ನ. 21ರಂದು ಹಿಂದುಳಿದ ಸಮುದಾಯಗಳ ಸಮಾವೇಶ; ಈಶ್ವರಪ್ಪ
ಬೆಂಗಳೂರು, ಅಕ್ಟೋಬರ್ 27; "ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 21ರಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ವಿವಿಧ ಹಿಂದುಳಿದ ಸಮುದಾಯಗಳ 8 ಜನ ಪ್ರಮುಖರ ರಾಜ್ಯ ಮಟ್ಟದ ಸಮಾವೇಶ ಏರ್ಪಡಿಸಲಾಗುವುದು" ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು.
ಬುಧವಾರ ಬಿಜೆಪಿ ರಾಜ್ಯ ಒಬಿಸಿ ಮೋರ್ಚಾದ ವತಿಯಿಂದ ಬೆಂಗಳೂರಿನ ವಸಂತ್ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ "ಕಾರ್ಯಕರ್ತರ ಸಮಾವೇಶದ" ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
"ಹಿಂದುಳಿದ ಸಮಾಜಗಳ ಮಾಜಿ ಸಂಸದರು, ಮಾಜಿ ಶಾಸಕರು, ಮಾಜಿ ಸಚಿವರು, ವಿಧಾನಪರಿಷತ್ ಮಾಜಿ ಸದಸ್ಯರು ಇದರಲ್ಲಿ ಭಾಗವಹಿಸಲಿದ್ದಾರೆ. ಒಬಿಸಿ ಮೋರ್ಚಾ ಪದಾಧಿಕಾರಿಗಳು ಸೇರಿ ಸುಮಾರು 2 ರಿಂದ 2,500 ಜನರು ಇದರಲ್ಲಿ ಭಾಗವಹಿಸಲಿದ್ದಾರೆ. ಸಮಾವೇಶಕ್ಕೆ ಅರ್ಹರನ್ನು ಗುರುತಿಸಿ ಆಹ್ವಾನಿಸುವ ಕೆಲಸವನ್ನು ಮಾಡಬೇಕು" ಎಂದು ಈಶ್ವರಪ್ಪ ತಿಳಿಸಿದರು.

"ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನೇಕ ಸೌಲಭ್ಯಗಳನ್ನು ನೀಡುತ್ತಿವೆ. ಅವುಗಳ ಬಗ್ಗೆ ತಿಳಿದುಕೊಂಡು ಅರ್ಹ ಫಲಾನುಭವಿಗಳಿಗೆ ತಲುಪಿಸಿ. ಕೇಂದ್ರ ಸರಕಾರದ ಸಚಿವ ಸಂಪುಟದಲ್ಲಿ ಗರಿಷ್ಠ ಸಂಖ್ಯೆಯ ಹಿಂದುಳಿದ ಸಮಾಜದವರು ಮತ್ತು ದಲಿತರಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿ" ಎಂದು ಈಶ್ವರಪ್ಪ ಕರೆ ನೀಡಿದರು.
"ಬಿಜೆಪಿ ಹಿಂದೆಯೂ ಹಿಂದುಳಿದ ಸಮಾಜಗಳ ಮಠಗಳಿಗೆ 100 ಕೋಟಿ ಅನುದಾನ ನೀಡಿದೆ. ಇದರಿಂದ ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್, ಆಸ್ಪತ್ರೆ ಸೇರಿದಂತೆ ವಿವಿಧ ಜನೋಪಯೋಗಿ ಅಭಿವೃದ್ಧಿ ಕಾರ್ಯಗಳೂ ನಡೆದಿವೆ" ಎಂದರು.
"ಹಿಂದುಳಿದ ಸಮಾಜ, ಜನಪ್ರತಿನಿಧಿಗಳು ಮತ್ತು ಸರಕಾರದ ನಡುವಿನ ಕೊಂಡಿಯಾಗಿ ಮೋರ್ಚಾ ಕೆಲಸ ಮಾಡಬೇಕು. ಕುಟುಂಬ, ಜಾತಿಯ ಅಭಿವೃದ್ಧಿಯಿಂದ ಹಿಂದುತ್ವದ ಅಭಿವೃದ್ಧಿ ಸಾಧ್ಯ. ಜಾತಿಯ ಸಂಘಟನೆಗಳ ಸಮಾವೇಶದಲ್ಲಿ ಭಾಗವಹಿಸುವುದು ತಪ್ಪಲ್ಲ" ಎಂದು ಈಶ್ವರಪ್ಪ ಹೇಳಿದರು.
"ಒಂದು ಕಾಲದಲ್ಲಿ ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ದಲಿತರು ಕಾಂಗ್ರೆಸ್ ಜೊತೆಗಿದ್ದರು. ಕಾಂಗ್ರೆಸ್ ಜಾತಿ, ಮತ ರಾಜಕೀಯವನ್ನು ನೆಚ್ಚಿಕೊಂಡಿದೆ. ಈಗ ಹಿಂದುಳಿದವರು ಮತ್ತು ದಲಿತರಲ್ಲಿ ಶೇ 70ಕ್ಕೂ ಹೆಚ್ಚು ಜನರು ಬಿಜೆಪಿ ಜೊತೆಗಿದ್ದಾರೆ" ಎಂದರು.
"ರಾಷ್ಟ್ರೀಯವಾದ ಮುಸ್ಲಿಮರು ಬಿಜೆಪಿ ಜೊತೆಗಿದ್ದಾರೆ. ಅವರೆಲ್ಲರೂ ನರೇಂದ್ರ ಮೋದಿಯವರು, ಬಿ. ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿ ನಮ್ಮ ಜೊತೆಗಿದ್ದಾರೆ. ಕಂಬಳಿ ವಿಚಾರ ಮೇಲೆತ್ತಿ ಸ್ವಲ್ಪವಾದರೂ ಮತ ಪಡೆಯಲು ಕಾಂಗ್ರೆಸ್‌ನವರು ಮುಂದಾಗಿದ್ದಾರೆ" ಎಂದು ಈಶ್ವರಪ್ಪ ವಿವರಿಸಿದರು.
"ಅಷ್ಟು ವರ್ಷ ಆಡಳಿತದಲ್ಲಿದ್ದರೂ ಕಾಂಗ್ರೆಸ್ ವಾಲ್ಮೀಕಿ, ಸಂಗೊಳ್ಳಿ ರಾಯಣ್ಣ ನೆನಪಾಗಲಿಲ್ಲ. ಎಲ್ಲ ಸಮಾಜದಲ್ಲೂ ಮಹಾತ್ಮರಿದ್ದಾರೆ. ಅವರ ಕೊಡುಗೆ, ಜೀವನಾದರ್ಶವನ್ನು ತಿಳಿಸುವ ಕೆಲಸ ನಮ್ಮ ಮೋರ್ಚಾದಿಂದ ನಡೆಯಲಿ" ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು.
ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್. ಎ ಸುವರ್ಣ ಮಾತನಾಡಿ, "ದೇಶದಲ್ಲಿ ಆಡಳಿತ ಮಾಡಿದ ಕಾಂಗ್ರೆಸ್ ಸರಕಾರಗಳು ಹಿಂದುಳಿದ ವರ್ಗದವರನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಂಡವು. ಆದರೆ ಬಿಜೆಪಿ ಸರಕಾರ ಕೇಂದ್ರದಲ್ಲಿ ಆಡಳಿತಕ್ಕೆ ಬಂದ ಬಳಿಕ ಹಿಂದುಳಿದ ವರ್ಗದ ನಿಜವಾದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಇದರಿಂದ ಹಿಂದುಳಿದ ವರ್ಗಗಳು ಈಗ ಬಿಜೆಪಿಯನ್ನು ಬೆಂಬಲಿಸುತ್ತಿವೆ" ಎಂದರು.
ಒಬಿಸಿ ಮೋರ್ಚಾದ ರಾಜ್ಯ ಅಧ್ಯಕ್ಷರಾದ ನೆ. ಲ. ನರೇಂದ್ರಬಾಬು ಮಾತನಾಡಿ, "ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಅಂತ್ಯೋದಯದ ಪರಿಕಲ್ಪನೆಯನ್ನು ನನಸಾಗಿಸಲು ಒಬಿಸಿ ಮೋರ್ಚಾ ಶ್ರಮಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಸರ್ವತೋಮುಖ ಅಭಿವೃದ್ಧಿಯ ಕನಸು ನನಸಾಗುವತ್ತ ನಡೆದಿದೆ" ಎಂದು ವಿವರಿಸಿದರು.
ಸಮಾವೇಶದಲ್ಲಿ ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಒಬಿಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ನೂರೊಂದುಶೆಟ್ಟಿ, ಮಾಜಿ ಸಂಸದರಾದ ವಿರೂಪಾಕ್ಷಪ್ಪ, ಸಿ. ಎಸ್. ವಿಜಯ ಶಂಕರ್, ವಿಶ್ವಕರ್ಮ ನಿಗಮದ ಅಧ್ಯಕ್ಷರಾದ ಬಾಬು ಪತ್ತಾರ್ ಮುಂತಾದವರಿದ್ದರು.












Click it and Unblock the Notifications