ಸಿದ್ದರಾಮಯ್ಯ ಸಂಪುಟ ಸೇರಲಿದ್ದಾರೆ ಐವರು ಶಾಸಕರು?
ಬೆಂಗಳೂರು, ಅಕ್ಟೋಬರ್ 27 : ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಇನ್ನೂ ಅಂತಿಮ ಚಿತ್ರಣ ಲಭ್ಯವಾಗಿಲ್ಲ. ಐವರು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಸೇರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಚಿವ ಎಸ್.ಆರ್. ಪಾಟೀಲ್ ಅವರು ಕೆಪಿಸಿಸಿ ಅಧ್ಯಕ್ಷರಾಗುವ ಸಾಧ್ಯತೆ ಇದೆ.
ಮಂಗಳವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ ಕುರಿತು ಮಾತುಕತೆ ನಡೆಸಿದರು. ನಂತರ ಉಭಯ ನಾಯಕರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದರು. [ಸಂಪುಟ ಸೇರಲಿದ್ದಾರೆ ರಮ್ಯಾ?]
ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ದೆಹಲಿಯಲ್ಲಿದ್ದು, ಹೈಕಮಾಂಡ್ ನಾಯಕರ ಜೊತೆ ಸಂಪುಟ ವಿಸ್ತರಣೆ/ಪುನಾರಚನೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಆದರೆ, ಹೈಕಮಾಂಡ್ ನಾಯಕರು ಸಂಪುಟ ಪುನಾರಚನೆಗೆ ಒಪ್ಪಿಗೆ ನೀಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. [ದಲಿತ ಸಿಎಂ ಕೂಗು : ಮೌನ ಮುರಿದ ಸಿದ್ದರಾಮಯ್ಯ]
ಪಕ್ಷದ ಮೂಲಗಳ ಮಾಹಿತಿಯಂತೆ ಐವರು ಶಾಸಕರು ಸಿದ್ದರಾಮಯ್ಯ ಅವರ ಸಂಪುಟ ಸೇರಲಿದ್ದು, ಇದೇ ವಾರದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ 4 ಸಚಿವ ಸ್ಥಾನಗಳು ಖಾಲಿ ಇದೆ. ಮತ್ತೊಬ್ಬ ಸಚಿವರಿಂದ ರಾಜೀನಾಮೆ ಪಡೆದು ಐವರನ್ನು ಸೇರಿಸಿಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ. ಸಂಪುಟ ಸೇರುವವರು ಯಾರು ಚಿತ್ರಗಳಲ್ಲಿ ನೋಡಿ......

ಸಂಪುಟ ಸೇರಲಿದ್ದಾರೆ ಕಾಗೋಡು ತಿಮ್ಮಪ್ಪ?
ಸಾಗರ ಕ್ಷೇತ್ರದ ಶಾಸಕ ಮತ್ತು ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಸಿದ್ದರಾಮಯ್ಯ ಸಂಪುಟ ಸೇರುವ ಸಾಧ್ಯತೆ ಇದೆ. ಹಿರಿಯರಾದ ತಿಮ್ಮಪ್ಪ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗುತ್ತದೆ ಎಂಬುದು ಸದ್ಯದ ಸುದ್ದಿ. ಆದರೆ, ಸ್ಪೀಕರ್ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಲಾಗುತ್ತದೆ ಎಂಬುದು ಇನ್ನೂ ನಿಗೂಢ.

ಸಂಪುಟ ಸೇರಲಿದ್ದಾರೆ ಎ.ಮಂಜು
ಹಾಸನ ಜಿಲ್ಲೆಗೆ ಸಚಿವ ಸ್ಥಾನ ಬೇಕು ಎಂಬುದು ಬಹು ದಿನದ ಬೇಡಿಕೆಯಾಗಿದೆ. ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಅರಕಲಗೋಡು ಶಾಸಕ ಎ.ಮಂಜು ಅವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ. ಕೆಲವು ದಿನಗಳ ಹಿಂದೆ ಹಾಸನದ ಕಾಂಗ್ರೆಸ್ ನಾಯಕರ ನಿಯೋಗ ಪರಮೇಶ್ವರ ಮತ್ತು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸಚಿವ ಸ್ಥಾನಕ್ಕಾಗಿ ಒತ್ತಾಯ ಮಾಡಿತ್ತು.

ಸಂಪುಟ ಸೇರಲಿದ್ದಾರೆ ಪರಮೇಶ್ವರ
ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಅವರು ಸಚಿವ ಸಂಪುಟ ಸೇರಲಿದ್ದಾರೆ ಎಂಬುದು ಸದ್ಯದ ಸುದ್ದಿ. ಆದರೆ, ಅವರಿಗೆ ಡಿಸಿಎಂ ಹುದ್ದೆ ಲಭಿಸುವುದಿಲ್ಲ. ಪ್ರಮುಖ ಖಾತೆ ದೊರೆಯಲಿದೆ ಎಂಬುದು ಪಕ್ಷದ ಮೂಲಗಳ ಮಾಹಿತಿ. ಪರಮೇಶ್ವರ ಅವರ ಕೆಪಿಸಿಸಿ ಅಧ್ಯಕ್ಷ ಅವಧಿ ಪೂರ್ಣಗೊಳ್ಳುತ್ತಾ ಬಂದಿದ್ದು, ಅವರು ಸಂಪುಟ ಸೇರಲಿದ್ದಾರೆ. ಈಗಾಲಗೇ ಪರಮೇಶ್ವರ ಅವರನ್ನು ವಿಧಾನಪರಿಷತ್ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ.

ಸಚಿವರಾಗಲಿದ್ದಾರೆ ವಿನಯ್ ಕುಲಕರ್ಣಿ
ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಲು ಧಾರವಾಡ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ರಾಣೆಬೆನ್ನೂರು ಕ್ಷೇತ್ರದ ಶಾಸಕ ಕೆ.ಬಿ ಕೋಳಿವಾಡ ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಯಾರಿಗೆ ಸಚಿವ ಸ್ಥಾನ ದೊರೆಯಲಿದೆ? ಎಂಬುದು ಖಚಿತವಾಗಿಲ್ಲ.

ರಮೇಶ್ ಕುಮಾರ್ ಸಂಪುಟ ಸೇರಲಿದ್ದಾರೆ
ಶ್ರೀನಿವಾಸಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. ಕೋಲಾರ ಭಾಗಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಅಸಮಾಧಾನವೂ ಇತ್ತು. ಆದ್ದರಿಂದ ರಮೇಶ್ ಕುಮಾರ್ ಅವರಿಗೆ ಸಂಪುಟ ಸೇರುವ ಅವಕಾಶ ದೊರೆಯಲಿದೆ.

ಎಸ್.ಆರ್.ಪಾಟೀಲ್ ರಾಜೀನಾಮೆ?
ಐಟಿ-ಬಿಟಿ ಸಚಿವ ಎಸ್.ಆರ್.ಪಾಟೀಲ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬುದು ಸದ್ಯದ ಸುದ್ದಿ. ವಿಧಾನಪರಿಷತ್ ಸದಸ್ಯರಾಗಿರುವ ಅವರನ್ನು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ ಎನ್ನುತ್ತವೆ ಮೂಲಗಳು.












Click it and Unblock the Notifications