343 ಕಿ.ಮೀನಲ್ಲಿ ಆನಿ ಪಾಲೆಷ್ಟು ಆಡಿನ ಪಾಲೆಷ್ಟು: ರಾಜಾರಾಂ ತಲ್ಲೂರು ಬರಹ
343 ಕಿಮೀ ಸಮುದ್ರ ತೀರ ಕರಾವಳಿ ಪ್ರದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ, ಅದರಿಂದ ಜನರ ಮೇಲಾಗುವ ಪರಿಣಾಮಗಳ ಬಗ್ಗೆ ಹಾಗೂ ಅಲ್ಲಿನ ಪರಿಸರ ಹಾನಿಯ ಬಗ್ಗೆ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ.
ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯ ಬಗ್ಗೆ ಈಚೆಗೆ ನಡೆದ ಸಮಾವೇಶದಲ್ಲಿ ಕರ್ನಾಟಕ ಸರ್ಕಾರದ ಎಲ್ಲ ಹಿರಿತಲೆಗಳು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾದಿಯಾಗಿ ಪಾಲ್ಗೊಂಡಿದ್ದರು. ಕರಾವಳಿಗೆ ಬೂದಿಮಳೆ, ವಿಷಗಾಳಿ ಎರಚುವ ಬದಲು ಪ್ರವಾಸೋದ್ಯಮದಂತಹ ವಾಣಿಜ್ಯ ಚಟುವಟಿಕೆಗಳು ಹೆಚ್ಚು ಸಹನೀಯ ಎಂಬುದರಲ್ಲಿ ಎರಡು ಮಾತಿಲ್ಲ. ಸಂತೋಷವೇ. ಆದರೆ, ಈ ಅಭಿವೃದ್ದಿಗಳೆಲ್ಲ ಸ್ವಲ್ಪ ಸಂತುಲಿತವಾಗಿ, ಸುಯೋಜಿತವಾಗಿ ಆಗಲಿ ಎಂದು ಪ್ರಾರ್ಥನೆ.

ಸುಮಾರು 40 ವರ್ಷ ಹಿಂದೆ ಇಲ್ಲಿನ ಕರಾವಳಿಯ ಸಮುದ್ರತೀರಗಳೆಂದರೆ ಮೀನುಗಾರ ಸಮುದಾಯದ ಬದುಕು ಮತ್ತು ಸಂಜೆ ಆಸಕ್ತರ ಸಮುದ್ರ ತೀರ ವಿಹಾರದ ತಾಣ ಆಗಿತ್ತು; ಮತ್ಸ್ಯೋದ್ಯಮ ಇಲ್ಲಿನ ಆರ್ಥಿಕತೆಗೆ ತನ್ನ ಆರೋಗ್ಯವಂತ ಕೊಡುಗೆ ನೀಡುತ್ತಿತ್ತು. ಬಂದರು ಮೂಲಕ ಸರಕು-ಮೀನು ಇತ್ಯಾದಿಗಳೆಲ್ಲ ಸುಖಸಂಚಾರ ಮಾಡುತ್ತಿದ್ದವು ಎಲ್ಲವೂ ಸುಸೂತ್ರವಿತ್ತು, ಜನ ಶುದ್ಧ ಗಾಳಿ ಉಸಿರಾಡುತ್ತಿದ್ದರು. ಬದುಕು ಸಹನೀಯವಿತ್ತು.
ಆದರೆ ಈಗ ಪರಿಸ್ಥಿತಿ ಹಾಗಿಲ್ಲ. MRPL, BSF, ಅದಾನಿ UPCL, ಟೆಬ್ಮಾ, ISPRL, ಎಂಬಿತ್ಯಾದಿ ಮಹಾ ಕಾರ್ಖಾನೆಗಳು ಇಲ್ಲಿಗೆ ಬಂದಿವೆ. ಪರಿಸರ ಸಂಪೂರ್ಣ ಹಾನಿಯಾಗಿದೆ. ಕ್ಯಾನ್ಸರ್, ಅಲರ್ಜಿ, ಚರ್ಮರೋಗ, ಶ್ವಾಸಕೋಶದ ರೋಗಗಳಂತಹ ಆರೋಗ್ಯ ಸಮಸ್ಯೆಗಳು ಉಲ್ಬಣಗೊಂಡಿವೆ. ಹಾಗೆಂದು ಹಸಿರು ನ್ಯಾಯಪೀಠವೇ UPCLಗೆ ಕೇವಲ ಸರ್ಕಾರಿ ಆಸ್ಪತ್ರೆ ಲೆಕ್ಕಾಚಾರಗಳನ್ನಾಧರಿಸಿ 50 ಕೋಟಿ ದಂಡ ವಿಧಿಸಿದ್ದಿದೆ. ಖಾಸಗಿ ಆಸ್ಪತ್ರೆಗಳ ಲೆಕ್ಕಾಚಾರವನ್ನೂ ಪರಿಗಣಿಸಿದ್ದರೆ NGT ಬೆಚ್ಚಿಬೀಳುತ್ತಿತ್ತು. ಇನ್ನು ಮರಳು, ಲ್ಯಾಟರೈಟ್ ಗಣಿಗಾರಿಕೆಗಳದು, ಸಮುದ್ರ ಕೊರೆತದ್ದು-ಭೂಕುಸಿತದ್ದು ಬೇರೆಯದೇ ಕಥೆ.
ಪರಿಸರ "ಸಬ್ ಚೆಂಗಾಸಿ" ಎಂದು ಪರಿಸರ ನಿಗಾ ಯಂತ್ರಗಳು, ದಾಖಲೆಗಳು, ಪರಿಸರ ಮಾಲಿನ್ಯ ಮಂಡಳಿ ಆಗಾಗ ದಾಖಲೆಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳುತ್ತಿವೆಯೇ ಹೊರತು ಪರಿಸರದ ಸ್ಥಿತಿ ಏನೆಂಬ ಬಗ್ಗೆ ವಾಸ್ತವಿಕ ಚಿತ್ರಣ ಯಾರಿಗೂ, ಕಣ್ಣಾರೆ ಕಂಡರೂ ಗೊತ್ತಾಗದ "ಪೋಸ್ಟ್ ಟ್ರುಥ್" ಸ್ಥಿತಿ ಈಗ ಇಲ್ಲಿದೆ. ಸಮುದ್ರಕ್ಕೆ ಆಳ ಸಮುದ್ರದ ಲೈಟ್ ಫಿಷಿಂಗ್, ಬುಲ್ ಟ್ರಾಲ್ ಹೆಸರಲ್ಲಿ ಬರ ಬಂದಿದೆ. ಸಾಂಪ್ರದಾಯಿಕ ಮೀನುಗಾರರ ಸಬ್ಸಿಡಿಗಳನ್ನು ಕತ್ತರಿಸುವ ಮೂಲಕ, ನಿಧಾನಕ್ಕೆ ಮೀನುಗಾರಿಕೆ ಲಾಭದಾಯಕ ಅಲ್ಲ,ಅಲ್ಲಿಂದ ಜಾಗ ಖಾಲಿ ಮಾಡಿ. ಮೀನುಗಾರಿಕೆಯನ್ನು ಕಾರ್ಪೊರೇಟ್‌ಗಳು ಮಾಡಲಿದ್ದಾರೆ ಎಂಬ ನರೇಟಿವ್ ಸಿಗ್ನಲ್ ಬರಲಾರಂಭಿಸಿ 10ವರ್ಷಗಳಾಗಿವೆ.
343 ಕಿಮೀ ಸಮುದ್ರ ತೀರದಲ್ಲಿ ಈಗ ಬಂದರುಗಳು, ಸರ್ಕಾರಿ ಯೋಜನೆಗಳು, ಸೇನಾ ಯೋಜನೆಗಳು, ಹರಡಿಕೊಂಡಿರುವ ತೀರ ಭಾಗ ಎಷ್ಟು? ಖಾಸಗಿ ರೆಸಾರ್ಟ್‌ಗಳ ಹೆಸರಿನಲ್ಲಿ "ಎಕ್ಸ್‌ಕ್ಲೂಸಿವ್" ಮಾಡಿಕೊಂಡಿರುವ ತೀರಭಾಗ ಎಷ್ಟು? ಎಲ್ಲ ಕಳೆದು ಬಳಿಕ ಸಾಂಪ್ರದಾಯಿಕ ಮೀನುಗಾರರಿಗೆಂದು ಉಳಿದಿರುವ ತೀರಭಾಗ ಎಷ್ಟು? ಕಳೆದ 10 ವರ್ಷಗಳಲ್ಲಿ ಸಾಂಪ್ರದಾಯಿಕ ಮೀನುಗಾರರು ತಮ್ಮ ಕಸುಬು ನಷ್ಟಕಾರಿ ಎಂಬ ನರೇಟಿವ್ ಕಾರಣಕ್ಕೆ ಅದನ್ನು ಹೊರಗಿನ ಖಾಸಗಿ ರೆಸಾರ್ಟಿನವರಿಗೆ ಮಾರಿ ಹೋಗಿರುವ ಪ್ರಕರಣಗಳು ಎಷ್ಟಿವೆ? ಎಷ್ಟು ಜನ ಮೀನುಗಾರರೇ ತಮ್ಮ ನೆಲವನ್ನು "ರೀಪರ್ಪಸ್" ಮಾಡಿಕೊಂಡು ರೆಸಾರ್ಟ್ ತೆರೆದಿದ್ದಾರೆ? CRZ ವಲಯ ಸಡಿಲು-ಟೈಟು-ಸಡಿಲು-ಟೈಟು ಮಾಡಿ ಆಡಿದ ಆಟದಿಂದ ಕರಾವಳಿ ರಿಯಲ್ ಎಸ್ಟೇಟ್ ಮೇಲೆ ಏನು ಪರಿಣಾಮ ಆಗಿದೆ? ಇವೆಲ್ಲ ಅಧ್ಯಯನ ಆಗಿದೆಯೆ?
ಇದರ ಮೇಲೆ ಟೆಕ್ಸ್‌ಟೈಲ್ ಪಾರ್ಕಂತೆ, ಡೇಟಾ ಸೆಂಟರ್, ಮೀನು ಸಂಸ್ಕರಣೆ-ರಫ್ತುಕೇಂದ್ರವಂತೆ, ಸಿಕ್ಕಾಪಟ್ಟೆ ಬಂದರು ಅಭಿವೃದ್ಧಿಯಂತೆ, ಸಿಮೆಂಟು ಕಾರ್ಖಾನೆ ಅಂತೆ, ಅಣುವಿದ್ಯುತ್ ಸ್ಥಾವರ ಅಂತೆ, ಇನ್ನೂ ಏನೇನೋ ಉದ್ಯಮಗಳಂತೆ... ಹೀಗೆ ಅಂಗಡಿಯಲ್ಲಿ ಕಂಡದ್ದೆಲ್ಲ ಬೇಕೆಂದು ರಚ್ಚೆ ಹಿಡಿಯುವ ಮಕ್ಕಳ ಸ್ಥಿತಿಯಂತಾಗಿದೆ ಉದ್ಯಮಿಗಳದ್ದು. ಅವರಿಗೆ ಇಲ್ಲಿ ಬದುಕುವವರ ಪರಿವೆ ಇದ್ದಂತಿಲ್ಲ. ಆ ಮೇಲೆ ಇಲ್ಲಿ ಶುರುವಾಗಿರುವ ಆನಿದಾಳಿ! ಇಲ್ಲಿ ದುಡಿಯುವ ಜನ USA, ಗಲ್ಫ್‌ಗೆ ವಲಸೆ ಹೋದರೆ ಇಲ್ಲಿಗೆ ಉತ್ತರ ಭಾರತದ ಕಾರ್ಮಿಕರು ವಲಸೆ ಬರುತ್ತಿದ್ದಾರೆ.
ಊರು ವೃದ್ಧಾಶ್ರಮ ಆಗಿದೆ. ಬ್ಯಾಂಕುಗಳ ತೊಟ್ಟಿಲು ಬರಡಾಗಿದೆ. ಗೇರು ಉದ್ಯಮ ಸರ್ಫೇಸಿ ಆಗಿದೆ. ಮಲ್ಲಿಗೆ ಕೃಷಿ ಎಲ್ಲಿಗೂ ಸಲ್ಲದೆ ಕಂಗೆಟ್ಟಿದೆ. ಹಂಚು ಉದ್ಯಮ ಮುಚ್ಚಿಕೊಂಡಿದೆ.... ಕರಾವಳಿಯ ಸಹಜ ಸಂಕಟಪಟ್ಟಿ ಪಟ್ಟಿ ತುಂಬಾದೊಡ್ಡದಿದೆ. ಇದನ್ನೆಲ್ಲ ಗಮನದಲ್ಲಿ ಇರಿಸಿಕೊಂಡು ಸಮಗ್ರ ಅಧ್ಯಯನ ಮಾಡಿ, ಮುಂದಿನ 20 ವರ್ಷಗಳಲ್ಲಿ ಕನ್ನಡ ಕರಾವಳಿಗೆ ಎಷ್ಟು ಅಭಿವೃದ್ದಿ? ಏನು ಅಭಿವೃದ್ದಿ? ಎಲ್ಲಿಗೆ ಪೂರ್ಣವಿರಾಮ ಎಂಬುದನ್ನೆಲ್ಲ ಇಲ್ಲಿ ಜೀವ ಹಿಡಿದುಕೊಂಡಿರುವ ಜನರಿಗೆ ತಿಳಿಸಿ, ಮನವರಿಕೆ ಮಾಡಿ, ಇಲ್ಲಿನ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕಾಗಿ ಕೈಮುಗಿದು ವಿನಂತಿಸಿಕೊಳ್ಳುತ್ತೇನೆ.
ರಾಜಾರಾಂ ತಲ್ಲೂರು, ಹಿರಿಯ ಪತ್ರಕರ್ತ












Click it and Unblock the Notifications