7th pay commission; ಸರ್ಕಾರಿ ನೌಕರರ ಸಭೆ ಕರೆದ ಆಯೋಗ

ಬೆಂಗಳೂರು, ಜೂನ್ 26; ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಮತ್ತು ನೂತನ ವೇತನ ರಚನೆ ಇತ್ಯಾದಿಗಳನ್ನು ರೂಪಿಸಲು ಸುಧಾಕರ್ ರಾವ್ ಅಧ್ಯಕ್ಷತೆಯ 7ನೇ ರಾಜ್ಯ ವೇತನ ಆಯೋಗವನ್ನು ರಚನೆ ಮಾಡಿದೆ. ಆಯೋಗ ಜೂನ್ 27ರ ಮಂಗಳವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭೆಯನ್ನು ಕರೆದಿದೆ.

ಹಪ್ಪಿಬಾ ರಾಣಿ ಕೊರ್ಲಪಾಟಿ, ಕಾರ್ಯದರ್ಶಿಗಳು 7ನೇ ರಾಜ್ಯ ವೇತನ ಆಯೋಗ ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಕರ್ನಾಟಕ ಸರ್ಕಾರ ಈಗಾಗಲೇ 7ನೇ ರಾಜ್ಯ ವೇತನ ಆಯೋಗದ ಅವಧಿಯನ್ನು ದಿನಾಂಕ 19/5/2023ರಿಂದ ಜಾರಿಗೆ ಬರುವಂತೆ 6 ತಿಂಗಳ ಕಾಲ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

7th Pay Commission Called Karnataka Government Employees Union Meeting On June 27

ಅಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ (ರಿ) ಇವರಿಗೆ ಪತ್ರವನ್ನು ಬರೆದು ಸಭೆಗೆ ಆಹ್ವಾನಿಸಲಾಗಿದೆ. ಪತ್ರದೊಂದಿಗೆ ರಾಜ್ಯ ವೇತನ ಆಯೋಗ ರಚನೆಯ ಸರ್ಕಾರದ ಆದೇಶ ದಿನಾಂಕ 19/11/2022 ಉಲ್ಲೇಖ ಮಾಡಲಾಗಿದೆ. ಜೂನ್ 27ರ ಮಂಗಳವಾರ 11.30ಕ್ಕೆ ಸಭಾ ಕೊಠಡಿ, 7ನೇ ರಾಜ್ಯ ವೇತನ ಆಯೋಗ, 3ನೇ ಮಹಡಿ, ಹಳೆಯ ಕಲ್ಲು ಕಟ್ಟಡ, ಔಷಧ ನಿಯಂತ್ರಣ ಸಂಕೀರ್ಣ, ಅರಮನೆ ರಸ್ತೆ, ಬೆಂಗಳೂರು ಇಲ್ಲಿ ಸಭೆ ನಡೆಯಲಿದೆ.

ಆಹ್ವಾನದ ವಿವರಗಳು; ರಾಜ್ಯ ಸರ್ಕಾರವು ಸರ್ಕಾರಿ ನೌಕರರು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ಸ್ಥಳೀಯ ಸಂಸ್ಥೆಗಳ ನೌಕರರು ಹಾಗೂ ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳ ವೇತನ, ತುಟ್ಟಿಭತ್ಯೆ ಹಾಗೂ ಇತರ ಸೌಲಭ್ಯಗಳ ಬಗ್ಗೆ ಪರಿಶೀಲಿಸಿ, ಪರಿಷ್ಕರಿಸಿ ಸರ್ಕಾರಕ್ಕೆ ವರದಿ ನೀಡಲು ದಿನಾಂಕ 19/11/2022ರಲ್ಲಿ ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ 7ನೇ ರಾಜ್ಯ ವೇತನ ಆಯೋಗವನ್ನು ರಚಿಸಿರುವ ಬಗ್ಗೆ ನೆನಪಿಸಲು ಇಚ್ಛಿಸುತ್ತೇನೆ.

ಆಯೋಗಕ್ಕೆ ವಹಿಸಲಾಗಿರುವ ಪರಿಶೀಲನಾರ್ಹ ಅಂಶಗಳ ಕುರಿತು ಸಾರ್ವಜನಿಕರು, ಸೇವಾ ಸಂಘಗಳು ಹಾಗೂ ಸರ್ಕಾರಿ ನೌಕರರು, ಸಂಘ ಸಂಸ್ಥೆಗಳಿಂದ ಮುಕ್ತ ಸಲಹೆ, ಅನಿಸಿಕ ಅಲ್ಲದೇ ಇಲಾಖೆಗಳಿಂದ ಮಾಹಿತಿ ಹಾಗೂ ಮುಕ್ತ ಸಲಹೆ ಪಡೆಯುವ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಆಯೋಗವು ವಿವಿಧ ಪ್ರಶ್ನಾವಳಿಗಳನ್ನು ರಚಿಸಿ ಕರ್ನಾಟಕ ರಾಜ್ಯಪತ್ರದ ಮೂಲಕ ದಿನಾಂಕ 17/01/2023ರಂದು ಪ್ರಕಟಿಸಿರುತ್ತದೆ ಎಂದು ಹೇಳಿದೆ.

ಪ್ರಶ್ನಾವಳಿಗಳಿಗೆ ತಮ್ಮ ಸಂಘದ ವತಿಯಿಂದ ಪ್ರತಿಕ್ರಿಯೆಗಳು/ ಉತ್ತರಗಳು/ ಬೇಡಿಕೆಗಳು ಆಯೋಗದಲ್ಲಿ ಸ್ವೀಕೃತಗೊಂಡಿರುತ್ತದೆ. ಈ ಹಿನ್ನಲೆಯಲ್ಲಿ, ಆಯೋಗವು ತಮ್ಮ ಸಂಘದ ಬೇಡಿಕೆಗಳು/ ವಿನಂತಿಗಳು/ ಅಭಿಪ್ರಾಯಗಳ ಕುರಿತು ಚರ್ಚಿಸಲು ಇಚ್ಛಿಸುತ್ತದೆ. ಈ ಹಿನ್ನಲೆಯಲ್ಲಿ ದಿನಾಂಕ 27/06/2023ರಂದು ಸಭೆಯನ್ನು ಆಯೋಜಿಸಲಾಗಿದೆ. ಸಭೆಯಲ್ಲಿ ತಮ್ಮ ಸಂಘದ ವತಿಯಿಂದ ಈ ಅಂಶಗಳನ್ನು ಒಳಗೊಂಡಿರುವ ಪ್ರಾತ್ಯಕ್ಷಿಕೆಯನ್ನು (PPT) ಪ್ರಸ್ತುತಪಡಿಸಬಹುದು ಎಂದು ತಿಳಿಸಿದೆ.

* ಪ್ರಶ್ನಾವಳಿಯ ಉತ್ತರಗಳು, ಬೇಡಿಕೆಗಳು ಮತ್ತು ಇತರೆ ವಿಷಯಗಳ ಸಂಕ್ಷಿಪ್ತ ಮಾಹಿತಿ.

* ಮಾಹಿತಿಯು ವಸ್ತುನಿಷ್ಟ ಹಾಗೂ ನಿರ್ದಿಷ್ಟವಾಗಿರಲಿ.

* ಪ್ರಾತ್ಯಕ್ಷಿಕೆಯು 10 ಸೈಡ್‌ಗಳಿಗೆ ಸೀಮಿತಗೊಳಿಸುವುದು.

* ಮಾಹಿತಿಯು / ಸೈಡ್‌ಗಳು ಪುನರಾವರ್ತನೆಯಾಗದಿರಲಿ. ಸಭೆಗೆ ಪೂರ್ವ ಸಿದ್ಧತೆ ಹಾಗೂ ಅಗತ್ಯ ಮಾಹಿತಿಯೊಂದಿಗೆ ಹಾಜರಾಗುವಂತೆ ಈ ಮೂಲಕ ಕೋರಲಾಗಿದೆ ಎಂದು ತಿಳಿಸಲಾಗಿದೆ.

ವೇತನ ಪರಿಷ್ಕರಣೆ ವಿಳಂಬ; 2023ರ ಮಾರ್ಚ್‌ ಒಳಗೆ 7ನೇ ರಾಜ್ಯ ವೇತನ ಆಯೋಗದ ವರದಿ ಜಾರಿಗೆ ಬರಲಿದೆ ಎಂಬ ಸರ್ಕಾರಿ ನೌಕರರ ನಿರೀಕ್ಷೆಗಳು ಹುಸಿಯಾಗಿತ್ತು. ವಿಧಾನಸಭೆ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಪರಿಣಾಮ ಆಯೋಗ ಸರ್ಕಾರಕ್ಕೆ ಮಧ್ಯಂತರ ವರದಿಯನ್ನು ಸಲ್ಲಿಕೆ ಮಾಡಲಿಲ್ಲ. ಹೊಸದಾಗಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಮೇ 15ರಂದು ರಾಜ್ಯ 7ನೇ ವೇತನ ಆಯೋಗದ ಅವಧಿಯನ್ನು 6 ತಿಂಗಳ ಕಾಲ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

ಮೇ ತಿಂಗಳಿನಲ್ಲಿ ಸರ್ಕಾರ ಹೊರಡಿಸಿದ ಆದೇಶದ ಅನ್ವಯ ಸುಧಾಕರ್ ರಾವ್ ಅಧ್ಯಕ್ಷತೆಯ 7ನೇ ರಾಜ್ಯ ವೇತನ ಆಯೋಗದ ಅವಧಿಯನ್ನು ದಿನಾಂಕ 19/5/2023ರಿಂದ ಜಾರಿಗೆ ಬರುವಂತೆ 6 ತಿಂಗಳ ಕಾಲ ವಿಸ್ತರಣೆ ಮಾಡಲಾಗಿದೆ. ಆದ್ದರಿಂದ ವೇತನ ಪರಿಷ್ಕರಣೆ ಮತ್ತಷ್ಟು ವಿಳಂಬವಾಗಲಿದೆ. 15ನೇ ಮೇ 2023ರ ಆದೇಶದಂತೆ ಕರ್ನಾಟಕ 7ನೇ ರಾಜ್ಯ ವೇತನ ಆಯೋಗವು ತನ್ನ ಕಾರ್ಯಕಲಾಪಗಳನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲು ಅನುಕೂಲವಾಗುವಂತೆ ಆಯೋಗದ ಕಾಲಾವಧಿಯನ್ನು ದಿನಾಂಕ 19/5/2023 ರಿಂದ 6 ತಿಂಗಳವರೆಗೆ ವಿಸ್ತರಿಸಲಾಗಿದೆ.

7ನೇ ರಾಜ್ಯ ವೇತನ ಆಯೋಗ ಈಗಾಗಲೇ ಬಿಡುಗಡೆ ಮಾಡಿರುವ ಪ್ರಶ್ನಾವಳಿಗಳಿಗೆ ರಾಜ್ಯ ಸರ್ಕಾರಿ ನೌಕರರ ಸಂಘ ಉತ್ತರಗಳನ್ನು ನೀಡಿದೆ. ಈಗಾಗಲೇ ಎರಡು ಬಾರಿ ಸರ್ಕಾರಿ ನೌಕರರ ಸಂಘದ ಸದಸ್ಯರ ಜೊತೆ ವೇತನ ಆಯೋಗ ಸಭೆಯನ್ನು ನಡೆಸಿದೆ. ಜೂನ್ 27ರಂದು ಮತ್ತೊಮ್ಮೆ ಸಭೆಯನ್ನು ಕರೆಯಲಾಗಿದೆ.

ಕರ್ನಾಟಕದ ಸರ್ಕಾರಿ ನೌಕರರು 7ನೇ ವೇತನ ಆಯೋಗದ ಶಿಫಾರಸು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾರ್ಚ್ 1ರ ಬುಧವಾರ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದರು. ಆಗ ಸರ್ಕಾರ ಅವರ ಜೊತೆ ಮಾತುಕತೆ ನಡೆಸಿತ್ತು. ಅಂದಿನ ಮುಖ್ಯಮಂತ್ರಿ, ಹಣಕಾಸು ಸಚಿವರೂ ಆಗಿದ್ದ ಬಸವರಾಜ ಬೊಮ್ಮಾಯಿ, ಸರ್ಕಾರಿ ನೌಕರರಿಗೆ ಮಧ್ಯಂತರವಾಗಿ ಶೇ 17ರಷ್ಟು ವೇತನ ಹೆಚ್ಚಳ ಮಾಡುವ ತೀರ್ಮಾನವನ್ನು ಘೋಷಣೆ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+