ವಿಧಾನಸಭೆ ಚುನಾವಣೆ 2023; 30 ಮಹಿಳೆಯರಿಗೆ ಟಿಕೆಟ್ ಕೊಡಬೇಕು ಎಂದು ಮಹಿಳಾ ಕಾಂಗ್ರೆಸ್ ಆಗ್ರಹ
ಬೆಂಗಳೂರು, ಜನವರಿ 12: 2023 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಲ್ಲಿ 30 ಜನ ಮಹಿಳೆಯರಿಗೆ ಟಿಕೆಟ್ ನೀಡಬೇಕು ಎಂದು ಮಹಿಳಾ ಕಾಂಗ್ರೆಸ್ ಬೇಡಿಕೆ ಇಟ್ಟಿದೆ.
ಈ ಕುರಿತು ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವೆ ಉಮಾಶ್ರೀ ಮಾತನಾಡಿ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿಯು ನಾ ನಾಯಕಿ ಸಮಾವೇಶ ಮಾಡಲು ಅವಕಾಶ ನೀಡಿದೆ. ಪಕ್ಷದ ಅಧ್ಯಕ್ಷರಾದ ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಸೇರಿದಂತೆ ವರಿಷ್ಠರ ಸಹಕಾರ ಸಿಕ್ಕಿದೆ. ಜನವರಿ 16ರಂದು ಅರಮನೆ ಮೈದಾನದಲ್ಲಿ ಬೆಳಗ್ಗೆ 11 ಗಂಟೆಗೆ ರಾಷ್ಟ್ರೀಯ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಈ ಸಮಾವೇಶವನ್ನು ಉದ್ಘಾಟನೆ ಮಾಡಲಿದ್ದಾರೆ.
ಈ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಮಹಿಳೆಯರು, ಬೆಂಗಳೂರಿನ ಸುತ್ತ ಮುತ್ತಲ ಜಿಲ್ಲೆಗಳಿಂದ ಮಹಿಳಾ ನಾಯಕಿಯರು, ಶಾಸಕಿಯರು, ಪರಾಜಿತ ಅಭ್ಯರ್ಥಿಗಳು, ಟಿಕೆಟ್ ಆಕಾಂಕ್ಷಿಗಳು, ಪದಾಧಿಕಾರಿಗಳು ಸೇರಿ ಈ ಕಾರ್ಯಕ್ರಮ ಮಾಡಲಾಗುತ್ತಿದೆ.

ಅಂದು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು. ವಿಶೇಷವಾಗಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಮಹಿಳೆಯರಿಗೆ ಹೆಚ್ಚಿನ ಟಿಕೆಟ್ ನೀಡಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯಾಂಕಾ ಗಾಂಧಿ ಅವರಿಗೆ ಪಕ್ಷದ ಎಲ್ಲ ನಾಯಕಿಯರು ಸೇರಿ ಮನವಿ ಮಾಡುತ್ತೇವೆ ಎಂದು ಹೇಳಿದರು.
ಈಗಾಗಲೇ ಕಾಂಗ್ರೆಸ್ ಪಕ್ಷ ಉತ್ತರ ಪ್ರದೇಶ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಟಿಕೆಟ್ ನೀಡಿ, ಒಂದು ಪ್ರಯತ್ನ ಮಾಡಲಾಗಿದೆ. ಇದುವೆರಗೂ ಪಕ್ಷದಲ್ಲಿ 109 ಮಹಿಳೆಯರು ಪಕ್ಷದ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದು, ಇದುವರೆಗೂ ಅತಿ ಹೆಚ್ಚು ಮಹಿಳಾ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಹೆಚ್ಚಿನ ಒಲವು ತೋರಿಸಬೇಕು ಎಂದು ಕೇಳಿಕೊಳ್ಳುತ್ತೇವೆ ಎಂದರು
ನಾ ನಾಯಕಿ ಕಾರ್ಯಕ್ರಮ ಯಶಸ್ಸಿಗಾಗಿ ಎಲ್ಲ ಸ್ಥರದ ಮಹಿಳೆಯರು ಪ್ರಯತ್ನಿಸುತ್ತಿದ್ದಾರೆ. ನಾವು ರಾಜ್ಯದ ಎಲ್ಲ ಪಂಚಾಯ್ತಿ, ವಾರ್ಡ್ ಮಟ್ಟದ ನಾಯಕಿಯರು ಈ ಕಾರ್ಯಕ್ರಮಕ್ಕೆ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು 1 ಲಕ್ಷಕ್ಕೂ ಹೆಚ್ಚು ಮಂದಿ ಮಹಿಳೆಯರು ಆಗಮಿಸಲಿದ್ದಾರೆ.

ಇನ್ನೂ ಈ ವೇಳೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮಾತನಾಡಿ, ಇದೇ 16ರಂದು ಪ್ರಿಯಾಂಕಾ ಗಾಂಧಿ ಅವರನ್ನು ಬರ ಮಾಡಿಕೊಳ್ಳಲು ನಾವೆಲ್ಲರೂ ಉತ್ಸುಕರಾಗಿ ಕಾಯುತ್ತಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ನಾವು ಜನರನ್ನು ಹೆಚ್ಚಿನ ಪ್ರಮಾಣದಲ್ಲಿ ತಲುಪಲು ನಮ್ಮ ನಾಯಕರಾದ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಪ್ರಜಾಧ್ವನಿ ಬಸ್ ಯಾತ್ರೆ ಆರಂಭಿಸಿದ್ದಾರೆ. ನಿನ್ನೆ ಯಾತ್ರೆ ಮೊದಲ ದಿನ ಪಕ್ಷ ಗೃಹಜ್ಯೋತಿ ಎಂಬ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವ ಯೋಜನೆ ಘೋಷಿಸಲಾಗಿದೆ.
ಈ ಬಾರಿ ಪಕ್ಷದ ವತಿಯಿಂದ ಮಹಿಳೆಯರಿಗಾಗಿ ಪ್ರತ್ಯೆಕ ಪ್ರಣಾಳಿಕೆ ನೀಡಲು ಮಹಿಳೆಯರಿಂದಲೇ ಸಲಹೆಗಳನ್ನು ಪಡೆಯಲು ಆಹ್ವಾನ ನೀಡಲಾಗಿದೆ. ಎಲ್ಲ ವರ್ಗದ ಜನರನ್ನು ಮುಟ್ಟಲು ಈ ಪ್ರಯತ್ನ ಮಾಡಲಾಗಿದೆ. ಮಹಿಳಾ ಕಾಂಗ್ರೆಸ್ ಜಿಲ್ಲಾ, ಬ್ಲಾಕ್, ಬೂತ್ ಮಟ್ಟದ ಅಧ್ಯಕ್ಷರು ಈ ವಿಚಾರವನ್ನು ತಳಮಟ್ಟದವರೆಗೆ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಜೂಮ್ ಮೂಲಕ 3 ಬಾರಿ ಮಹಿಳಾ ಪದಾಧಿಕಾರಿಗಳ ಸಭೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚು ಮಹಿಳೆಯರು ಆಗಮಿಸುವ ನಿರೀಕ್ಷೆ ಇದೆ. ಪ್ರತಿ ವಾರ್ಡ್ ಹಾಗೂ ಪಂಚಾಯ್ತಿ ಮಟ್ಟದಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಸ್ವಾಗತಿಸಲು ತೀರ್ಮಾನಿಸಲಾಗಿದೆ.












Click it and Unblock the Notifications