PSI Re-Exam: ಪಿಎಸ್‌ಐ ಮರುಪರೀಕ್ಷೆ ಅಂತಿಮ ಅಂಕಪಟ್ಟಿ ಪ್ರಕಟ: CET ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
ಬೆಂಗಳೂರು, ಮಾರ್ಚ್ 29: ರಾಜ್ಯದಲ್ಲಿ ವ್ಯಾಪಕ ಚರ್ಚೆಯಾಗಿದ್ದ ಪಿಎಸ್ಐ ನೇಮಕಾತಿ ಸಂಬಂಧ ನಡೆಸಲಾದ ಮರು ಪರೀಕ್ಷೆಯ ಪತ್ರಿಕೆ-1 ಮತ್ತು 2 ರಲ್ಲಿ ಗಳಿಸಿರುವ ಅಂಕಗಳ ಅಂತಿಮ ಪಟ್ಟಿ ಪ್ರಕಟಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 545 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದು ರಾಜ್ಯವಾಪಿ ಸುದ್ದಿಯಾಗಿತ್ತು. ಇದಾದ ಬಳಿಕ ಈಗಿನ ರಾಜ್ಯ ಕಾಂಗ್ರೆಸ್ ಸರ್ಕಾರ ಸೂಕ್ತ ಬಿಗಿ ಬದ್ರತೆ ನಡುವೆ ಜನವರಿ 23ರಂದು ಮರು ಪರೀಕ್ಷೆ ನಡೆಸಲಾಯಿತು.

ಈ ಮರು ಪರೀಕ್ಷೆಗೆ ಹಾಜರಾಗಿದ್ದ ಎಲ್ಲ ಅಭ್ಯರ್ಥಿಗಳು ಎರಡೂ ಪತ್ರಿಕೆಗಳಲ್ಲಿ ಗಳಿಸಿರುವ ಅಂಕಗಳ ಪಟ್ಟಿಯನ್ನು ಕೆಇಎ ಪ್ರಾಧಿಕಾರ ಪ್ರಕಟಿಸಿದೆ. ಈ ಅಂಕಗಳ ಮಾಹಿತಿಯನ್ನು ಗೃಹ ಇಲಾಖೆಗೆ ಸಲ್ಲಿಸಲಾಗುತ್ತದೆ. ನಂತರ ಆಯ್ಕೆ ಪಟ್ಟಿಯನ್ನು ಸರ್ಕಾರ ಅಧಿಕೃತವಾಗಿ ಬಿಡುಗಡೆ ಮಾಡಲಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಅವರು ಅಪ್ಡೇಟ್ ಕೊಟ್ಟಿದ್ದಾರೆ.
CET 2024: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಏಪ್ರಿಲ್ 18 ಹಾಗೂ 19ರಂದು ನಡೆಸಲು ಉದ್ದೇಶಿಸಲಾಗಿರುವ ಸಿಇಟಿ ಪರೀಕ್ಷೆಗೆ ಆನ್‌ಲೈನ್ ಅರ್ಜಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಈಗಾಗಲೇ ಹಲವು ಬಾರಿ ದಿನಾಂಕ ವಿಸ್ತರಣೆ ಮಾಡಿದ್ದು, ಇದೀಗ ಮತ್ತೆ ಮುಂದೂಡಿದಿದೆ.
ಈ ಸಿಇಟಿ ಪರೀಕ್ಷೆ ಅರ್ಜಿ ಸಲ್ಲಿಕೆಯನ್ನು ನಾಳೆ ಶನಿವಾರ ಮಾರ್ಚ್ 30ರಂದು ಬೆಳಗ್ಗೆ 11 ಗಂಟೆಯಿಂದ ಏಪ್ರಿಲ್ 1ರವರೆಗೆ ಸಂಜೆ 4ಗಂಟೆವರೆಗೆ ಅವಕಾಶ ಕಲ್ಪಿಸಲಾಗಿದೆ. ಅದೇ ದಿನ ಅರ್ಜಿ ಸಲ್ಲಿಸುವವರಿಗೆ ಅಂದು ರಾತ್ರಿ 08 ಗಂಟೆವರೆಗೆ ಶುಲ್ಕ ಪಾವತಿಗೆ ಸಮಯ ನೀಡಲಾಗಿದೆ.
ಬೆಂಗಳೂರಿನಲ್ಲಿ ಪರೀಕ್ಷೆಗೆ ಅವಕಾಶ
ಸಿಇಟಿ ಪರೀಕ್ಷೆ ಸದರಿ ದಿನಾಂಕದಂದು ಅರ್ಜಿ ಸಲ್ಲಿಸುವ ಅವಕಾಶ ಬಳಸಿಕೊಳ್ಳುವವರಿಗೆ ಬೆಂಗಳೂರಿನ ಕೇಂದ್ರಗಳಲ್ಲಿ ಮಾತ್ರ ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪಷ್ಟಪಡಿಸಿದೆ. ಸಿಇಟಿ ಪರೀಕ್ಷೆಗೆ ಇನ್ನೂ ಅರ್ಜಿ ಸಲ್ಲಿಸದವರು ಈ ಕೂಡಲೇ ಅರ್ಜಿ ಸಲ್ಲಿಕೆಗೆ ಕಾರ್ಯ ಪ್ರವೃತ್ತರಾಗಬೇಕಿದೆ.
ಸಿಟಿಟಿ 2024ಕ್ಕೆ ನೋಂದಣಿ, ಆನ್‌ಲೈನ್ ಅರ್ಜಿ ಸಲ್ಲಿಸುವುದು ಮತ್ತು ಅರ್ಹತಾ ಷರತ್ತಗಳ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್‌ಗೆ ಭೇಟಿ ಕೊಟ್ಟು ಪರಿಶೀಲಿಸಬೇಕು. ಪರಿಶೀಲನೆ ಹಾಗೂ ಮಾಹಿತಿಗೆ 2024ರ ಜನವರಿ 09ರ ಅಧಿಸೂಚನೆ ಓದಿಕೊಳ್ಳುವಂತೆ ಕೆಇಎ ಸೂಚಿಸಿದೆ.












Click it and Unblock the Notifications