ಆಶಾ ಕಾರ್ಯಕರ್ತೆಯರ ಖಾತೆಗೆ 7,000 ರೂ ನೇರ ವರ್ಗಾವಣೆ: ರಾಜ್ಯ ಸರ್ಕಾರದ ಭರವಸೆ
ಬೆಂಗಳೂರು, ಫೆಬ್ರವರಿ 14: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ನಿನ್ನೆ ಬೆಳಗ್ಗೆಯಿಂದ ಆರಂಭವಾದ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಪ್ರತಿಭಟನೆ ಇಂದು ಕೂಡ ಮುಂದುವರಿದಿದ್ದು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಶಾ ಕಾರ್ಯಕರ್ತೆಯರಿಗೆ ಭರವಸೆ ನೀಡಿದ್ದಾರೆ.
ರಾಜ್ಯದ ಆಶಾ ಕಾರ್ಯಕರ್ತೆಯರ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಬದ್ಧವಾಗಿದೆ. ಈಗಾಗಲೇ ಆಶಾ ಸಹೋದರಿಯರ ಹಲವು ಬೇಡಿಕೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಕಾರ್ಯೋನ್ಮುಖವಾಗಿದೆ. ರಾಜ್ಯದ ಮಹಿಳೆಯರ ಕಾಳಜಿ ನಮ್ಮ ಜವಾಬ್ದಾರಿಯಾಗಿದೆ ಎಂದಿರುವ ದಿನೇಶ್ ಗುಂಡೂರಾವ್, ಆಶಾ ಕಾರ್ಯಕರ್ತೆಯರ ಬ್ಯಾಂಕ್ ಖಾತೆಗಳಿಗೆ ಈಗಿರುವ 5,000 ರೂಪಾಯಿಗೆ ಬದಲಾಗಿ 7,000 ರೂಪಾಯಿ ವರ್ಗಾವಣೆ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಆರೋಗ್ಯ ಸಚಿವರು, "ಈ ವರ್ಷ ನಮ್ಮ ಸರ್ಕಾರ ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ಘೋಷಣೆ ಮಾಡಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳಿರಬಹುದು ಅಥವಾ ಬೇರೆ ಯೋಜನೆಗಳಿರಬಹುದು. ಮುಂದೆ ಏನು ಮಾಡಬೇಕೋ ನೋಡೋಣ. ಇಂದಿನ ಸನ್ನಿವೇಶದಲ್ಲಿ ನಮ್ಮ ಕಡೆಯಿಂದ ನಿಮಗೆ ಸಹಕಾರವಾಗುವ ದೃಷ್ಟಿಯಿಂದ ಈ ರೀತಿಯ ತೀರ್ಮಾನ ಕೈಗೊಂಡಿದ್ದೇವೆ".
"ಆಶಾ ಕಾರ್ಯಕರ್ತೆಯರಿಗೆ 7,000 ರೂಪಾಯಿ ನೇರವಾಗಿ ನೀಡುತ್ತೇವೆ. ಉಳಿದಿರುವ ಟೀಂ ಬೇಸ್ ಇನ್ಸೆಂಟಿವ್ ನಿಮಗೆ ಸಿಗುವಂತೆ ನೋಡಿಕೊಳ್ಳುತ್ತೇವೆ. ಉಳಿದಿರುವ ಇನ್ಸೆಂಟಿವ್ ಲೆಕ್ಕಚಾರವನ್ನು ನಾವು ನೋಡಿ ಸರಿಪಡಿಸುವ ಕೆಲಸ ಮಾಡುತ್ತೇವೆ. ಆರು ತಿಂಗಳಿಗಿಂತ ಹೆಚ್ಚು ತಡವಾದರೆ ನೀವು ಹೇಳಿದಂತೆ ಅಷ್ಟೇ ನಿಮಗೆ ಮುಟ್ಟಿಸುತ್ತೇವೆ. ಮೊಬೈಲ್ ಫೋನ್‌ಗಳನ್ನು ನೀವೆ ತೆಗೆದುಕೊಳ್ಳಬಹುದು ತಿಂಗಳು ತಿಂಗಳು ನಾವು ಹಣ ನೀಡುತ್ತೇವೆ" ಎಂದು ಭರವಸೆ ನೀಡಿದ್ದಾರೆ.

ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರ ಬೇಡಿಕೆಗಳು ಏನೇನು..?
* ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 15 ಸಾವಿರ ಸಂಬಳ ನೀಡಬೇಕು.
* ಕಾಯಿಲೆಗೆ ಒಳಗಾಗಿರುವ ಕಾರ್ಯಕರ್ತರಿಗೆ ಸಂಬಳ ಸಹಿತ ರಜೆ ನೀಡಬೇಕು
* ಕಳೆದ ನಾಲ್ಕು ವರ್ಷಗಳಿಂದ ಆಶಾ ಡೈರಿ ಸಿಕ್ಕಿಲ್ಲ, ಅದನ್ನು ಒದಗಿಸಬೇಕು.
*ಕಳೆದ ಮೂರು ವರ್ಷದಿಂದ ಸಮವಸ್ತ್ರ ನೀಡಿಲ್ಲ.ಅದನ್ನು ನೀಡಬೇಕು.
* ಮೊಬೈಲ್ ಆಧಾರಿತ ಕೆಲಸಗಳನ್ನು ಮಾಡಿಸಬಾರದು.
*ಆರ್‌ಸಿಎಚ್ ಪೋರ್ಟಲ್ ಪ್ರಾಬ್ಲಂ ನಿವಾರಿಸಬೇಕು ಎಂದು ಆಶಾ ಕಾರ್ಯಕರ್ತೆಯರು ಆಗ್ರಹಿಸಿದ್ದಾರೆ.












Click it and Unblock the Notifications