕಾರಿ ನೌಕರರಿಗೆ ಲಭ್ಯವಿರುವ ಕನಿಷ್ಠ ಮತ್ತು ಗರಿಷ್ಮ ಪಿಂಚಣಿಯನ್ನು ಪರಿಷ್ಕರಿಸಲಾಗಿದೆ ಎಂದು ಹೇಳಿದೆ.
ಆದೇಶದ ವಿವರ: ಕನಿಷ್ಠ ನಿವೃತ್ತಿ ವೇತನ, ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು ಮತ್ತು ಕರ್ನಾಟಕ ನಾಗರೀಕ ಸೇವಾ (ಅಸಾಧಾರಣ ನಿವೃತ್ತಿ ವೇತನ) ನಿಯಮಾವಳಿಗಳು, 2003ರ ಅವಕಾಶಗಳನ್ವಯ ಸಂದರ್ಭಾನುಸಾರ ಲಭ್ಯವಿರುವ ಈ ಕೆಳಕಂಡ ವಿವಿಧ ರೀತಿಯ ನಿವೃತ್ತಿ ವೇತನಗಳ ಕನಿಷ್ಠ, ಮೊತ್ತವನ್ನು ಪ್ರಸ್ತುತ ಮಾಸಿಕ ರೂ. 8,500 ಗಳಿಂದ ಮಾಸಿಕ ರೂ. 13,500ಗಳಿಗೆ ಪರಿಷ್ಕರಿಸತಕ್ಕದ್ದು.
* ವಯೋ ನಿವೃತ್ತಿ ವೇತನ
* ವಿಶ್ರಾಂತಿ ನಿವೃತ್ತಿ ವೇತನ
* ಅಶಕ್ತತಾ ನಿವೃತ್ತಿ ವೇತನ
* ಪರಿಹಾರ ನಿವೃತ್ತಿ ವೇತನ
* ಅನುಕಂಪ ಭತ್ಯೆ
ಗರಿಷ್ಟ ನಿವೃತ್ತಿ ವೇತನ. ವಿವಿಧ ರೀತಿಯ ನಿವೃತ್ತಿ ವೇತನಗಳ ಗರಿಷ್ಠ ಮೊತ್ತದ ಪರಿಮಿತಿಯನ್ನು ಪ್ರಸ್ತುತ ಮಾಸಿಕ ರೂ. 75,300ಗಳಿಂದ ಮಾಸಿಕ ರೂ.1,20,600ಗಳಿಗೆ ಪರಿಷ್ಕರಿಸತಕ್ಕದ್ದು. ಕೆಲವು ಅತ್ಯಂತ ಅಸಾಧಾರಣ ಸಂದರ್ಭಗಳನ್ನು ಹೊರತುಪಡಿಸಿ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 210ರಡಿ ಮಂಜೂರು ಮಾಡಲಾಗುವ ತಾರ್ತಿಕ (ಅಡ್ ಹಾಕ್) ನಿವೃತ್ತಿ ವೇತನದ ಪರಿಮಿತಿಯು ಮಾಸಿಕ ರೂ.13,500ಗಳನ್ನು ಮೀರತಕ್ಕದ್ದಲ್ಲ ಎಂದು ಆದೇಶ ಹೇಳಿದೆ.
ಕುಟುಂಬ ನಿವೃತ್ತಿ ವೇತನ. ಸರ್ಕಾರಿ ನೌಕರರ ಅವಲಂಬಿತರಿಗೆ ಲಭ್ಯವಿರುವ ಕುಟುಂಬ ನಿವೃತ್ತಿ ವೇತನದ ಕನಿಷ್ಠ ಮೊತ್ತವು ಪ್ರಸ್ತುತ ಮಾಸಿಕ ರೂ. 8,500ಗಳಿಂದ ಮಾಸಿಕ ರೂ. 13,500 ಗಳಿಗೆ ಪರಿಷ್ಕರಿಸತಕ್ಕದ್ದು. ಕುಟುಂಬ ನಿವೃತ್ತಿ ವೇತನದ ಗರಿಷ್ಠ ಪರಿಮಿತಿಯು ಪ್ರಸ್ತುತ ಮಾಸಿಕ ರೂ. 45,180 ರಿಂದ ಮಾಸಿಕ ರೂ. 80,400ಗಳಿಗೆ ಪರಿಷ್ಕರಿಸತಕ್ಕದ್ದು.
ಈ ಮೇಲಿನ ಪರಿಮಿತಿಯ ಮಿತಿಗೊಳಪಟ್ಟು ಲಭ್ಯವಿರುವ ಕುಟುಂಬ ನಿವೃತ್ತಿ ವೇತನದ ಮೊತ್ತವು ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿ ವೇತನ) ನಿಯಮಗಳು, 2002ರಡಿ ಲಭ್ಯವಾಗುವ ಕುಟುಂಬ ನಿವೃತ್ತಿ ವೇತನದ ಉಪಲಬ್ಧಗಳ ಶೇ. 30ರಷ್ಟು ಇರತಕ್ಕದ್ದು.
ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿ ವೇತನ) ನಿಯಮಗಳು, 2002ರ ಅವಕಾಶಗಳಂತೆ ದಿನಾಂಕ 01.07.2022 ರಂದು ಮತ್ತು ತದನಂತರ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಸರ್ಕಾರಿ ನೌಕರರ ಪ್ರಕರಣಗಳಲ್ಲಿ, ಮೃತ ಸರ್ಕಾರಿ ನೌಕರನ ಅವಲಂಬಿತರು ಕುಟುಂಬ ನಿವೃತ್ತಿ ವೇತನದ ಪರಿಷ್ಕೃತ ಮೊತ್ತವನ್ನು ದಿನಾಂಕ 01.08.2024ರಿಂದ ಪಡೆಯಲು ಅರ್ಹರಿರುತ್ತಾರೆ.
ದಿನಾಂಕ: 01.07.2022ರ ಪೂರ್ವದಲ್ಲಿ ಕುಟುಂಬ ನಿವೃತ್ತಿ ವೇತನ ಪಡೆಯುತ್ತಿದ್ದ ಮೃತ ಸರ್ಕಾರಿ ನೌಕರನ ಅವಲಂಬಿತರಿಗೆ ಈ ಆದೇಶದಲ್ಲಿ ತೋರಿಸಿರುವಂತೆ ಪರಿಷ್ಕೃತ ಕುಟುಂಬ ನಿವೃತ್ತಿ ವೇತನವು ಲಭ್ಯವಿರುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.












Click it and Unblock the Notifications