ಅಬ್ಬಬ್ಬಾ.. ಒಂದೇ ದಿನ ಕರ್ನಾಟಕದಲ್ಲಿ ಇಷ್ಟೊಂದು ಮಂದಿಗೆ ಸೋಂಕು!
ಬೆಂಗಳೂರು, ಜುಲೈ.06: ಕೊರೊನಾವೈರಸ್ ಅಟ್ಟಹಾಸಕ್ಕೆ ಕರುನಾಡು ಅಕ್ಷರಶಃ ನಲುಗಿ ಹೋಗಿದೆ. ದಿನದಿಂದ ದಿನಕ್ಕೆ ಕೊರೊನಾವೈರಸ್ ಮಹಾಮಾರಿಯು ಕನ್ನಡಿಗರ ಎದೆಯಲ್ಲಿ ನಡುಕ ಹುಟ್ಟಿಸುವಂತೆ ಮಾಡುತ್ತಿದೆ.
ಕರ್ನಾಟಕದಲ್ಲಿನ ಕೊರೊನಾವೈರಸ್ ಸೋಂಕಿತರ ಅಂಕಿ-ಸಂಖ್ಯೆಗೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಕಳೆದ 24 ಗಂಟೆಗಳಲ್ಲೇ ರಾಜ್ಯದಲ್ಲಿ ಬರೋಬ್ಬರಿ 1843 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯು 25317ಕ್ಕೆ ಏರಿಕೆಯಾಗಿದೆ.
ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿನಿಂದ ಬಲಿಯಾಗುತ್ತಿರುವವರ ಸಂಖ್ಯೆಯೂ ಅದೇ ರೀತಿ ಏರಿಕೆಯಾಗುತ್ತಿದೆ. ಸೋಮವಾರ ಒಂದೇ ದಿನ ಮಹಾಮಾರಿಗೆ ರಾಜ್ಯದಲ್ಲಿ 30 ಮಂದಿ ಪ್ರಾಣ ಬಿಟ್ಟಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ 10 ಜನರು ಉಸಿರು ಚೆಲ್ಲಿದ್ದಾರೆ. ಇದರಿಂದ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 401ಕ್ಕೆ ಏರಿಕೆಯಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಕೊರೊನಾವೈರಸ್ ರೌದ್ರನರ್ತನ
ರಾಜ್ಯ ರಾಜಧಾನಿಯ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುವಂತಾ ಪರಿಸ್ಥಿತಿಯನ್ನು ಕೊರೊನಾವೈರಸ್ ಸೃಷ್ಟಿಸಿದೆ. ಮಹಾಮಾರಿ ಅಟ್ಟಹಾಸಕ್ಕೆ ಮಹಾನಗರದ ಜನರು ಬೆಚ್ಚಿ ಬೀಳುವಂತಾಗಿದೆ. ಕಳೆದ 24 ಗಂಟೆಗಳಲ್ಲಿ ಬೆಂಗಳೂರು ನಗರವೊಂದರಲ್ಲೇ 981 ಜನರಿಗೆ ಕೊರೊನಾವೈರಸ್ ಸೋಂಕು ಅಂಟಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 10,561ಕ್ಕೆ ಏರಿಕೆಯಾಗಿದೆ. ಒಂದೇ ದಿನ 10 ಜನರು ಕೊವಿಡ್-19ಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ ನಗರದಲ್ಲಿ 155ಕ್ಕೆ ಹೆಚ್ಚಿದೆ.

ಜಿಲ್ಲಾವಾರು ಕೊರೊನಾವೈರಸ್ ಪ್ರಕರಣಗಳೆಷ್ಟು?
ರಾಜ್ಯದಲ್ಲಿ ಒಂದೇ ದಿನ 1843 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ಜಿಲ್ಲಾವಾರು ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ ಎನ್ನುವುದನ್ನು ನೋಡುವುದಾದರೆ ಬೆಂಗಳೂರು ಒಂದರಲ್ಲೇ 981 ಜನರಿಗೆ ಸೋಂಕು ದೃಢಪಟ್ಟಿದೆ. ಬಳ್ಳಾರಿ 99, ಉತ್ತರ ಕನ್ನಡ 81, ಬೆಂಗಳೂರು ಗ್ರಾಮಾಂತರ 68, ಧಾರವಾಡ 56, ಕಲಬುರಗಿ 53, ಹಾಸನ 49, ಮೈಸೂರು 45, ಬೀದರ್ 44, ಉಡುಪಿ 40, ಮಂಡ್ಯ 39, ವಿಜಯಪುರ 36, ಯಾದಗಿರಿ 35, ದಕ್ಷಿಣ ಕನ್ನಡ 34, ಬಾಗಲಕೋಟೆ 33, ತುಮಕೂರು 31, ಶಿವಮೊಗ್ಗ 24, ಗದಗ 18, ಚಾಮರಾಜನಗರ 12, ರಾಮನಗರ 11, ಕೋಲಾರ 10, ಹಾವೇರಿ 9, ಕೊಪ್ಪಳ 9, ಚಿಕ್ಕಬಳ್ಳಾಪುರ 7, ರಾಯಚೂರು 6, ಚಿತ್ರದುರ್ಗ 6, ದಾವಣಗೆರೆ 3, ಚಿಕ್ಕಮಗಳೂರು ಮತ್ತು ಕೊಡುಗು 2 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ರಾಜ್ಯದಲ್ಲಿ 279 ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ
ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕು ಅಂಟಿಕೊಂಡ 279 ಮಂದಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರು 166, ಧಾರವಾಡ 13, ಕಲಬುರಗಿ 13, ರಾಯಚೂರು 11, ಬಳ್ಳಾರಿ 10, ಹಾಸನ 9, ಶಿವಮೊಗ್ಗ 8, ಮೈಸೂರು 7, ಬೀದರ್ 6, ದಕ್ಷಿಣ ಕನ್ನಡ 5, ಗದಗ 5, ಕೋಲಾರ 4, ತುಮಕೂರು 4, ದಾವಣಗೆರೆ 3, ಬಾಗಲಕೋಟೆ 3, ಮಂಡ್ಯ 3, ಕೊಡುಗು 2, ಬೆಳಗಾವಿ 2, ಚಾಮರಾಜನಗರ 2, ಉಡುಪಿ 2, ಕೊಪ್ಪಳ 2 ಸೋಂಕಿತರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದಲ್ಲಿ 10527 ಕೊವಿಡ್-19 ಸೋಂಕಿತರು ಆರಾಮ
ಕೊರೊನಾವೈರಸ್ ಸೋಂಕಿತರ ಸಂಖ್ಯೆಯು ಕುದುರೆ ವೇಗದಲ್ಲಿ ಏರಿಕೆಯಾಗುತ್ತಿದ್ದರೆ ಗುಣಮುಖರಾಗುತ್ತಿರುವವರ ಸಂಖ್ಯೆಯು ಆಮೆ ವೇಗದಲ್ಲಿ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಕೇವಲ 680 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಬೆಂಗಳೂರು 278, ದಕ್ಷಿಣ ಕನ್ನಡ 75, ಕಲಬುರಗಿ 69, ಗದಗ 44, ಬೀದರ್ 29, ರಾಮನಗರ 27, ಧಾರವಾಡ 22, ಮೈಸೂರು 21, ವಿಜಯಪುರ 20, ಚಿಕ್ಕಬಳ್ಳಾಪುರ 19, ಉಡುಪಿ 18, ಬಳ್ಳಾರಿ 18, ದಾವಣಗೆರೆ 10, ಕೋಲಾರ 10, ಶಿವಮೊಗ್ಗ 8, ಉತ್ತರ ಕನ್ನಡ 6, ಚಾಮರಾಜನಗರ 3, ಯಾದಗಿರಿ 2, ಚಿಕ್ಕಮಗಳೂರು 1 ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದಾರೆ.












Click it and Unblock the Notifications