BJP, JDSನಿಂದ 10-15 ಜನ ಹಾಲಿ-ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆ; ಸ್ಟೋಟಕ ಮಾಹಿತಿ ಬಿಚ್ಚಿಟ್ಟ ಚೆಲುವರಾಯಸ್ವಾಮಿ
ಮೈಸೂರು, ಆಗಸ್ಟ್ 18: ಲೋಕಸಭಾ ಚುನಾವಣೆ ಹಿನ್ನಲೆ ಭರ್ಜರಿ ತಯಾರಿ ನಡೆಸುತ್ತಿರುವ ಕಾಂಗ್ರೆಸ್, ಲೋಕಸಮರದಲ್ಲಿ ಹೆಚ್ಚು ಸ್ಥಾನಗಳನ್ನ ಗೆಲ್ಲುವ ಟಾರ್ಗೆಟ್ ಹಾಕಿಕೊಂಡಿದ್ದು, ಆಪರೇಷನ್ ಹಸ್ತಕ್ಕೆ ಮುಂದಾಗಿದ್ದು, 10 ರಿಂದ 15 ಜನ ಮಾಜಿ ಹಾಗೂ ಹಾಲಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರಲು ಸಿದ್ದರಿದ್ದಾರೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಸಚಿವ ಚೆಲುವರಾಯ ಸ್ವಾಮಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಹೌದು, ಈ ಕುರಿತು ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿ, ಎಲ್ಲರ ಜೊತೆಯೂ ಮಾತುಕತೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಎಲ್ಲವೂ ಕೂಡ ಅಂತಿಮವಾಗಲಿದೆ. ಯಾರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೋ ಅವರ ಹೆಸರನ್ನು ಈಗಲೇ ಹೇಳಲು ಸಾಧ್ಯವಿಲ್ಲ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಹಾಲಿ-ಮಾಜಿ ಶಾಸಕರು ನಮ್ಮ ಪಕ್ಷಕ್ಕೆ ಬರುವುದು ಖಚಿತ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಬರ ಘೋಷಣೆ ಮಾಡುವ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಸಭೆ ನಡೆಸಿದ್ದೇವೆ. ಜೂನ್ ಮತ್ತು ಆಗಸ್ಟ್ ನಲ್ಲಿ ಮಳೆ ಕೊರತೆಯಾಗಿದೆ, ಶೇಕಡ 60ರಷ್ಟು ಬರ ಇದ್ದರೆ ಮಾತ್ರ ಕೇಂದ್ರ ಅನುದಾನ ಬಿಡುಗಡೆ ಮಾಡುತ್ತದೆ. ಇದನ್ನು 30% ಗೆ ಇಳಿಸುವಂತೆ ಕೇಂದ್ರಕ್ಕೆ ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆ. ಆ ಪತ್ರಕ್ಕೆ ಕೇಂದ್ರದಿಂದ ಉತ್ತರ ಬಂದಿಲ್ಲ.
ಇದರಿಂದ ವಿಶೇಷ ಅನುದಾನವನ್ನು ಕೇಂದ್ರದಿಂದ ಕೇಳಿಲ್ಲ. 30%ಕ್ಕೆ ಇಳಿಸುವ ಬಗ್ಗೆ ಉತ್ತರ ಬಂದ ನಂತರ ಸಭೆ ನಡೆಸಿ ತೀರ್ಮಾನ ಮಾಡಲಾಗುತ್ತದೆ. ಕಮಿಟಿ ಮೀಟಿಂಗ್ ನಲ್ಲಿ ಬರ, ನೀರಿನ ಪರಿಸ್ಥಿತಿಯ ವರದಿಯನ್ನ ಅಧಿಕಾರಿಗಳ ಬಳಿ ಕೇಳಿದ್ದೇವೆ ಎಂದು ತಿಳಿಸಿದರು.
ಗುತ್ತಿಗೆದಾರರಿಂದ ಸಚಿವರು ಹಣ ವಸೂಲಿ ಮಾಡುತ್ತಿದ್ದಾರೆಂಬ ಆರೋಪದ ಕುರಿತು ಮಾತನಾಡಿ, ಕೆಲಸ ಇಲ್ಲದವರು ಇದನ್ನೆಲ್ಲಾ ಮಾತನಾಡೋದು. ಹಿಂದಿನ ಸರ್ಕಾರದ ಅವಧಿಯಲ್ಲಿ ಒಂದು ವರ್ಷ ಪೇಮೆಂಟ್ ಕೊಟ್ಟಿರಲಿಲ್ಲ. ನಾವು ಬಂದು ಕೇವಲ ಎರಡೂವರೆ ತಿಂಗಳಾಗಿದೆ, ಅನುದಾನವನ್ನು ಒಂದೇ ಸಲ ಎಷ್ಟು ಅಂತಾ ಕೋಡೋಕೆ ಆಗುತ್ತದೆ.
ಕೆಲವರು ಬಾಯಿ ಚಪಲಕ್ಕೆ ಏನೇನೋ ಮಾತನಾಡ್ತಾರೆ, ಅವ್ರಿಗೆಲ್ಲಾ ಉತ್ತರ ಕೋಡೋಕೆ ಆಗುತ್ತಾ? ಎಂದು ಪ್ರಶ್ನಿಸಿದ ಅವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಯಾರ ಬಗ್ಗೆಯೂ ನಾನು ಮಾತನಾಡುವುದಿಲ್ಲ. ಯಾರ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸುವುದಿಲ್ಲ ಎಂದ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದರು.












Click it and Unblock the Notifications