ಡಾ.ಟಿ.ಎಂ.ಎ ಪೈ ನಿಜವಾದ ಕರ್ಮಯೋಗಿ; ಆಂಧ್ರಪ್ರದೇಶ ರಾಜ್ಯಪಾಲ ಎಸ್ ಅಬ್ದುಲ್ ನಜೀರ್
ಮಣಿಪಾಲ್ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಡಾ ಟಿಎಂಎ ಪೈ ಅವರ 127ನೇ ಜನ್ಮದಿನವನ್ನು ಬುಧವಾರ, 30 ಏಪ್ರಿಲ್ 2025 ರಂದು ಶ್ರದ್ಧಾ ಪೂರ್ವಕವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಂಧ್ರಪ್ರದೇಶದ ರಾಜ್ಯಪಾಲರಾದ ನಿವೃತ್ತ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಭಾಗವಹಿಸಿದ್ದರು.
ಡಾ ಟಿಎಂಎ ಪೈ ಅವರಿಗೆ ಗೌರಪರ್ಪಣೆ ಸಲ್ಲಿಸಿ ಮಾತನಾಡಿದ ಆಂಧ್ರಪ್ರದೇಶ ರಾಜ್ಯಪಾಲ ಎಸ್ ಅಬ್ದುಲ್ ನಜೀರ್, 'ಡಾ. ಪೈ ಅವರದ್ದು ಬಹುಮುಖ ವ್ಯಕ್ತಿತ್ವ , ಶಿಕ್ಷಣ ತಜ್ಞ, ಬ್ಯಾಂಕರ್, ಲೋಕೋಪಕಾರಿ ಮತ್ತು ನಿಜವಾದ ರಾಷ್ಟ್ರ ನಿರ್ಮಾತೃ ಆಗಿದ್ದರು. ಅನಕ್ಷರತೆ ಮತ್ತು ಅನಾರೋಗ್ಯವನ್ನು ನಿರ್ಮೂಲನೆ ಮಾಡುವ ಮೂಲಕ ಬಡತನವನ್ನು ನಿರ್ಮೂಲನೆ ಮಾಡಬಹುದು ಎಂಬುದು ಅವರ ಬಲವಾದ ನಂಬಿಕೆಯಾಗಿತ್ತು ಎಂದು ಹಾಡಿ ಹೊಗಳಿದರು.

ಡಾ. ಪೈ ಅವರು ನಿಜವಾದ ಕರ್ಮಯೋಗಿಯಾಗಿದ್ದರು. ವಿದ್ಯಾವಂತ ಮಕ್ಕಳು ಕೇವಲ ಕುಟುಂಬದ ಆಸ್ತಿ ಅಷ್ಟೇ ಅಲ್ಲದೆ ಅವರು ಪ್ರಗತಿಶೀಲ ರಾಷ್ಟ್ರದ ನಿರ್ಮಾತೃರೂ ಹೌದು ಎಂದರು. ಡಾ. ಟಿ.ಎಂ.ಎ. ಪೈ ಅವರು ಸ್ಥಾಪಿಸಿದ ಮೂಡುಬಿದಿರೆಯ ಮಹಾವೀರ ಕಾಲೇಜಿನ ಹೆಮ್ಮೆಯ ಹಳೆಯ ವಿದ್ಯಾರ್ಥಿ ನಾನು. ಅವರ ದೃಷ್ಟಿಕೋನ ನನ್ನ ಶೈಕ್ಷಣಿಕ ಪ್ರಯಾಣ ಮತ್ತು ವೃತ್ತಿಜೀವನವನ್ನು ರೂಪಿಸಿತು ಎಂದು ನೆನಪಿಸಿಕೊಂಡರು.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್ ಪೈ, ಡಾ ರಂಜನ್ ಪೈ, ಮಾಹೆ ಟ್ರಸ್ಟ್ ಅಧ್ಯಕ್ಷರು ಮತ್ತು ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ (ಎಂಇಎಂಜಿ) ಮುಖ್ಯಸ್ಥರು ಬೆಂಗಳೂರು, ಟಿ ಅಶೋಕ್ ಪೈ, ಅಧ್ಯಕ್ಷರು, ಡಾ ಟಿಎಂಎ ಪೈ ಫೌಂಡೇಶನ್, ಮಣಿಪಾಲ್, ಟಿ ಸತೀಶ್ ಯು ಪೈ, ಕಾರ್ಯಾಧ್ಯಕ್ಷರು, ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್, ಮತ್ತು ಉಪಾಧ್ಯಕ್ಷರು, AGE, ಡಾ ಎಚ್.ಎಸ್. ಬಲ್ಲಾಳ್, ಪ್ರೊ ಚಾನ್ಸಲರ್ ಮಾಹೆ, ಲೆಫ್ಟಿನೆಂಟ್ ಜನರಲ್ (ಡಾ) ಎಂಡಿ ವೆಂಕಟೇಶ್, ವೈಸ್ ಚಾನ್ಸಲರ್ ಅವರು ಸೇರಿದಂತೆ ಮಣಿಪಾಲ್ ಗ್ರೂಪ್‌ನ ವಿವಿಧ ಹಿರಿಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಅಸಾಧಾರಣ ದೂರದೃಷ್ಟಿತ್ವವುಳ್ಳ ವ್ಯಕ್ತಿತ್ವ
ಟಿಎಂಎ ಪೈ ಅವರಿಗೆ ಗೌರವ ಸೂಚಿಸುವ ಹಾಗು ಅವರ ಪರಂಪರೆಯನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಏಪ್ರಿಲ್ 30ರ ಅವರ ಜನ್ಮದಿನದಂದು ಮಣಿಪಾಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಸಂಸ್ಥಾಪನಾ ದಿನವನ್ನಾಗಿ ಆಚರಿಸಲಾಗುತ್ತದೆ. ದೂರದೃಷ್ಟಿಯುಳ್ಳ ಮಣಿಪಾಲ್ ಸಂಸ್ಥಾಪಕರು, ಬಂಜರು ಬೆಟ್ಟ ಪ್ರದೇಶವಾಗಿದ್ದ ಮಣಿಪಾಲ್ ಅನ್ನು ಜಾಗತಿಕವಾಗಿ ಶೈಕ್ಷಣಿಕ ಕೇಂದ್ರವನ್ನಾಗಿ ಪರಿವರ್ತಿಸಿದರು. ಗಣ್ಯರ ಪುಷ್ಪ ನಮನ ಸಲ್ಲಿಸುವ ಜೊತೆಗೆ ವಿವಿಧ ಕಾರ್ಯಕ್ರಮಗಳು ನಡೆದವು.
ಮಾಹೆ ಪ್ರೊ ಚಾನ್ಸಲರ್ ಡಾ ಎಚ್.ಎಸ್. ಬಲ್ಲಾಳ್ ಮಾತನಾಡಿ, 'ನಮ್ಮ ಸಂಸ್ಥಾಪಕ ಡಾ ಟಿಎಂಎ ಪೈ ಅವರದ್ದು ಅಸಾಧಾರಣ ದೂರದೃಷ್ಟಿತ್ವವುಳ್ಳ ವ್ಯಕ್ತಿತ್ವ. ಅವರು ಕೇವಲ ಒಂದು ಶಿಕ್ಷಣ ಸಂಸ್ಥೆಯನ್ನು ರೂಪಿಸಿಲ್ಲ, ಬದಲಿಗೆ ಶೈಕ್ಷಣಿಕ ಪರಿಸರವನ್ನು ನಿರ್ಮಿಸಿದ್ದಾರೆ. 1950ರ ದಶಕದಲ್ಲಿ ಸ್ವಂತ ಹಣದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದು ಒಂದು ಕ್ರಾಂತಿಕಾರಿಕ ನಡೆ. ಇಂದು, ನಾವು ಅವರನ್ನು ಗೌರವಯುತವಾಗಿ ಸ್ಮರಿಸುತ್ತ, ಅವರ ತತ್ವಗಳಾದ ಗುಣಮಟ್ಟದ ಶಿಕ್ಷಣ, ನಾವೀನ್ಯತೆ ಮತ್ತು ಸಮಾಜ ಸೇವೆಗೆ ಬದ್ಧರಾಗಿರುತ್ತವೆ ಎನ್ನುವುದನ್ನು ನಮಗೆ ನಾವೇ ಜವಾಬ್ದಾರಿವಹಿಸಿಕೊಳ್ಳಬೇಕು' ಎಂದರು.
ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ. ವೆಂಕಟೇಶ್ ಮಾತನಾಡಿ, ನಮ್ಮ ಸಂಸ್ಥಾಪಕರಾದ ಡಾ ಟಿಎಂಎ ಪೈ ಅವರ 127ನೇ ಜನ್ಮದಿನವನ್ನು ಆಚರಿಸುತ್ತಿರುವ ಈ ಸಮಯದಲ್ಲಿ, ನಮ್ಮ ಸಂಸ್ಥೆಯ ನಿರಂತರ ಮಾರ್ಗ ಸೂಚಿಯಾಗಿರುವ ಧ್ಯೇಯ ಮತ್ತು ದೂರದೃಷ್ಟಿತ್ವ ನಾವು ಪಾಲಿಸಬೇಕು. ಒಂದು ಶಿಕ್ಷಣ ಸಂಸ್ಥೆಯಿಂದ ಶುರುವಾಗಿ ಒಂದು ಸಮಗ್ರ ಶೈಕ್ಷಣಿಕ ಪರಿಸರವನ್ನು ಸೃಷ್ಟಿಸಿದ ಡಾ. ಪೈ ಅವರದ್ದು ಗಮನಾರ್ಹ ಪಯಣ. ಶಿಕ್ಷಣ ಎಲ್ಲರಿಗೂ ದೊರೆಯಬೇಕು ಎನ್ನುವುದು ಅವರ ಮೂಲ ನಂಬಿಕೆ. ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಅದನ್ನು ಸಾಕಾರಗೊಳಿಸಲು ನಾವೆಲ್ಲ ನಿರಂತರ ಶ್ರಮಿಸಬೇಕು' ಎಂದರು.












Click it and Unblock the Notifications