ಅಪಾರ್ಟ್‌ಮೆಂಟ್‌ನಲ್ಲಿ ಈ 4 ವಾಸ್ತು ತಪ್ಪುಗಳಿದ್ದರೆ ದುರಾದೃಷ್ಟ ನಿಮ್ಮನ್ನೇ ಹಿಂಬಾಲಿಸುತ್ತೆ
ನಗರ ಪ್ರದೇಶಗಳ ಫ್ಲಾಟ್‌ಗಳು ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ವಾಸ್ತು ಶಾಸ್ತ್ರದ ನಿಯಮಗಳನ್ನು ಪಾಲಿಸುವುದು ಬಹಳ ಕಷ್ಟಕರವಾಗಿದೆ. ಯಾಕೆಂದರೆ ಮನೆಯಲ್ಲಿನ ಜಾಗದ ಕೊರತೆ, ಅತಿಯಾದ ವಿನ್ಯಾಸ ಹಾಗೂ ನಿರ್ಮಾಣ ಶೈಲಿಯಿಂದಾಗಿ ಅನೇಕ ಮನೆಗಳಲ್ಲಿ ವಾಸ್ತು ದೋಷಗಳು ಕಾಣಿಸಿಕೊಳ್ಳುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ಇಂತಹ ದೋಷಗಳಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ, ಆರೋಗ್ಯ ತೊಂದರೆ, ಮಾನಸಿಕ ಒತ್ತಡ ಮತ್ತು ಕುಟುಂಬದ ಅಶಾಂತಿಗೆ ಉಂಟಾಗಬಹುದು ಎಂದು ತಜ್ಞರು ಹೇಳುತ್ತಾರೆ. ಆದರೆ ಚಿಂತಿಸುವ ಅಗತ್ಯವಿಲ್ಲ ಈ ಕೆಲವು ಸರಳ ಪರಿಹಾರಗಳ ಮೂಲಕ ವಾಸ್ತು ದೋಷಗಳ ಪರಿಣಾಮವನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.
ತಪ್ಪು ದಿಕ್ಕಿನಲ್ಲಿ ಮುಖ್ಯದ್ವಾರ
ನಗರದ ಪ್ರದೇಶಗಳ ಅನೇಕ ಫ್ಲಾಟ್‌ಗಳಲ್ಲಿ ಮುಖ್ಯ ದ್ವಾರವು ದಕ್ಷಿಣ ಅಥವಾ ನೈಋತ್ಯ ದಿಕ್ಕಿನಲ್ಲಿ ಇರುತ್ತದೆ. ವಾಸ್ತು ಪ್ರಕಾರ, ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಮುಖ್ಯದ್ವಾರ ಇದ್ದರೆ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ತಪ್ಪು ದಿಕ್ಕಿನಲ್ಲಿ ಮುಖ್ಯ ಬಾಗಿಲು ಇದ್ದರೆ ಮನೆಯೊಳಗೆ ನಕಾರಾತ್ಮಕ ಶಕ್ತಿಯು ಒಳಬರುವ ಸಾಧ್ಯತೆ ಇರುತ್ತದೆ ಎಂದು ನಂಬಲಾಗಿದೆ. ಇದರಿಂದ ಉದ್ಯೋಗ, ಹಣಕಾಸು ಮತ್ತು ಕುಟುಂಬದ ಸಂತೋಷದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ಪರಿಹಾರ
ಮೇಲ್ಭಾಗದಲ್ಲಿ ಪೀನ ಕನ್ನಡಿ(ಕಾನ್ವೆಕ್ಸ್ ಮಿರರ್) ಉಪಯೋಗಿಸಬಹುದು. ಬಾಗಿಲಿನ ಮೇಲೆ ಸ್ವಸ್ತಿಕ್ ಚಿಹ್ನೆ ಹಾಕುವುದು, ಚೆನ್ನಾಗಿ ಬೆಳಕು ಬರುವ ರೀತಿ ನೋಡಿಕೊಳ್ಳುವುದು ಹಾಗೂ ಹಸಿರು ಗಿಡಗಳನ್ನು ಮುಖ್ಯ ದ್ವಾರದ ಬಳಿ ಬೆಳೆಸುವುದು ಉತ್ತಮ ಎಂದು ಹೇಳಲಾಗುತ್ತದೆ.

ಈಶಾನ್ಯ ದಿಕ್ಕಿನಲ್ಲಿ ಶೌಚಾಲಯ
ಈಶಾನ್ಯ ದಿಕ್ಕು ಪೂರ್ವ ಮತ್ತು ಉತ್ತರ ನಡುವಿನ ಮಧ್ಯದ ದಿಕ್ಕು, ವಾಸ್ತು ಶಾಸ್ತ್ರದಲ್ಲಿ ಈ ದಿಕ್ಕಿಗೆ ವಿಶೇಷವಾದ ಮಹತ್ವವಿದೆ. ಅನೇಕ ಅಪಾರ್ಟ್‌ಮೆಂಟ್‌ಗಳಲ್ಲಿ ಈಶಾನ್ಯ ದಿಕ್ಕಿನಲ್ಲಿ ಶೌಚಾಲಯ ನಿರ್ಮಿಸಿರುತ್ತಾರೆ. ಆದರೆ ವಾಸ್ತು ಪ್ರಕಾರ ಈ ದಿಕ್ಕು ನೀರಿನ ಮತ್ತು ಶುದ್ಧವಾದ ಶಕ್ತಿಯ ಸ್ಥಾನವಾಗಿದ್ದು, ಈ ಜಾಗದಲ್ಲಿ ಶೌಚಾಲಯ ಮಾಡುವುದರಿಂದ ಆರೋಗ್ಯ ಮತ್ತು ಹಣಕಾಸಿನ ಸಮಸ್ಯೆಗಳು ಎದುರಾಗತ್ತದೆ ಎಂದು ಹೇಳಲಾಗುತ್ತದೆ.
ಪರಿಹಾರ
ಶೌಚಾಲಯದ ಬಾಗಿಲನ್ನು ಯಾವಾಗಲೂ ಮುಚ್ಚಿಟ್ಟಿರಬೇಕು. ಒಂದು ಬಟ್ಟಲಿನಲ್ಲಿ ಸಮುದ್ರ ಉಪ್ಪುನ್ನು ಇಡುವುದು ಅಥವಾ ವಾಸ್ತು ಪಿರಮಿಡ್ ಬಳಸುವುದು ಒಳ್ಳೆಯದು ಎಂದು ನಂಬಲಾಗಿದೆ.
ಆಗ್ನೇಯ ದಿಕ್ಕಿನಲ್ಲಿ ಮಲಗುವ ಕೊಠಡಿ
ಆಗ್ನೇಯ ದಿಕ್ಕು ಎಂದರೆ ಪೂರ್ವ ಮತ್ತು ದಕ್ಷಿಣ ದಿಕ್ಕಿನ ನಡುವಿನ ಮೂಲೆಯನ್ನು ಸೂಚಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಈ ದಿಕ್ಕಿಗೆ ವಿಶೇಷವಾದ ಮಹತ್ವವಿದೆ. ಆಗ್ನೇಯ ದಿಕ್ಕು ಅಧಿಪತಿ ಅಗ್ನಿ ದೇವ ತತ್ವಕ್ಕೆ ಸಂಬಂಧಿಸಿದ ಪ್ರದೇಶವಾಗಿದೆ ಆದ್ದರಿಂದ ಈ ದಿಕ್ಕಿನಲ್ಲಿ ಅಡಿಗೆ ಮನೆಯನ್ನು ನಿರ್ಮಿಸುವುದು ಅತ್ಯಂತ ಸೂಕ್ತವೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಮಲಗುವ ಕೊಠಡಿ ಇದ್ದರೆ ಕುಟುಂಬದವರ ನಡುವೆ ಜಗಳ, ಒತ್ತಡ ಮತ್ತು ನಿದ್ರಾಹೀನತೆ ಹೆಚ್ಚಾಗಬಹುದು ಎಂದು ವಾಸ್ತು ಹೇಳುತ್ತದೆ.
ಪರಿಹಾರ
ಮಲಗುವ ಕೋಣೆಯ ಗೋಡೆಗಳಿಗೆ ನೀಲಿ ಅಥವಾ ಹಸಿರು ಬಣ್ಣ ಬಳಿಸುವುದು ಒಳ್ಳೆಯದು. ಹಾಸಿಗೆಯ ತಲೆ ಭಾಗವನ್ನು ದಕ್ಷಿಣ ದಿಕ್ಕಿಗೆ ಇಡುವುದು ಸೂಕ್ತ. ಹಾಸಿಗೆಯ ಎದುರು ಕನ್ನಡಿ ಇರಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ.
ಮನೆಯ ಮಧ್ಯಭಾಗದಲ್ಲಿ ಅತಿಯಾದ ವಸ್ತುಗಳು
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮಧ್ಯಭಾಗವನ್ನು ಬ್ರಹ್ಮಸ್ಥಾನ ಎಂದು ಕರೆಯಲಾಗುತ್ತದೆ. ಇದು ಮನೆಯ ಪ್ರಮುಖ ಶಕ್ತಿ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಇದನ್ನು ಯಾವಾಗಲು ಸ್ವಚ್ಚವಾಗಿ ಮತ್ತು ಮುಕ್ತವಾಗಿಡಬೇಕು. ಇಲ್ಲಿ ಭಾರವಾದ ಪೀಠೋಪಕರಣಗಳು ಅಥವಾ ಅತಿಯಾದ ವಸ್ತುಗಳನ್ನು ಇಡುವುದರಿಂದ ಮನೆಯೊಳಗಿನ ಸಕಾರಾತ್ಮಕ ಶಕ್ತಿಯ ಹರಿವು ಕುಂಠಿತವಾಗಬಹುದು.
ಪರಿಹಾರ
ಮನೆಯ ಮಧ್ಯಭಾಗವನ್ನು ಸಾಧ್ಯವಾದಷ್ಟು ಖಾಲಿ ಮತ್ತು ಸ್ವಚ್ಛವಾಗಿಡಬೇಕು. ಹಗುರವಾದ ಬಣ್ಣದ ಅಲಂಕಾರ ಬಳಸುವುದು ಉತ್ತಮ. ಗುಲಾಬಿ ಬಣ್ಣ ಅಥವಾ ಕಂದು ಬಣ್ಣ ಬಳಸುವುದರಿಂದ ಮನೆಯೊಳಗಿನ ಸಕಾರಾತ್ಮಕ ಶಕ್ತಿಯ ಹರಿವು ಸುಧಾರಿಸುತ್ತದೆ ಎಂದು ನಂಬಲಾಗಿದೆ.














Click it and Unblock the Notifications