ಬೀದರ್-ಚಾಮರಾಜನಗರ: ಕರ್ನಾಟಕದಲ್ಲಿ ಇಂದು ವಿಶ್ವ ದಾಖಲೆ ನಿರ್ಮಾಣ
ಬೆಂಗಳೂರು, ಸೆಪ್ಟೆಂಬರ್ 15: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಸೆಪ್ಟೆಂಬರ್ 15ರಂದು ವಿಶ್ವ ದಾಖಲೆ ನಿರ್ಮಿಸಲು ಕರ್ನಾಟಕ ಸರ್ಕಾರ ಸಕಲ ಸಿದ್ಧತೆ ನಡೆದಿದೆ. ಬೀದರ್‌ನಿಂದ ಚಾಮರಾಜನಗರದ ತನಕ 2,500 ಕಿ. ಮೀ. ಉದ್ದದ ಬೃಹತ್ ಮಾನವ ಸರಪಳಿಯನ್ನು ರಾಜ್ಯಾದ್ಯಂತ ನಿರ್ಮಾಣ ಮಾಡಲಾಗುತ್ತದೆ. ಈ ಮೂಲಕ ವಿಶ್ವ ದಾಖಲೆ ನಿರ್ಮಿಸಲಾಗುತ್ತದೆ. ಸಂವಿಧಾನದ ಪೀಠಿಕೆ ಓದುವುದು, ಗಿಡಗಳನ್ನು ನೆಡುವುದು ಸೇರಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ರಾಜ್ಯದ ಗಡಿ ಜಿಲ್ಲೆಗಳಾದ ಬೀದರ್-ಚಾಮರಾಜನಗರದ ವರೆಗೂ ಸಮಾಜದ ಎಲ್ಲಾ ವರ್ಗದ ಜನರೂ ಸೇರಿದಂತೆ ಸುಮಾರು 25 ಲಕ್ಷ ಮಂದಿ ಕೈಕೈ ಹಿಡಿದು ರಾಜ್ಯದುದ್ದಕ್ಕೂ ವಿಶ್ವದ ಬೃಹತ್ ಮಾನವ ಸರಪಳಿ ನಿರ್ಮಿಸಲಿದ್ದಾರೆ. ಇದೇವೇಳೆ ಸಂವಿಧಾನದ ಮಹತ್ವ ಸಾರುವ ಪ್ರಸ್ತಾವನೆ ಓದುವುದು ಹಾಗೂ ಪ್ರಜಾಪ್ರಭುತ್ವದ ರಕ್ಷಣೆಯ ಹೊಣೆಗಾರಿಕೆ ನೆನಪಿಸುವ ಜಾಗೃತಿ ಮೂಡಿಸಲಿದ್ದಾರೆ. ಹಾಗೆಯೇ, ಇಂದು ರಾಜ್ಯಾದ್ಯಂತ ಸುಮಾರು 10 ಲಕ್ಷ ಗಿಡಗಳನ್ನು ನೆಡಲಾಗುತ್ತದೆ.

32 ಇಲಾಖೆಗಳ ಸಹಯೋಗ: ಸಮಾಜ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ರಾಜ್ಯದ 32 ಇಲಾಖೆಗಳ ಸುಮಾರು 8 ಲಕ್ಷಕ್ಕೂ ಅಧಿಕ ಸಿಬ್ಬಂದಿ ಇಡೀ ಕಾರ್ಯಕ್ರಮಕ್ಕಾಗಿ ಶ್ರಮಿಸುತ್ತಿದ್ದಾರೆ. ಸಚಿವ ಡಾ. ಹೆಚ್. ಸಿ. ಮಹಾದೇವಪ್ಪ ಹೆಚ್ಚಿನ ಆಸಕ್ತಿ ವಹಿಸಿ ಸಿದ್ಧತೆಗಳನ್ನು ನಡೆಸಿದ್ದಾರೆ. ಈ ವಿನೂತನ ಮತ್ತು ಬೃಹತ್ ಕಾರ್ಯಕ್ರಮಕ್ಕೆ ಲಂಡನ್‌ನ ವಿಶ್ವ ದಾಖಲೆ ಪರಿಶೀಲಿಸುವ ತಂಡ ಆಗಮಿಸಲಿದ್ದು, ಎಲ್ಲವೂ ದಾಖಲೆಗಳ ನಿಯಮದಂತಿರುವುದನ್ನು ವಿವಿಧ ಹಂತಗಳಲ್ಲಿ ಪರಿಶೀಲನೆ ಮಾಡಲಿದೆ. ನಂತರ ಕಾರ್ಯಕ್ರಮ ದಾಖಲೆಗಳ ನಿಯಮಕ್ಕೆ ಒಪ್ಪುವಂತಿದ್ದರೆ ಈ ಕಾರ್ಯಕ್ರಮವನ್ನು ವಿಶ್ವ ದಾಖಲೆಗೆ ಸೇರಿಸಲಿದೆ.
ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ತಮ್ಮದೇ ರೀತಿಯಲ್ಲಿ ಈ ಕಾರ್ಯಕ್ರಮದ ವಿಶೇಷ ವ್ಯವಸ್ಥೆ ಮಾಡಿದ್ದಾರೆ. ಡ್ರೋನ್ ಚಿತ್ರೀಕರಣ ಹಾಗೂ ಪ್ರತಿ ಜಿಲ್ಲೆ, ತಾಲೂಕುಗಳ ಮಾಹಿತಿಗಳು ಕ್ಷಣಕ್ಷಣದಲ್ಲಿ ಲಭ್ಯವಾಗಿ ಆಯೋಜಕರ ನಡುವೆ ಸಂಪೂರ್ಣ ಸಮನ್ವಯದೊಂದಿಗೆ ನಡೆಯುವಂತೆ ಮಾಡುವ ವಿಶೇಷ ಸುಧಾರಿತ ತಂತ್ರಜ್ಞಾನದ ಜಾಲವೊಂದನ್ನು ತಯಾರಿಸಿದ್ದಾರೆ. ಈ ವಿಶೇಷ ಮಾನವ ಸರಪಳಿ ಪ್ರತಿ ಜಿಲ್ಲೆ, ತಾಲೂಕು ಹಾಗೂ ಪ್ರಮುಖ ಗ್ರಾಮಗಳಲ್ಲಿ ಹಾದು ಹೋಗುವ ಹೆದ್ದಾರಿಗಳಲ್ಲಿ ನಿರ್ಮಾಣವಾಗಲಿದ್ದು, ಎಲ್ಲಾ ಹಳ್ಳಿಗಳಲ್ಲೂ ಇದನ್ನು ಹಬ್ಬದಂತೆ ಆಚರಿಸುವಂತೆ ಮಾಡಲು ಸರ್ಕಾರ ಎಲ್ಲಾ ರೀತಿಯಲ್ಲಿ ತಯಾರಿ ನಡೆಸಿದೆ.
ವಿಶ್ವಸಂಸ್ಥೆ 2007ರ ಸೆ.15 ಅನ್ನು ವಿಶ್ವ ಪ್ರಜಾಪ್ರಭುತ್ವದ ದಿನ ಎಂದು ಘೋಷಿಸಿತ್ತು. ಇದರ ಅಂಗವಾಗಿ ಅನೇಕ ದೇಶಗಳಲ್ಲಿ ಅಂದು ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿವೆ. ಆದರೆ ಇದರ ಮೌಲ್ಯವನ್ನು ಹೆಚ್ಚು ಪ್ರಚಾರ ಮಾಡಿ ವಿಶ್ವ ಮಟ್ಟದಲ್ಲಿ ಸಾರುವ ಪ್ರಯತ್ನವನ್ನು ಕರ್ನಾಟಕ ಸರ್ಕಾರ ಈ ಹಿಂದಿನಿಂದಲೇ ಮಾಡುತ್ತಾ ಬಂದಿದೆ.
ಕಳೆದ ವರ್ಷ ರಾಜ್ಯಾದ್ಯಂತ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಕಾರ್ಯಕ್ರಮ ನಡೆಸಲಾಗಿತ್ತು. ಇದರಲ್ಲಿ ಸುಮಾರು 2.3 ಕೋಟಿ ಭಾಗವಹಿಸಿದ್ದರು. ಇದರಿಂದ ಸ್ಫೂರ್ತಿ ಪಡೆದು ಸರ್ಕಾರ ಈ ಬಾರಿ 25 ಲಕ್ಷ ಜನರು ರಾಜ್ಯದುದ್ದಕ್ಕೂ ನಿಂತು ಸಂವಿಧಾನ ಓದುವಂತೆ ಮಾಡುತ್ತಿದೆ. ಹೀಗಾಗಿ ಇದರಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸುಮಾರು 3 ಕೋಟಿ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಇದರಿಂದ ಇಡೀ ವಿಶ್ವ ಕರ್ನಾಕದ ಕಡೆ ನೋಡುವಂತಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಭಾನುವಾರ ಬೆಳಗ್ಗೆ 9 ಗಂಟೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ಮುಂಭಾಗದಲ್ಲಿ ಸಂವಿಧಾನದ ಪೀಠಿಕೆ ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಆನಂತರ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲೆಗಳ ಸಮಸ್ತ ಜನರು ಸಂವಿಧಾನ ಪೀಠಿಕೆ ಓದಿ ಮಾನವ ಸರಪಳಿ ನಿರ್ಮಿಸುತ್ತಾರೆ. ಆ ಪ್ರದೇಶದಲ್ಲೇ ಗಿಡ ನೆಡುತ್ತಾರೆ. ಹೀಗಾಗಿ ಪ್ರತಿ ಜಿಲ್ಲೆ ತಾಲೂಕುಗಳಲ್ಲೂ ಕಾರ್ಯಕ್ರಮ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವರು ಸಮುದ್ರದಲ್ಲೇ ನಿಂತು ಮಾನವ ಸರಪಳಿ ರಚಿಸಲಿದ್ದಾರೆ. ಇದೇ ಮಾದರಿಯಲ್ಲಿ ವಿವಿಧ ವೇಷ, ಭೂಷಣ ಹಾಗೂ ವಿಶೇಷ ಸಂದೇಶ ಸಾರುವ ವಿಭಿನ್ನ ಪ್ರಯತ್ನ ಮಾಡಿದ ಜಿಲ್ಲೆಗೆ ಪ್ರಶಸ್ತಿಯನ್ನೂ ನೀಡಲಾಗುತ್ತದೆ.
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮ ಇರುವುದರಿಂದ ಕಾರ್ಯಕ್ರಮದ ಯಶಸ್ವಿಗಾಗಿ ಪ್ರತಿ ಸರ್ಕಾರಿ ನೌಕರ ಉಪಸ್ಥಿತರಿದ್ದು, ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕು. ಅನುಮತಿ ಇಲ್ಲದೆ ಯಾರು ರಜೆ ಹೋಗುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.
ಈ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಈಗಾಗಲೇ ರೂಪುರೇಷೆ ಮಾಡಲಾಗಿದೆ. ಮಾನವ ಸರಪಳಿ ರಚನೆ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮ ಆಗಿರುವದರಿಂದ ಪ್ರತಿ ಜಿಲ್ಲೆಯಲ್ಲಿ ಪ್ರತಿಯೊಬ್ಬ ಸರ್ಕಾರಿ ನೌಕರನು ಕಡ್ಡಾಯವಾಗಿ ಇದರಲ್ಲಿ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.
ಸೆಪ್ಟೆಂಬರ್ 14, 15 ಮತ್ತು 16 ರಂದು ಸಾರ್ವತ್ರಿಕ ರಜೆ ಇದೆ ಎಂದು ಮುಂಚಿತವಾಗಿ, ಈಗಾಗಲೇ ಯಾವುದೇ ಹಂತದ ಅಧಿಕಾರಿ ಹಾಗೂ ಸಿಬ್ಬಂದಿ ರಜೆ ಹೋಗಿದ್ದರೆ, ಆಯಾ ಇಲಾಖೆ ಮೇಲಾಧಿಕಾರಿ ತಕ್ಷಣ ತಮ್ಮ ಅಧಿಕಾರಿ, ಸಿಬ್ಬಂದಿಗಳ ರಜೆ ರದ್ದುಪಡಿಸಿ, ಅವರು ಮರಳಿ ಕಚೇರಿಗೆ ಹಾಜರಾಗಲು ಸೂಚಿಸಬೇಕು ಎಂದು ತಿಳಿಸಲಾಗಿದೆ. ಅನಿವಾರ್ಯವಾಗಿ ಅಗತ್ಯವಿದ್ದರೆ ಅವರು ನೇರವಾಗಿ ಸ್ವತಃ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಸಂಪರ್ಕಿಸಿ, ರಜೆಗಾಗಿ ಅನುಮತಿ ಪಡೆಯಬೇಕು ಎಂದು ಸೂಚನೆ ನೀಡಲಾಗಿದೆ.












Click it and Unblock the Notifications