ರಾಯಚೂರು : ಗೋಶಾಲೆಯಲ್ಲಿ 58 ಹಸುಗಳು ಸಾವು
ರಾಯಚೂರು, ಡಿ.9 : ಸಿಂಧನೂರಿನ ಮುಚ್ಚಳ ಕ್ಯಾಂಪ್ ಬಳಿಯ ಭಗವಾನ್ ಮಹಾವೀರ ಚಾರಿಟಬಲ್ ಟ್ರಸ್ಟ್‌ನ ಗೋಶಾಲೆಯಲ್ಲಿ ವಿಷಯುಕ್ತ ಹುಲ್ಲು ಸೇವಿಸಿ 58 ಹಸುಗಳು ಮೃತಪಟ್ಟು, 162 ಹಸುಗಳು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ಕಟಾವು ಮಾಡಿರುವ ಹುಲ್ಲಿನಲ್ಲಿ ಕೀಟನಾಶಕವಿದ್ದು, ಅದನ್ನು ತಿಂದ ಹಸುಗಳು ಸಾವನ್ನಪ್ಪಿವೆ ಎಂದು ಶಂಕಿಸಲಾಗಿದೆ.
ಭಗವಾನ್ ಮಹಾವೀರ ಚಾರಿಟಬಲ್ ಟ್ರಸ್ಟ್ ಗೋಶಾಲೆಯಲ್ಲಿದ್ದ ಎಲ್ಲಾ ಹಸುಗಳು ಭಾನುವಾರ ರಾತ್ರಿ ತನಕ ಆರೋಗ್ಯವಾಗಿದ್ದವು. ರಾತ್ರಿ 9ಗಂಟೆಗೆ ಗೋಶಾಲೆಯ ಕೆಲಸಗಾರರು ಎರಡು ಬಾರಿ ಹುಲ್ಲು ಹಾಕಿದ್ದಾರೆ. ಹುಲ್ಲು ತಿಂದಬಳಿಕ ಹಸುಗಳು ಅಸ್ವಸ್ಥಗೊಂಡಿದ್ದು, 58 ಹಸುಗಳು ಸಾವನ್ನಪ್ಪಿವೆ. [ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ]

ಸೋಮವಾರ ಮುಂಜಾಣೆ ಕೆಲಸಗಾರರು ಹಸುಗಳು ಮೃತಪಟ್ಟಿರುವುದನ್ನು ನೋಡಿ ಆತಂಕಗೊಂಡು ಟ್ರಸ್ಟ್‌ನ ಕಾರ್ಯದರ್ಶಿ ಲಾಲ್‌ಚಂದ್ ಜೈನ್ ಅವರಿಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. 162 ಹಸುಗಳು ಅಸ್ವಸ್ಥಗೊಂಡಿದ್ದು, ವಶುವೈದ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅವುಗಳಿಗೆ ಚಿಕಿತ್ಸೆ ನೀಡಿದ್ದಾರೆ. [ರಾಮನಗರ : ಹಸುಗಳ ಸಾವು, ಜನರಿಗೆ ಸಂಕಷ್ಟ]
ಕೀಟನಾಶಕ ಶಂಕೆ : ಭಗವಾನ್ ಮಹಾವೀರ ಚಾರಿಟಬಲ್ ಟ್ರಸ್ಟ್ ಗೋಶಾಲೆಗೆ ಹಲವು ರೈತರ ಜಮೀನಿನಿಂದ ಹುಲ್ಲನ್ನು ತರಿಸಲಾಗಿತ್ತು. ಈ ಹುಲ್ಲಿನಲ್ಲಿ ಕೀಟನಾಶಕವಿದ್ದು ಅದನ್ನು ಸೇವಿಸಿದ ಹಸುಗಳು ಮೃತಪಟ್ಟಿವೆ ಎಂದು ಶಂಕಿಸಲಾಗಿದೆ. ಹಲವು ರೈತರ ಹೊಲಗಳಿಂದ ಮೇವು ತರಲಾಗಿದ್ದು, ಯಾವ ಮೇವಿನಲ್ಲಿ ಕೀಟನಾಶಕವಿತ್ತು ಎಂಬುದು ಪತ್ತೆಯಾಗಿಲ್ಲ.
ತಹಶೀಲ್ದಾರ್ ಭೇಟಿ : ಸಿಂಧನೂರು ತಹಶೀಲ್ದಾರ್ ಎಂ.ಗಂಗಪ್ಪ ಕಲ್ಲೂರು ಅವರು ಗೋಶಾಲೆಗೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದರು. ಜಿಲ್ಲಾಧಿಕಾರಿಗಳಿಗೂ ಘಟನೆ ಕುರಿತು ಮಾಹಿತಿ ನೀಡಲಾಗಿದೆ ಎಂದು ಹೇಳಿದರು. ಪ್ರಯೋಗಾಲಯದ ವರದಿ ಬಂದ ನಂತರ ಸಾವಿಗೆ ನಿಖರವಾದ ಕಾರಣ ತಿಳಿದುಬರಲಿದೆ ಎಂದರು.












Click it and Unblock the Notifications