ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿಗೆ ಎಚ್.ಡಿ. ದೇವೇಗೌಡರು ಆಯ್ಕೆ: ಕಸಾಪ
ಬೆಂಗಳೂರು, ಜೂನ್ 07: ಕರ್ನಾಟಕದ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ಪ್ರತಿಷ್ಠಿತ ದತ್ತಿ ಪ್ರಶಸ್ತಿಗಳಲ್ಲಿ ಒಂದಾಗಿರುವ 'ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ'ಗೆ ಹಿರಿಯ ರಾಜಕೀಯ ಮುತ್ಸದ್ದಿ, ದೇಶದ ಪ್ರಧಾನಿ ಪಟ್ಟಕ್ಕೆ ಏರಿದ ಮೊದಲ ಕನ್ನಡಿಗರು ಆಯ್ಕೆಯಾಗಿದ್ದಾರೆ.
ಕನ್ನಡದ ಹೆಮ್ಮೆಯ ಮಣ್ಣಿನ ಮಗ ಎಂದು ಕರೆಸಿಕೊಂಡ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರಿಗೆ ಈ 2022ನೇ ಸಾಲಿನ 'ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ'ಗೆ ಭಾಜನರಾಗಿರುತ್ತಾರೆ. ಈ ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಾಡಿನ ಅಭ್ಯುದಯದ ಕನಸು ಕಂಡವರು. ಅವರ ಆಶಯದಂತೆ ನಾಡಿನಲ್ಲಿ ಕೈಗಾರಿಕಾ ಕ್ಷೇತ್ರ, ಕೃಷಿ, ನೀರಾವರಿ, ವಿದ್ಯುಚ್ಛಕ್ತಿ, ಹಿಂದುಳಿದ ವರ್ಗಗಳ ಕಲ್ಯಾಣ, ಸಾಮಾಜಿಕ ನ್ಯಾಯ, ಮಹಿಳಾ ಸಬಲಿಕರಣ, ಗ್ರಾಮ ನೈರ್ಮಲೀಕರಣ, ವೈದ್ಯಕೀಯ ಕ್ಷೇತ್ರ, ನೀರಿನ ಸೌಕರ್ಯ, ಸಾರಿಗೆ ಸೌಲಭ್ಯ, ವ್ಯಾಪಾರ ಸೇರಿದಂತೆ ನಾಡಿನ ಸರ್ವತೋಮುಖ ಅಭಿವೃದ್ಧಿ ವಿಚಾರದಲ್ಲಿ ಸಾಧನೆ ಮಾಡಿದವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.
ಅದರಂತೆ ಕಳೆದ ಸಾಲಿನ ಪ್ರಶಸ್ತಿಯನ್ನು ಹಿರಿಯ ರಾಜಕಾರಣಿ ಎಚ್‌ಡಿ ದೇವೇಗೌಡ ಅವರಿಗೆ ಪ್ರದಾನ ಮಾಡಲಾಗುವುದು. ಸದರಿ ಪ್ರಶಸ್ತಿಯು 51,000 ರೂಪಾಯಿ ನಗದು ಸ್ಮರಣಿಕೆ, ಫಲ ತಾಂಬೂಲ ಒಳಗೊಂಡಿರುತ್ತದೆ ಎಂದು ಅವರು ವಿವರಿಸಿದ್ದಾರೆ.
ಈವರೆಗೆ 12 ಮಂದಿಗೆ ಪ್ರಶಸ್ತಿ
ಈವರೆಗೆ ಪರಿಷತ್ತು ನಾಡಿನ 12 ಜನ ಗಣ್ಯರಿಗೆ ಪರಿಷತ್ತಿನ ಪ್ರತಿಷ್ಠಿತ 'ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ' ಪ್ರದಾನ ಮಾಡಿದೆ. ಈ ಬಾರಿಯ ಆಯ್ಕೆ ಸಮಿತಿಯು ಮಾಜಿ ಪ್ರಧಾನಿ ಎಚ್,ಡಿ,ದೇವೇಗೌಡರನ್ನು ಪ್ರಶಸ್ತಿಗೆ ಗುರುತಿಸಿದೆ. ಅವರು ಸಹ ಕೃಷಿ ಕ್ಷೇತ್ರ, ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿ ಸೇರಿದಂತೆ ಸಮಗ್ರ ಕನ್ನಡ ನಾಡಿನ ಅಭಿವೃದ್ಧಿಗೆ ಶ್ರಮಿಸಿದವರು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ಇತಿಹಾಸ ತಜ್ಞ ಹಾಗೂ ಸಂಶೋಧಕ ಡಾ. ತಲಕಾಡು ಚಿಕ್ಕರಂಗೇಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಂ. ಪಟೇಲ್ ಪಾಂಡು ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications