ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಮೆಗಾ ಪ್ಲ್ಯಾನ್: 12 ಜೆಡಿಎಸ್ ಶಾಸಕರಿಗೆ ಗಾಳ- ಎಚ್‌ಡಿಕೆ ಏನಂದ್ರು?
ಬೆಂಗಳೂರು, ಆಗಸ್ಟ್ 22: ಲೋಕಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಅತಿ ದೊಡ್ಡ ಆಪರೇಷನ್‌ಗೆ ಕೈಹಾಕಲು ಮುಂದಾಗಿದೆ. ಜನತಾ ದಳದ (ಜಾತ್ಯತೀತ) ಹಲವು ಶಾಸಕರೊಂದಿಗೆ ಕೈ ಪಾಳಯದ ನಾಯಕರು ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಅವರನ್ನು ಪಕ್ಷಕ್ಕೆ ಸೆಳೆಯಲು ಚರ್ಚೆ ನಡೆಯುತ್ತಿದೆ ಎಂದು ಟಿವಿ 9 ಕನ್ನಡ ವರದಿ ಮಾಡಿದೆ.
ಅನರ್ಹತೆ ಅಥವಾ ಉಪಚುನಾವಣೆ ತಪ್ಪಿಸಲು, 2/3 ( ಮೂರನೇ ಎರಡು ಭಾಗದಷ್ಟು ) ಜೆಡಿಎಸ್ ಶಾಸಕರನ್ನು ಸೆಳೆಯಲು ಕಾಂಗ್ರೆಸ್ ಯೋಜಿಸುತ್ತಿದೆ ಎಂದು ವರದಿಯಾಗಿದೆ. ಇದರಿಂದಾಗಿ ಪಕ್ಷದ ಬೆಂಬಲವನ್ನು ಅಧಿಕೃತವಾಗಿ ಪಡೆಯಬಹುದು ಎಂದು ಕಾಂಗ್ರೆಸ್ ಅಂದುಕೊಂಡಿದೆ. ಅಂದಕೊಂಡಂತೆ ನಡೆದರೆ, ಜೆಡಿಎಸ್‌ನ 12 ಶಾಸಕರ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಟಿವಿ9 ಕನ್ನಡ ವಾಹಿನಿ ತನ್ನ ವರದಿಯಲ್ಲಿ ಹೇಳಿಕೊಂಡಿದೆ.

ಹಳೆ ಮೈಸೂರು ಭಾಗದಲ್ಲಿ ಮತಗಳನ್ನು ಮತ್ತಷ್ಟು ಕ್ರೋಢೀಕರಿಸುವ ಉದ್ದೇಶದಿಂದ ಜೆಡಿಎಸ್‌ನ ಬಹುತೇಕ ಶಾಸಕರೊಂದಿಗೆ ಕಾಂಗ್ರೆಸ್ ಸಂಪರ್ಕದಲ್ಲಿದೆ ಎಂದು ಹೇಳಲಾಗುತ್ತಿದೆ.
ವರದಿಗಳ ಪ್ರಕಾರ, ಎರಡು ಸುತ್ತಿನ ಸಭೆಗಳು ನಡೆದಿದ್ದು, ಹೈಕಮಾಂಡ್ ಒಪ್ಪಿಗೆ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ಹೇಳಿವೆ.
ಹಳೇ ಮೈಸೂರು ಭಾಗದ ಜೆಡಿಎಸ್‌ನ ಹಿರಿಯ ಶಾಸಕರೊಬ್ಬರು ಕಾಂಗ್ರೆಸ್ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜೆಡಿಎಸ್ ಶಾಸಕರ ದೊಡ್ಡ ತಂಡವೇ ಕಾಂಗ್ರೆಸ್ ಸೇರಲಿದೆ ಎಂದು ಹೇಳಲಾಗುತ್ತಿದೆ.
ಅನರ್ಹತೆ ಮತ್ತು ಉಪಚುನಾವಣೆ ತಪ್ಪಿಸಲು, ಕಾಂಗ್ರೆಸ್ 2/3 ಕ್ಕಿಂತ ಹೆಚ್ಚು ಜೆಡಿಎಸ್ ಶಾಸಕರನ್ನು ಸಂಪರ್ಕಿಸಿದೆ ಎಂಬ ಮಾತುಗಳು ಹರಿದಾಡುತ್ತಿವೆ. ಒಂದು ವೇಳೆ 12 ಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್‌ಗೆ ಬಂದರೆ, ಜೆಡಿಎಸ್ ಪಕ್ಷವೇ ಕಾಂಗ್ರೆಸ್‌ನಲ್ಲಿ ವಿಲೀನವಾದಂತಾಗುತ್ತದೆ. ಪಕ್ಷವನ್ನು ವಿಲೀನಗೊಳಿಸುವ ಅಧಿಕಾರವನ್ನು ಶಾಸಕರಿಗೆ ಅದು ನೀಡುತ್ತದೆ.

ಕಾಂಗ್ರೆಸ್ ನಾಯಕರು ತಮ್ಮ ತಂತ್ರಗಳನ್ನು ಅತಿ ಜಾಗರೂಕತೆಯಿಂದ ಬಳಸುತ್ತಿದ್ದಾರೆ. ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಯಾರೊಂದಿಗೂ ಬಹಿರಂಗಪಡಿಸಬೇಡಿ ಅಥವಾ ಚರ್ಚಿಸಬೇಡಿ ಎಂದು ಶಾಸಕರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ಜೆಡಿಎಸ್‌ನ ಯಾವೊಬ್ಬ ನಾಯಕರು ಕಾಂಗ್ರೆಸ್ ಸೇರುವುದಿಲ್ಲ ಎಂದು ಹೇಳಿದ್ದಾರೆ.
'ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರಿಗೆ ಕಾಂಗ್ರೆಸ್ ಬೆದರಿಕೆ ಹಾಕುತ್ತಿದೆ. ನಾಯಕರಿಗೆ ಗಾಳ ಹಾಕಲು ಪ್ರಯತ್ನಿಸುತ್ತಿದೆ. ನನ್ನ ಅರಿವಿನ ಪ್ರಕಾರ, ಜೆಡಿಎಸ್‌ನ ಯಾವೊಬ್ಬ ಶಾಸಕರೂ ನಮ್ಮ ಪಕ್ಷ ಬಿಡುವುದಿಲ್ಲ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಇಂತಹ ಕಥೆಗಳನ್ನು ಹೇಳುತ್ತಿದೆ' ಎಂದು ಎಚ್‌ಡಿಕೆ ತಿಳಿಸಿದ್ದಾರೆ.

ಸಿದ್ದರಾಮಯ್ಯ ಸರ್ಕಾರದ ವೈಫಲ್ಯದಿಂದಾಗಿ ಸುಮಾರು 20ರಿಂದ 30 ಕಾಂಗ್ರೆಸ್ ಶಾಸಕರು ಪಕ್ಷ ತೊರೆಯಲು ಸಿದ್ಧರಿದ್ದಾರೆ. ಅದನ್ನು ಮರೆಮಾಡಲು ಇಂತಹ ವಿಷಯಗಳನ್ನು ಮುನ್ನೆಲೆಗೆ ತರಲಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿಗಳು ದಟ್ಟವಾಗಿವೆ. ಕುಮಾರಸ್ವಾಮಿ ಅವರು ಯಶವಂತಪುರ ಕ್ಷೇತ್ರದ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಉಪಚುನಾವಣೆಗೆ ಸಿದ್ಧರಾಗುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಕೆಆರ್ ಪುರದ ಶಾಸಕ ಬೈರತಿ ಬಸವರಾಜ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ, ಕೊಪ್ಪಳ ಸಂಸದ ಸಂಗಣ್ಣ ಕರಡಿ, ಬಿಜೆಪಿ ಮಾಜಿ ಶಾಸಕ ಶಂಕರ ಪಾಟೀಲ ಮನೇನಕೊಪ್ಪ, ಬಿಜೆಪಿ ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ ಸೇರಿದಂತೆ ಹಲವರಿಗೆ ಕಾಂಗ್ರೆಸ್ ಗಾಳ ಹಾಕಿದೆ ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.












Click it and Unblock the Notifications