ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತದಿಂದ 6 ಮಂದಿ ಸಾವು;5 ಲಕ್ಷ ಪರಿಹಾರ: ಗೋವಿಂದ ಕಾರಜೋಳ
ಬೆಳಗಾವಿ, ಜನವರಿ 5: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮ ಯಾತ್ರಾರ್ಥಿಗಳು ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಹೋಗುವಾಗ ವಾಹನ ಅಪಘಾತದಿಂದ 6 ಮಂದಿ ಮೃತಪಟ್ಟಿದ್ದು, ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರವನ್ನ ಘೋಷಣೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೂಚನೆ ನೀಡಿದ್ದಾರೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.
ಈ ಕುರಿತು ಗುರುವಾರ ಮಾತನಾಡಿದ ಅವರು, ಈ ವಾಹನ ಅಪಘಾತದಲ್ಲಿ 16 ಕ್ಕೂ ಹೆಚ್ಚು ಗಾಯಗೊಂದಿದ್ದು, ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಲಾಗಿದೆ, ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾನೆ ಎಂದರು.
ಇನ್ನೂ ಮೃತರ ಕುಟುಂಬಕ್ಕೆ ಆಗಿರು ದುಃಖ ಹಾಗೂ ನೋವಿನಲ್ಲಿ ನಾನು ಭಾಗಿಯಾಗಿದ್ದೇನೆ. ಮೃತರ ಆತ್ಮಕ್ಕೆ ಭಗವಂತ ಶಾಂತಿಯನ್ನ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಗೋವಿಂದ ಕಾರಜೋಳ ಅವರು ಹೇಳಿದರು.

ಬೆಳಗಾವಿ ಕಡಕೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚುಂಚನೂರು ಬಳಿ ದುರ್ಘಟನೆ ನಡೆದಿದೆ. ವಿಠ್ಠಲ, ರುಕ್ಮಿಣಿ ದೇವಸ್ಥಾನದ ಆಲದ ಮರಕ್ಕೆ ಮಹೇಂದ್ರ ಗೂಡ್ಸ್ ವಾಹನ ಡಿಕ್ಕಿಯಾಗಿ ಈ ಅವಘಾಡ ಸಂಭವಿಸಿದೆ. ಈ ಅಪಘಾತದಲ್ಲಿ ಹನಮ್ಮವ್ವ (24), ದೀಪಾ (31), ಸವಿತಾ (12), ಸುಪ್ರೀತಾ (11), ಮಾರುತಿ (42), ಇಂದ್ರವ್ವಾ (24) ಮೃತ ದುರ್ದೈವಿಗಳು.

ಇನ್ನೂ ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನು ಗೋಕಾಕ್ ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಘಟನಾ ಸ್ಥಳಕ್ಕೆ ಬೆಳಗಾವಿ ಎಸ್ಪಿ ಸಂಜೀವ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications