ರಾಜ್ಯ ಸರ್ಕಾರಕ್ಕೆ 100 ದಿನದ ಸಂಭ್ರಮ; ಬಿಜೆಪಿಗೆ ಮಾತ್ರ ಇನ್ನೂ ಸಿಕ್ಕಿಲ್ಲ ನಾಯಕತ್ವದ ನೆಲೆ!
ಬೆಂಗಳೂರು, ಆಗಸ್ಟ್ 28: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ ನೇತೃತ್ವದ ಕಾಂಗ್ರೆಸ್ ಸರ್ಕಾರ ಶತಕದ ಸಂಭ್ರಮದಲ್ಲಿದ್ದರೆ, ಇತ್ತ ವಿಪಕ್ಷದಲ್ಲಿರುವ ಬಿಜೆಪಿಗೆ 100 ದಿನವಾದರೂ ನಾಯಕತ್ವದ ನೆಲೆ ಮಾತ್ರ ಇನ್ನೂ ಸಿಕ್ಕಿಲ್ಲ.
ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವ ಬಿಜೆಪಿ ವಿಪಕ್ಷದ ಸ್ಥಾನದಲ್ಲಿ ಕೂರುವುದು ನಿಶ್ಚಿತವಾದರೂ ನಾಯಕತ್ವದ ಆಯ್ಕೆಯಲ್ಲಿ ಮಾತ್ರ ಹಿಂದೆ ಬಿದ್ದಿದೆ. ಈಗಾಗಲೇ ವಿರೋಶ ಪಕ್ಷದ ನಾಯಕನಿಲ್ಲದೆ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಸಹ ಮಂಡಿಸಿದ್ದಾರೆ.

ಈಗಾಗಲೇ ಪಂಚ ಗ್ಯಾರೆಂಟಿಗಳ ಅನುಷ್ಠಾನದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದ್ದು, ಇತ್ತ ಮುಂಬರುವ ಲೋಕಸಭಾ ಚುನಾವಣೆಗೂ ಸಹ ತಯಾರಿ ನಡೆಸುತ್ತಿದೆ. ಆದರೆ, ಬಿಜೆಪಿಯಲ್ಲಿ ಇನ್ನೂ ನಾಯಕತ್ವದ ನೆಲೆ ಮಾತ್ರ ಸಿಕ್ಕಿಲ್ಲ. ವಿಪಕ್ಷ ನಾಯಕ ಅಂದ್ರೆ ಶ್ಯಾಡೋ ಸಿಎಂ ಇದ್ದಂತೆ, ಸರ್ಕಾರದ ತಪ್ಪುಗಳನ್ನ ಪ್ರಶ್ನಿಸುವ,ವಿರೋಧಿಸುವ ಸಾಂವಿಧಾನಿಕ ಹುದ್ದೆ. ಆದರೆ, ವಿಧಾನಸಭಾ ಸೋಲಿನಿಂದ ಜವಾಬ್ದಾರಿಯನ್ನೆ ಮರೆತು ಬಿಡ್ತಾ ಬಿಜೆಪಿ ಹೈಕಮಾಂಡ್ ಎಂಬ ಪ್ರಶ್ನೆ ಉದ್ಭವವಾಗಿದೆ.
ಇನ್ನೂ ದಿನೇ ದಿನೇ ವಿಪಕ್ಷ ನಾಯಕನ ಆಯ್ಕೆ ವಿಳಂಬವಾಗುತ್ತಿರುವ ಹಿನ್ನೆಲೆ ಬಿಜೆಪಿಯನ್ನು ಕಾಂಗ್ರೆಸ್ ನಾಯಕರು ಪದೇ ಪದೇ ಟೀಕಿಸಿದ್ದು, ರಾಜ್ಯ ಬಿಜೆಪಿ ಬಾರೀ ಮುಜುಗರಕೊಳ್ಳಪಟ್ಟಿದೆ. ಇತ್ತ ಬಿಜೆಪಿ ಹೈಕಮಾಂಡ್ ವಿಪಕ್ಷ ನಾಯಕನ ಆಯ್ಕೆ ಕುರಿತು ಇನ್ನೂ ಸೂಕ್ತ ನಿರ್ಧಾರವನ್ನ ತೆಗೆದುಕೊಳ್ಳದ ಹಿನ್ನಲೆ ಹೈಕಮಾಂಡ್ ನಡೆಗೆ ರಾಜ್ಯ ನಾಯಕರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸರ್ಕಾರ ನೂರು ದಿನಗಳಲ್ಲಿ ಎಡವಿದ್ದೇ ಹೆಚ್ಚು: ಬೊಮ್ಮಾಯಿ
ಇನ್ನೂ ಸರ್ಕಾರ 100 ದಿನ ಪೂರೈಸಿದ ಹಿನ್ನಲೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ಸಂಪೂರ್ಣ ಬಹುಮತದೊಂದಿಗೆ ಬಂದ ಸರ್ಕಾರ ನೂರು ದಿನಗಳಲ್ಲಿ ಎಡವಿದ್ದೇ ಹೆಚ್ಚು. ಗ್ಯಾರೆಂಟಿ ನೆಪದಲ್ಲಿ ಒಂದು ವರ್ಷದ ಅಭಿವೃದ್ಧಿಯ ಎಲ್ಲ ಕಾಮಗಾರಿಗಳು ಸಂಪೂರ್ಣ ನಿಂತು ಹೋಗಿದೆ.
ಕಾಂಗ್ರೆಸ್ ಸರ್ಕಾರ ವರ್ಗಾವಣೆಯನ್ನು ಒಂದು ಕಮಿಷನ್ ದಂಧೆಯಾಗಿ ಮಾಡಿ, ವಿಧಾನಸೌಧದ ಮೂಲೆ ಮೂಲೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಗುತ್ತಿಗೆದಾರರ ಬಿಲ್ ಬಾಕಿ ಇಟ್ಟುಕೊಂಡು ಕಮಿಷನ್ ದಂಧೆಗೆ ಮುಂದಾಗಿದೆ. ರೈತರು ಬರಗಾಲದ ಬವಣೆಯಲ್ಲಿ ಸಿಕ್ಕರೂ ಕೂಡ ಸರ್ಕಾರ ಆ ಕಡೆ ತಿರುಗಿ ನೋಡಿಲ್ಲ. ರೈತರ ಆತ್ಮಹತ್ಯೆ ಮತ್ತೆ ಪ್ರಾರಂಭವಾಗಿದೆ. ಕೃಷಿ ಉತ್ಪಾದನೆಗೆ ಪೆಟ್ಟು ಬೀಳುವ ಎಲ್ಲ ಲಕ್ಷಣ ಕಾಣುತ್ತಿದೆ. ಪೂರ್ಣ ಪ್ರಮಾಣದ ಗ್ಯಾರೆಂಟಿ ಅನುಷ್ಠಾನ ಗೊಳಿಸಲು ರಾಜ್ಯ ಸರ್ಕಾರ ವಿಫಲವಾಗಿದೆ.
ಒಂದು ಕಡೆ ವಿದ್ಯುತ್ ದರ ಹೆಚ್ಚಿಸಿ ಗ್ರಾಹಕರಿಗೆ ಶಾಕ್ ಕೊಟ್ಟಿದೆ. ಸಾರಿಗೆ ಸಿಬ್ಬಂದಿಗೆ ಸಮರ್ಪಕವಾದ ಸಂಬಳ ನೀಡಿಲ್ಲ. 10 ಕೆಜಿ ಅಕ್ಕಿ ಗ್ಯಾರೆಂಟಿಯನ್ನು ಈಡೇರಿಸಲಾಗಿಲ್ಲ. ಕೇಂದ್ರದ ಐದು ಕೆಜಿ ಅಕ್ಕಿಯೇ ಜನರ ಸಹಾಯಕ್ಕೆ ಬಂದಿದೆ. ರಾಜ್ಯದಲ್ಲಿ ಗೃಹಲಕ್ಷ್ಮೀಯರ ಹುಡುಕಾಟ ಪೂರ್ಣಗೊಂಡಿಲ್ಲ. ಈ ಮಧ್ಯ ಗ್ಯಾರೆಂಟಿಗಾಗಿ ಎಸ್ಸಿ ಎಸ್ಟಿ ಅಭಿವೃದ್ಧಿ ಹಣ 11 ಸಾವಿರ ಕೋಟಿ ರೂಪಾಯಿ ಬಳಕೆ ಮಾಡಿ ಎಸ್ಸಿ ಎಸ್ಟಿ ಮತ್ತು ಒಬಿಸಿ ಜನರಿಗೆ ಸರ್ಕಾರ ಮೋಸ ಮಾಡಿದೆ.
ಕಾವೇರಿ ಜಲಾನಯನ ಪ್ರದೇಶದ ರೈತರ ಮತ್ತು ಸಾರ್ವಜನಿಕರ ಹಿತ ಕಾಯಲು ವಿಫಲವಾಗಿದೆ. ನಮ್ಮ ಡ್ಯಾಮುಗಳ ಕೀಲಿಕೈಯನ್ನು ತಮಿಳುನಾಡಿಗೆ ಒಪ್ಪಿಸಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಪೈಪೋಟಿ ಆಡಳಿತದ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರಿದೆ. ಇದರಿಂದ ಕಾನೂನು ಸುವ್ಯವಸ್ಥೆ ಸಂಪೂರ್ಣ ವಾಗಿ ಹದಗೆಟ್ಟಿದೆ ಕೊಲೆ ಸುಲಿಗೆ ಸಾಮಾನ್ಯವಾಗಿದೆ.
ಕಾಂಗ್ರೆಸ್ ಸರ್ಕಾರ ನೂರು ದಿನಗಳಲ್ಲಿ ಜನರ ವಿಶ್ವಾಸ ಗಳಿಸುವುದು ದೂರದ ಮಾತು ಅವರ ಶಾಸಕರ ವಿಶ್ವಾಸವನ್ನೇ ಕಳೆದುಕೊಂಡಿದೆ. ಎಲ್ಲ ರಂಗದಲ್ಲಿ ವೈಫಲ್ಯವೇ ಇವರ ಸಾಧನೆ. ಸರ್ಕಾರದ ವಿರುದ್ದ ಜನ ಸಾಮಾನ್ಯರು, ಮಾಧ್ಯಮದವರು, ಸಂಘ ಸಂಸ್ಥೆಗಳು ಧ್ವನಿ ಎತ್ರುವುದನ್ನು ಪೊಲೀಸ್ ಇಲಾಖೆ ಮೂಲಕ ಹತ್ತಿಕ್ಕುವ ಪ್ರಯತ್ನ. ಇದು ಪ್ರಜಾಪ್ರಭುತ್ವ ವಿರೊಧಿ, ಸಂವಿಧಾನ ವಿರೋಧಿ ಹಾಗೂ ಸರ್ವಾಧಿಕಾರಿ ಆಡಳಿತವೆಂದು ನೂರು ದಿನಗಳಲ್ಲಿ ತೋರಿಸಿಕೊಟ್ಟಿದೆ ಎಂದು ಕಿಡಿಕಾರಿದ್ದಾರೆ.












Click it and Unblock the Notifications