ಲಿಂಗಾಯತ ಮೀಸಲಾತಿ ಹೋರಾಟ; ಏ.21ರಿಂದ ಮತ್ತೆ ಧರಣಿ
ಬೆಂಗಳೂರು, ಏಪ್ರಿಲ್ 18; ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಹಿಂದುಳಿದ ವರ್ಗ 2ಎ ಮೀಸಲಾತಿ ನೀಡುವ ಸಂಬಂಧ ಸರ್ಕಾರ ಕೊಟ್ಟ ಭರವಸೆಗಳು ಈಡೇರಿಲ್ಲ. ಈ ಹಿನ್ನಲೆಯಲ್ಲಿ ಮತ್ತೆ ಧರಣಿ ನಡೆಸಲು ತೀರ್ಮಾನಿಸಲಾಗಿದೆ.
ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸೋಮವಾರ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 21ರಿಂದ ಕೂಡಲಸಂಗಮದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ.
ಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರವು ಕೊಟ್ಟ ಮಾತು ತಪ್ಪಿರುವ ಕಾರಣ ಮತ್ತು ಸಮಾಜವು ಸರ್ಕಾರಕ್ಕೆ ಕೊಟ್ಟ ಅಂತಿಮ ಗಡುವು ಮುಗಿದ ಕಾರಣಕ್ಕೆ ಧರಣಿ ನಡೆಸಲು ತೀರ್ಮಾನ ಮಾಡಲಾಗಿದೆ.

21ನೇ ಏಪ್ರಿಲ್ ಗುರುವಾರದಿಂದ ಪ್ರತಿದಿನ ಬೆಳಗ್ಗೆ 8 ರಿಂದ 5ರ ತನಕ ಕೂಡಲಸಂಗಮ ದೇವಾಲಯದ ಆವರಣದಲ್ಲಿ ಧರಣಿ ನಡೆಸಲಾಗುತ್ತದೆ. ಕೂಡಲಸಂಗಮ ರಥೋತ್ಸವ ಶುಭದಿನದಂದು ಈ ಧರಣಿ ಸತ್ಯಾಗ್ರಹಕ್ಕೆ ಚಾಲನೆ ದೊರೆಯಲಿದೆ.
ಮಕ್ಕಳ ಶಿಕ್ಷಣ ಹಾಗೂ ವಿಧ್ಯಾರ್ಥಿಗಳ ಉದ್ಯೋಗಕ್ಕಾಗಿ ರಾಜ್ಯ ಸರ್ಕಾರ 2ಎ ಹಾಗೂ ಲಿಂಗಾಯತ ಎಲ್ಲಾ ಸಮಾಜಗಳಿಗೆ ಕೆಂದ್ರ ಸರ್ಕಾರ ಒಬಿಸಿ ಮೀಸಲಾತಿಗೆ ಸೇರ್ಪಡೆಗೊಳಿಸುವಂತೆ ಹಕ್ಕೊತ್ತಾಯ ಮಾಡಲು ಪಂಚ ಹಂತದ ಚಳುವಳಿ ನಡೆಸಲಾಗುತ್ತಿದೆ. ಇದಕ್ಕಾಗಿ ಕೂಡಲಸಂಗಮದಲ್ಲಿ ನಿರಂತರ ಸತ್ಯಾಗ್ರಹ ಪ್ರಾರಂಭಗೊಳ್ಳುತ್ತಿದೆ.
ಶುಕ್ರವಾರ ಕೂಡಲ ಸಂಗಮದಲ್ಲಿ ಪಂಚಮಸಾಲಿ ಮಹಾಸಭಾ ಟ್ರಸ್ಟ್ ಸಭೆ ನಡೆದಿತ್ತು. ಸಭೆಯಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲು ಏಪ್ರಿಲ್ 21ರಿಂದ ಹೋರಾಟ ನಡೆಸಲು ತೀರ್ಮಾನಿಸಲಾಗಿತ್ತು.
ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಬಸವಜಯ ಮೃತ್ಯುಂಜಯ ಸ್ವಾಮೀಜಿ, "ಈಗಾಗಲೇ 4 ಹಂತದ ಹೋರಾಟ ನಡೆದಿದ್ದು ಸರ್ಕಾರ ಈವರೆಗೂ ಸ್ಪಂದಿಸದ ಕಾರಣ ಐದನೇ ಹಂತದ ಹೋರಾಟ ನಡೆಸಲಾಗುತ್ತಿದೆ. ಈ ಬಾರಿ ನಾನಾ ಹಂತಗಳಲ್ಲಿ ಹೋರಾಟ ನಡೆಯಲಿದೆ" ಎಂದು ಹೇಳಿದ್ದರು.
ಏಪ್ರಿಲ್ 21ರಿಂದ ಮೇ 3ರ ತನಕ ಕೂಡಲಸಂಗಮದ ಸಂಗಮನಾಥ ದೇವಾಲಯದ ಆವರಣದಲ್ಲಿ ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯ ತನಕ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನ ಮಾಡಲಾಗಿದೆ.












Click it and Unblock the Notifications