ರಾಜ್ಯದ ಯಾವ ರಸ್ತೆಗಳು ರಾಷ್ಟ್ರೀಯ ಹೆದ್ದಾರಿ ದರ್ಜೆಗೆ?
ಬೆಂಗಳೂರು, ನ.03: ರಾಜ್ಯದ 2,218 ಕಿ.ಮೀ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಬೇಕೆಂದು ಮನವಿ ಸಲ್ಲಿಸಲಾಗಿದೆ. ಇದಕ್ಕೆ ಕೇಂದ್ರ ಭೂಸಾರಿಗೆ ಸಚಿವಾಲಯ ಒಪ್ಪುವ ಸಾಧ್ಯತೆ ಇದೆ' ಎಂದು ಲೋಕೋಪಯೋಗಿ ಸಚಿವ ಎಚ್ ಸಿ ಮಹದೇವಪ್ಪ ಹೇಳಿದ್ದಾರೆ.
'ಏಷ್ಯಾ ಅಭಿವೃದ್ಧಿ ಬ್ಯಾಂಕ್ ಮತ್ತು ವಿಶ್ವಬ್ಯಾಂಕ್ ನೆರವಿನಿಂದ 3 ಸಾವಿರ ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ನೆರವು ಪಡೆಯುವ ಉದ್ದೇಶ ಇದೆ' ಎಂದು ಹೇಳಿದರು. [ಹೆದ್ದಾರಿ ಕಾಮಗಾರಿಗೆ ಚಾಲನೆ ನೀಡಿ ಅಂಬರೀಷ್]

ರಾಜ್ಯ ಹೆದ್ದಾರಿ ಅಭಿವೃದ್ಧಿ: 'ಮುಂದಿನ ಎರಡೂವರೆ ವರ್ಷದಲ್ಲಿ 11 ಸಾವಿರ ಕಿ.ಮೀ ರಾಜ್ಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲಾಗುವುದು. ಇದಕ್ಕೆ ಹಣಕಾಸು ಇಲಾಖೆ ವಿರೋಧ ವ್ಯಕ್ತಪಡಿಸುತ್ತಿದೆ ಎಂಬುದು ಸುಳ್ಳು. ಸದ್ಯದಲ್ಲೇ ಈ ಕುರಿತು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗುವುದು' ಎಂದು ಮಹದೇವಪ್ಪ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. [ರಾಷ್ಟೀಯ ಹೆದ್ದಾರಿಯಾಗಲಿರುವ ರಾಜ್ಯದ 7 ರಸ್ತೆಗಳು]
* ಬೆಳಗಾವಿ- ಬಾಗಲಕೋಟೆ- ರಾಯಚೂರು (306 ಕಿ.ಮೀ),
* ಯಲ್ಲಾಪುರ- ತಾಳಗುಪ್ಪ- ಭಟ್ಕಳ (219 ಕಿ.ಮೀ),
* ಶಿರಸಿ- ಹಾವೇರಿ- ಕೂಡ್ಲಿಗಿ- ಮೊಳಕಾಲ್ಮೂರು (247 ಕಿ.ಮೀ)
ಸುಮಾರು 16 ರಸ್ತೆಗಳ ಮೇಲ್ದರ್ಜೆಗೆ ಮನವಿ ಮಾಡಲಾಗಿದೆ. ಈ ಕುರಿತು ಕೇಂದ್ರ ಭೂಸಾರಿಗೆ ಸಚಿವರ ಜತೆಗೂ ಮಾತುಕತೆ ನಡೆಸಲಾಗಿದೆ. ಆದಷ್ಟು ಬೇಗ ಆದೇಶ ಹೊರಬೀಳುವ ಸಾಧ್ಯತೆ ಇದೆ' ಎಂದು ಮಹದೇವಪ್ಪ ತಿಳಿಸಿದರು.
ಗುಂಡಿ ಮುಚ್ಚಲು 500 ಕೋಟಿ ರು: ರಾಜ್ಯದ ವಿವಿಧ ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಕಾಮಗಾರಿ ಶೇ 90ರಷ್ಟು ಮುಗಿದಿದೆ. ಈ ಸಲುವಾಗಿ 500 ಕೋಟಿ ರು ವೆಚ್ಚ ಮಾಡಲಾಗಿದೆ. ಇನ್ನೂ ಎಲ್ಲೆಲ್ಲಿ ಗುಂಡಿಗಳು ಇವೆ ಎಂಬುದನ್ನು ಪತ್ತೆಹಚ್ಚಿ, ಅವುಗಳನ್ನು ಮುಚ್ಚುವುದಕ್ಕೂ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.(ಒನ್ ಇಂಡಿಯಾ ಸುದ್ದಿ)












Click it and Unblock the Notifications