ಗ್ರಾಮ ಪಂಚಾಯಿತಿ ಉಪ ಚುನಾವಣೆ ಘೋಷಣೆ: ಮತದಾನ, ಫಲಿತಾಂಶ ದಿನದ ವೇಳಾಪಟ್ಟಿ
ಬೆಂಗಳೂರು, ಏಪ್ರಿಲ್ 27: ರಾಜ್ಯದಲ್ಲಿ ಮತ್ತೆ ಚುನಾವಣೆ ಎದುರಾಗಿದೆ. ರಾಜ್ಯ ಚುನಾವಣಾ ಆಯೋಗ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ/ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ವೇಳಾಪಟ್ಟಿಯನ್ನು ಘೋಷಣೆ ಮಾಡಿದೆ. 31 ಜಿಲ್ಲೆಯ, 135 ತಾಲೂಕಿನ, 223 ಗ್ರಾಮ ಪಂಚಾಯಿತಿಗಳ 265 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮೇ 25ರಂದು ಮತದಾನ ನಡೆಯಲಿದ್ದು, ಮೇ 28ರಂದು ಮತ ಎಣಿಕೆ ನಡೆಯಲಿದೆ.
ಈ ಕುರಿತು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಪ್ರಕಾಶ್. ಎಸ್. ಮರಬಳ್ಳಿ ಆದೇಶವನ್ನು ಹೊರಡಿಸಿದ್ದಾರೆ. ಭಾರತ ಸಂವಿಧಾನ ಅನುಚ್ಛೇದ 243K ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 308ರಲ್ಲಿ ದತ್ತವಾಗಿರುವ ಅಧಿಕಾರದ ಮೇರೆಗೆ, ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ/ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ಘೋಷಣೆ ಮಾಡಲಾಗಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 308ಎಎ ಮತ್ತು 308ಎಬಿ ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಚುನಾವಣೆ ನಡೆಸುವ) ನಿಯಮಗಳು 1993ರ ನಿಯಮ 12ರನ್ವಯ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಲಾಗಿದೆ. ಜಿಲ್ಲಾ ಚುನಾವಣಾಧಿಕಾರಿಗಳು 8/5/2025ರಂದು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದಾರೆ.
ನಾಮಪತ್ರಗಳನ್ನು ಸಲ್ಲಿಕೆ ಮಾಡಲು ಕೊನೆಯ ದಿನಾಂಕ 14/5/2025. ನಾಮಪತ್ರ ಪರಿಶೀಲನೆ 15/5/2025. ನಾಮಪತ್ರ ವಾಪಸ್ ಪಡೆಯಲು 17/5/2025 ಕೊನೆಯ ದಿನ. ಮತದಾನ ಅಗತ್ಯವಿದ್ದರೆ 25/5/2025ರ ಭಾನುವಾರ ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯ ತನಕ ನಡೆಯಲಿದೆ. ಮತ ಎಣಿಕೆ 28/5/2025ರ ಬುಧವಾರ ನಡೆಯಲಿದೆ. ಗ್ರಾಮ ಪಂಚಾಯಿತಿಗಳ ಉಪ ಚುನಾವಣೆಯಲ್ಲಿ NOTA ಮತ ಚಲಾವಣೆ ಮಾಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಆದೇಶದ ವಿವರಗಳು: ಜಿಲ್ಲಾಧಿಕಾರಿಗಳು ಆಯೋಗ ಆದೇಶಿಸಿರುವ ಚುನಾವಣಾ ವೇಳಾಪಟ್ಟಿಯನ್ನು ಅನುಸರಿಸಿ ಉಪ ಚುನಾವಣೆ ಅಧಿಸೂಚನೆಯನ್ನು ಹೊರಡಿಸಬೇಕು. ಅಧಿಸೂಚನೆ ಪ್ರತಿಗಳನ್ನು ಜಿಲ್ಲಾಧಿಕಾರಿಗಳ ಕಛೇರಿ, ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿ ಕಛೇರಿಯ ಸೂಚನಾ ಫಲಕದ ಮೇಲೆ ಹಾಗೂ ಇನ್ನಿತರ ಮುಖ್ಯ ಸ್ಥಳಗಳಲ್ಲೂ ಸಹ ಪ್ರದರ್ಶಿಸಬೇಕು.
ಗ್ರಾಮ ಪಂಚಾಯಿತಿ ಕಛೇರಿಯ ಸೂಚನಾ ಫಲಕದಲ್ಲಿ ಅಧಿಸೂಚನೆ ಪ್ರಕಟಿಸಿ, ಚುನಾವಣಾ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಸೂಚಿಸುವುದು ಹಾಗೂ ಚುನಾವಣಾ ನೋಟಿಸ್‌ನಲ್ಲಿ ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ಹೆಸರು, ಕ್ಷೇತ್ರದ ಹೆಸರು, ಸದಸ್ಯ ಸ್ಥಾನಗಳ ಸಂಖ್ಯೆ, ಮೀಸಲಾತಿ ವಿವರಗಳನ್ನು ಸ್ಪಷ್ಟವಾಗಿ ನಮೂದಿಸುವಂತೆ ಸೂಚನೆ ನೀಡತಕ್ಕದ್ದು.
ದಿನಾಂಕ 10.5.2025 ರಂದು ಎರಡನೇ ಶನಿವಾರದ ಸಾರ್ವತ್ರಿಕ ರಜಾ ದಿನವಾದ ಕಾರಣ ಅಂದು ಯಾವುದೇ ನಾಮಪತ್ರವನ್ನು ಸ್ವೀಕರಿಸದಂತೆ ಚುನಾವಣಾಧಿಕಾರಿಗಳಿಗೆ ನಿರ್ದೇಶನ ನೀಡುವುದು. ಬೀದರ್ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಇ.ಸಿ.ಐ.ಎಲ್. ಹೈದರಾಬಾದ್ ಅವರು ತಯಾರಿಸಿರುವ ಮಲ್ಟಿಚಾಯ್ಸ್ ವಿದ್ಯುನ್ಮಾನ ಮತ ಯಂತ್ರದ ಮೂಲಕ ಚುನಾವಣೆ ನಡೆಸುವುದು.
ಯಾವುದೇ ಕ್ಷೇತ್ರದಲ್ಲಿ ನಾಮಪತ್ರ ಸ್ವೀಕೃತವಾಗದೇ ಚುನಾವಣೆ ಪ್ರಕ್ರಿಯೆ ಮುಂದುವರೆಯಲಾಗದೆ ಇರುವಂತಹ ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ/ ನಾಮಪತ್ರ ಹಿಂತೆಗೆತ ಇತ್ಯಾದಿ ಕಾರಣಗಳಿಂದ ಯಾವುದೇ ಅಭ್ಯರ್ಥಿಯು ಕಣದಲ್ಲಿರದೆ ಆ ಗ್ರಾಮ ಪಂಚಾಯಿತಿಯ ಯಾವುದೇ ಸ್ಥಾನಕ್ಕೂ ಚುನಾವಣೆ ನಡೆಯದೇ ಇದ್ದಲ್ಲಿ ಅಥವಾ ಗ್ರಾಮ ಪಂಚಾಯಿತಿಯಲ್ಲಿನ ಚುನಾವಣೆ ಘೋಷಿಸಿರುವ ಎಲ್ಲಾ ಸ್ಥಾನಗಳೂ ಅವಿರೋಧವಾಗಿ ಆಯ್ಕೆಯಾಗಿದ್ದು, ಆಯ್ಕೆಯಾದ ಅಭ್ಯರ್ಥಿಯ ಫಲಿತಾಂಶವನ್ನು ಚುನಾವಣಾಧಿಕಾರಿಯು ಘೋಷಿಸಿದ್ದಲ್ಲಿ, ಅಂತಹ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದು ತಕ್ಷಣದಿಂದ ನಿಂತು ಹೋಗುತ್ತದೆ.
ಗ್ರಾಮ ಪಂಚಾಯಿತಿಯ ಯಾವುದೇ ಕ್ಷೇತ್ರದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದಲ್ಲಿ ಅಂತಹ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀತಿ ಸಂಹಿತೆಯು ಜಾರಿಯಲ್ಲಿರುತ್ತದೆ. ನೀತಿ ಸಂಹಿತೆಯು ಜಾರಿಯಲ್ಲಿರುವ ಪ್ರದೇಶಗಳಲ್ಲಿ ಮತದಾನವು ಮುಕ್ತಾಯಗೊಳ್ಳುವ 48 ಗಂಟೆಗಳ ಮೊದಲಿನ ಅವಧಿಯಲ್ಲಿ ಎಲ್ಲಾ ಮದ್ಯದ ಅಂಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಅದರ ಮಾಲೀಕರು, ಅಧಿಭೋಗದಾರರು ಮತ್ತು ಸಂದರ್ಭಾನುಸಾರ ವ್ಯವಸ್ಥಾಪಕರು ಮುಚ್ಚತಕ್ಕದ್ದು ಹಾಗೂ ಮೊಹರು ಮಾಡಿ ಅದರ ಕೀ ಯನ್ನು ಜಿಲ್ಲಾಧಿಕಾರಿಗಳಿಗೆ ಅಥವಾ ಅಧಿಕಾರ ವ್ಯಾಪ್ತಿಯುಳ್ಳ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ರಿಗೆ ಒಪ್ಪಿಸತಕ್ಕದ್ದು.
ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಯಾರಾದರೂ ಮದ್ಯವನ್ನು ಸ್ವಾಧೀನದಲ್ಲಿಟ್ಟು ಕೊಂಡಿರುವುದು ಅಥವಾ ಮದ್ಯವನ್ನು ಸೇವಿಸಿ ಬೀದಿಯಲ್ಲಿ ರಂಪಾಟ ಮಾಡುತ್ತಿರುವುದು ಕಂಡು ಬಂದರೆ ಮುನ್ನೆಚ್ಚರಿಕೆ ಕ್ರಮವಾಗಿ ಚುನಾವಣೆ ಮುಕ್ತಾಯವಾಗುವವರೆಗೆ ಅಂತಹವರನ್ನು ಕಸ್ಟಡಿಯಲ್ಲಿ ಇಡತಕ್ಕದ್ದು. ಚುನಾವಣೆ ಕಾಲದಲ್ಲಿ ಭ್ರಷ್ಟಾಚಾರಗಳನ್ನು ತಡೆಗಟ್ಟುವ ಬಗ್ಗೆ ಸೂಕ್ತ ತಂಡವನ್ನು ರಚಿಸಿ ಕ್ರಮಗಳನ್ನು ಕೈಗೊಳ್ಳುವುದು.
ವಿಶೇಷ ಸೂಚನೆಗಳು
* ಈಗಾಗಲೇ ನೀಡಿರುವ ನಿರ್ದೇಶನಗಳಂತೆ, ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯತಿಗೆ ಸಂಬಂಧಿಸಿದಂತೆ ಹಾಲಿ ಚಾಲ್ತಿಯಲ್ಲಿರುವ ವಿಧಾನಸಭಾ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು ತಯಾರಿಸಲಾಗಿರುವ ಗ್ರಾಮ ಪಂಚಾಯತಿಯ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸುವುದು.
* ಚುನಾವಣೆ ನಡೆಸಲಾಗುವ ಗ್ರಾಮ ಪಂಚಾಯಿತಿಗೆ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿ ಅವರಿಗೆ ತರಬೇತಿಯನ್ನು ಹಾಗೂ ಚುನಾವಣೆಗೆ ಸಂಬಂಧಪಟ್ಟ ಎಲ್ಲಾ ಅಗತ್ಯ ಮಾಹಿತಿ ಹಾಗೂ ಸುತ್ತೋಲೆ/ನಿರ್ದೇಶನ ಪತ್ರಗಳ ಪ್ರತಿಯನ್ನು ನೀಡುವುದು.
* ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಗಮನಕ್ಕೆ ಬಂದಾಗ ಆಯೋಗದ ಆದೇಶದಂತೆ ಕ್ರಮ ವಹಿಸುವುದು.
* ಚುನಾವಣೆ ನಡೆಸಲಾಗುತ್ತಿರುವ ಗ್ರಾಮ ಪಂಚಾಯಿತಿ ಸ್ಥಾನಗಳ ಬಗ್ಗೆ ಸಾರ್ವಜನಿಕರ ಮಾಹಿತಿಗಾಗಿ ಸ್ಥಳೀಯ ಪತ್ರಿಕೆಗಳಲ್ಲಿ ಸುದ್ದಿಯಾಗಿ (ವೆಚ್ಚ ಬಾರದಂತೆ) ಪ್ರಕಟಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವುದು.
* ಕಾಲ ಕಾಲಕ್ಕೆ ಚುನಾವಣೆಗೆ ಸಂಬಂಧಿಸಿದ ವರದಿಯನ್ನು ಆಯೋಗಕ್ಕೆ ಸಲ್ಲಿಸುವುದು.
* ರಾಜ್ಯ ಚುನಾವಣಾ ಆಯೋಗದ ಆದೇಶ ದಿನಾಂಕ 19.03.2015ರಂತೆ ಗ್ರಾಮ ಪಂಚಾಯಿತಿ ಚುನಾವಣೆಗಳ ಮತಪತ್ರದಲ್ಲಿ NOTA ಅವಕಾಶ ಇರುವುದಿಲ್ಲ.












Click it and Unblock the Notifications