7th Pay Commission; ಡಿಕೆಶಿ ಮುಂದೆ ಸರ್ಕಾರಿ ನೌಕರರ ಬೇಡಿಕೆ ಏನು?
ಬೆಂಗಳೂರು, ಡಿಸೆಂಬರ್ 26; ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ 7ನೇ ರಾಜ್ಯ ವೇತನ ಆಯೋಗದ ವರದಿ ಜಾರಿಗೊಳಿಸಬೇಕು ಎಂದು ಕರ್ನಾಟಕ ಸರ್ಕಾರವನ್ನು ಆಗ್ರಹಿಸಿದೆ. ರಾಜ್ಯ ಸರ್ಕಾರ ದಿನಾಂಕ 6/11/2023ರಂದು ಆದೇಶವೊಂದನ್ನು ಹೊರಡಿಸಿ ಆಯೋಗದ ಕಾಲಾವಧಿಯನ್ನು ದಿನಾಂಕ 15/3/2023ರ ತನಕ ವಿಸ್ತರಣೆ ಮಾಡಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿಯೋಗ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ ನೇತೃತ್ವದಲ್ಲಿ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭೇಟಿ ಮಾಡಿದೆ. ಶೀಘ್ರವೇ ವೇತನ ಆಯೋಗದ ವರದಿಯನ್ನು ಪಡೆದು ಅನುಷ್ಠಾನಗೊಳಿಸುವಂತೆ ಮನವಿಯನ್ನು ಮಾಡಿದೆ.

ರಾಜ್ಯದ ಸರ್ಕಾರಿ ನೌಕರರು ಈಗಾಗಲೇ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಮರುಜಾರಿಗೊಳಿಸಬೇಕು ಎಂದು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಸಂಘದ ಮನವಿಯಂತೆ ಈಗಾಗಲೆ ಎನ್‌ಪಿಎಸ್ ರದ್ದುಪಡಿಸುವ ಸಲುವಾಗಿ ಬೇರೆ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಲು ಸರ್ಕಾರ ಸಮಿತಿಯನ್ನು ರಚನೆ ಮಾಡಿದೆ.
ರಾಜ್ಯ ಸರ್ಕಾರಿ ನೌಕರರು ಈ ಸಮಿತಿಯನ್ನು ಈಗಾಗಲೇ ಸರ್ಕಾರ ಘೋಷಣೆ ಮಾಡಿರುವಂತೆ ಪುನರ್ ರಚನೆ ಮಾಡಿ ವರದಿ ಪಡೆಯುವ ಮೂಲಕ ಹಳೆ ಪಿಂಚಣಿ ಯೋಜನೆ ಮರು ಜಾರಿಗೊಳಿಸುವಂತೆ ಡಿ. ಕೆ. ಶಿವಕುಮಾರ್‌ಗೆ ಮನವಿ ಮಾಡಿತು. ಎರಡು ಬೇಡಿಕೆಗಳ ಕುರಿತು ಸರ್ಕಾರ ಯಾವ ತೀರ್ಮಾನ ಕೈಗೊಳ್ಳಲಿದೆ? ಕಾದು ನೋಡಬೇಕಿದೆ.
ಆಯೋಗದ ಅವಧಿ ವಿಸ್ತರಣೆ; ಕರ್ನಾಟಕದ ಸರ್ಕಾರಿ ನೌಕರರು ಕರ್ನಾಟಕ ಸರ್ಕಾರ 7ನೇ ರಾಜ್ಯ ವೇತನ ಆಯೋಗದ ವರದಿಯನ್ನು ಪಡೆದು ಯಾವಾಗ ಜಾರಿ ಮಾಡಲಿದೆ? ಎಂದು ಕಾದು ಕುಳಿತಿದ್ದಾರೆ. ನವೆಂಬರ್‌ನಲ್ಲಿ ಆಯೋಗದ ಅವಧಿ ಮುಕ್ತಾಯವಾಗಿತ್ತು. ಆಗ ಕೆ. ಸುಧಾಕರ್ ರಾವ್ ನೇತೃತ್ವದಲ್ಲಿ ಆಯೋಗದ ಸದಸ್ಯರು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾಗಿದ್ದರು.
ನವೆಂಬರ್‌ನಲ್ಲಿಯೇ ಆಯೋಗದ ವರದಿಯನ್ನು ಸರ್ಕಾರ ಪಡೆಯಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಗ್ಯಾರಂಟಿ ಯೋಜನೆಗಳ ಹಿನ್ನಲೆಯಲ್ಲಿ ಸರ್ಕಾರ ಆಯೋಗದ ಶಿಫಾರಸು ಜಾರಿ ಮಾಡಲು ಮುಂದಾದರೆ ಸರ್ಕಾರಕ್ಕೆ ಎಷ್ಟು ಆರ್ಥಿಕ ಹೊರೆಯಾಗಲಿದೆ? ಎಂಬ ಲೆಕ್ಕಾಚಾರದಲ್ಲಿ ತೊಡಗಿದೆ.
ಸರ್ಕಾರ 7ನೇ ರಾಜ್ಯ ವೇತನ ಆಯೋಗದ ಶಿಫಾರಸು ಅನ್ವಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮಾಡಲು ಅನುದಾನ ಮೀಸಲಿಟ್ಟಿಲ್ಲ. ಅಲ್ಲದೇ ಸರ್ಕಾರ ನವೆಂಬರ್ 6ರಂದು ಆದೇಶವೊಂದನ್ನು ಹೊರಡಿಸಿ 7ನೇ ರಾಜ್ಯ ವೇತನ ಆಯೋಗದ ಕಾಲಾವಧಿಯನ್ನು ದಿನಾಂಕ 15/3/2023ರ ತನಕ ವಿಸ್ತರಣೆ ಮಾಡಿದೆ. ಆದ್ದರಿಂದ ಸರ್ಕಾರ ವರದಿ ಕೊಡುವುದು 2024ರ ಮಾರ್ಚ್ ತಿಂಗಳಿನಲ್ಲಿ.
ಮುಖ್ಯಮಂತ್ರಿ ಸಿದ್ದರಾಮಯ್ಯ 2024-25ನೇ ಸಾಲಿನ ಬಜೆಟ್ ಅನ್ನು ಫೆಬ್ರವರಿ 17ರಂದು ಮಂಡನೆ ಮಾಡುವ ನಿರೀಕ್ಷೆ ಇದೆ. ಈ ಬಜೆಟ್‌ನಲ್ಲಿ 7ನೇ ರಾಜ್ಯ ವೇತನ ಆಯೋಗದ ಶಿಫಾರಸು ಜಾರಿಗಾಗಿಯೇ ಅನುದಾನ ಮೀಸಲಿಡುತ್ತಾರೆಯೇ? ಎಂದು ಕಾದು ನೋಡಬೇಕಿದೆ.
ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳ ಮೂಲಕ ಆರ್ಥಿಕ ಹೊರೆಯನ್ನು ಹೆಚ್ಚಿಸಿಕೊಂಡಿದೆ. 7ನೇ ರಾಜ್ಯ ವೇತನ ಆಯೋಗದ ಶಿಫಾರಸು ಜಾರಿಗೊಳಿಸಬೇಕಾದರೆ ಸುಮಾರು 12 ಸಾವಿರ ಕೋಟಿ ರೂ. ಹೊರೆಯಾಗಲಿದೆ ಎಂದು ಆರ್ಥಿಕ ತಜ್ಞರು ಈಗಾಗಲೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದಲ್ಲಿ ಒಟ್ಟು ಇರುವ ಸರ್ಕಾರಿ ನೌಕರರು 6.80 ಲಕ್ಷ. ಆದರೆ ಸುಮಾರು 2.55 ಲಕ್ಷ ಹುದ್ದೆಗಳು ಖಾಲಿ ಇವೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹೊಸ ಹುದ್ದೆಗಳ ನೇಮಕಾತಿಗೆ ಸಹ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಇಂತಹ ಸಮಯದಲ್ಲಿಯೇ ಹಾಲಿ ನೌಕರರ ವೇತನ ಪರಿಷ್ಕರಣೆ ಮಾಡಬೇಕಾದರೆ ಹೊರೆ ಹೆಚ್ಚಲಿದೆ.
ಆರ್ಥಿಕ ತಜ್ಞರು ಸರ್ಕಾರಕ್ಕೆ ನೀಡಿರುವ ಎಚ್ಚರಿಕೆಯಂತೆ ವೇತನ ಪರಿಷ್ಕರಣೆ ಬಳಿಕ ಸರ್ಕಾರ ನೌಕರರ ವೇತನಕ್ಕಾಗಿಯೇ 77 ಸಾವಿರ ಕೋಟಿ ರೂ. ಮೀಸಲಿಡಬೇಕು. ಖಾಲಿ ಇರುವ ವಿವಿಧ ಇಲಾಖೆಗಳ ಹುದ್ದೆಗಳು ಭರ್ತಿಯಾದರೆ ಸುಮಾರು 1 ಲಕ್ಷ ಕೋಟಿ ರೂ. ವೇತನಕ್ಕಾಗಿಯೇ ಖರ್ಚಾಗಲಿದೆ.












Click it and Unblock the Notifications