ಮಾನವೀಯತೆ ನೆಲೆಯಲ್ಲಿ ತೆಲಂಗಾಣಕ್ಕೆ 5 ಟಿಎಂಸಿ ನೀರು: ಸಿದ್ದರಾಮಯ್ಯ
ಬೆಂಗಳೂರು, ಸೆಪ್ಟೆಂಬರ್ 1: ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉತ್ತಮಕುಮಾರ್ ರೆಡ್ಡಿ ನೇತೃತ್ವದ ನಿಯೋಗ ಭೇಟಿ ಮಾಡಿ ನೀರಾವರಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿತು.
ನಿಯೋಗ ಆಲಮಟ್ಟಿಯ ನಾರಾಯಣಪುರ ಜಲಾಶಯದಿಂದ ತೆಲಂಗಾಣಕ್ಕೆ ನೀರು ಬಿಡುಗಡೆಗೆ ಮನವಿ ಮಾಡಿತು.

ಈ ಸಂದರ್ಭ ಹಾಜರಿದ್ದ ಸಚಿವ ಎಂ ಬಿ ಪಾಟೀಲ್, "ಕುಡಿಯುವ ಉದ್ದೇಶಕ್ಕೆ ನಿನ್ನೆಯಿಂದ ನೀರು ಬಿಡುಗಡೆ ಮಾಡಲಾಗಿದೆ," ಎಂದು ತಿಳಿಸಿದರು.
ನಿಯೋಗದ ಮನವಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, "ನಮ್ಮಲ್ಲಿಯೂ 7ವರ್ಷಗಳಿಂದ ಬರಗಾಲವಿದೆ. 1.8ಟಿಎಂಸಿ ನೀರು ತೆಲಂಗಾಣಕ್ಕೆ ಬಿಡುಗಡೆ ಮಾಡಲಾಗಿದೆ. ಕುಡಿಯುವ ನೀರಿಗಾಗಿ ಮಾನವೀಯ ದೃಷ್ಠಿಯಿಂದ ನಿಮ್ಮ ಮನವಿಗೆ ಒಗೊಟ್ಟಿದ್ದೇವೆ. 15ಟಿಎಂಸಿ ಬೇಕು ಎನ್ನುತ್ತೀರಿ, ಇನ್ನೂ 5ಟಿಎಂಸಿ ಬಿಡುಗಡೆ ಮಾಡಬಹುದು. ಮುಂದೆ ಮಳೆಯಾದರೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುವ ಬಗ್ಗೆ ಆಲೋಚಿಸೋಣ," ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜೋಳಿ ಬಂಡಾ ತಿರುವು ಯೋಜನೆ ಕಾಮಗಾರಿ ಕುರಿತೂ ನಿಯೋಗ ಚರ್ಚೆ ನಡೆಸಿತು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, "ರಾಜೋಳಿ ಬಂಡಾ ಕಾಮಗಾರಿ ಕುರಿತು ಉಭಯ ರಾಜ್ಯಗಳ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು," ಎಂದು ನಿಯೋಗಕ್ಕೆ ಭರವಸೆ ನೀಡಿದರು.

ಸಭೆಯಲ್ಲಿ ಸತೀಶ್ ಜಾರಕಿಹೊಳಿ, ರಮಾನಾಥ ರೈ ಸೇರಿದಂತೆ ಸಚಿವರು, ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications