ಬಿಜೆಪಿ ಸರ್ಕಾರಕ್ಕೆ ಒಂದು ವರುಷ: ಡಿಸಿಎಂ ಆತ್ಮಾವಲೋಕನ!
ಬೆಂಗಳೂರು, ಜುಲೈ 25: ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ನಾಡಿದ್ದು ಜುಲೈ 27ಕ್ಕೆ ಒಂದು ವರ್ಷವಾಗಲಿದೆ. ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಒಂದು ವರುಷ ತುಂಬಿದ್ದರ ಆಚರಣೆಯಿಂದ ಹಿಂದಕ್ಕೆ ಸರಿಯಲಾಗಿದೆ. ಆಪರೇಶನ್ ಕಮಲ, ಸಂಪುಟ ವಿಸ್ತರಣೆ ವಿಳಂಬ, ಅತಿವೃಷ್ಟಿ, ಉಪ ಚುನಾವಣೆ ನಂತರ ಇದೀಗ ಕೋವಿಡ್ ಸಂಕಷ್ಟದಲ್ಲಿಯೇ ಬಿಜೆಪಿ ಸರ್ಕಾರ ಒಂದು ವರ್ಷದ ಆಡಳಿತ ಮುಗಿಸುತ್ತಿದೆ.
Recommended Video
ಇದೇ ಸಂದರ್ಭದಲ್ಲಿ ಡಿಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಅವರು ರಾಜ್ಯ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿದ್ದಾರೆ. ತಮ್ಮ ಸರ್ಕಾರದ ಆಡಳಿತದ ಬಗ್ಗೆ ವಿವರಿಸಿದ್ದಾರೆ.

ಸವಾಲುಗಳ ಮಧ್ಯೆ
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿ ಅಧಿಕಾರವಹಿಸಿಕೊಂಡ ಬಳಿಕ ಸವಾಲುಗಳ ಮಧ್ಯೆಯೂ ಉತ್ತಮ ಆಡಳಿತ ಕೊಟ್ಟಿದ್ದೇವೆಂದು ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರು ಹೇಳಿದ್ದಾರೆ.
ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷದ ಅವಧಿ ಪೊರೈಸಿದೆ. ಈ ಅವಧಿಯಲ್ಲಿ ಸಿಎಂ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಉತ್ತಮ ಆಡಳಿತ ಕೊಡುವ ಮೂಲಕ ಜನರ ಕೈಹಿಡಿಯುವ ಕೆಲಸ ಮಾಡಿದ್ದೇವೆ. ನಾವು ಅಧಿಕಾರ ವಹಿಸಿಕೊಂಡಾಗ ಅನಾವೃಷ್ಟಿ ಹಾಗೂ ಅತಿವೃಷ್ಟಿ ಎರಡನ್ನೂ ಎದುರಿಸಿದ್ದೇವೆ ಎಂದು ಡಾ. ಅಶ್ವಥ್ ನಾರಾಯಣ ಹೇಳಿದ್ದಾರೆ.

ಅತಿವೃಷ್ಟಿ ಸವಾಲು
ಅನಾವೃಷ್ಟಿ ಸಂದರ್ಭದಲ್ಲಿ ಹಿಂದಿನ ಮೈತ್ರಿ ಸರ್ಕಾರ ಸಂಪೂರ್ಣ ವಿಫಲವಾಗಿತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೆ ಅತಿವೃಷ್ಟಿ ಹಾಗೂ ನೆರೆಯಿಂದ ರಾಜ್ಯದ ಜನತೆ ಸಂಕಷ್ಟದಲ್ಲಿದ್ದರು. ಅತಿವೃಷ್ಟಿ ಹಾಗೂ ಪ್ರವಾಹದ ಸಂದರ್ಭದಲ್ಲಿ 6,000 ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರ ಸಂಕಷ್ಟದಲ್ಲಿದ್ದ ಜನರಿಗೆ ತಲುಪಿಸಿ ಸಾಫಲ್ಯ ಮೆರೆಯಿತು.
ಪ್ರವಾಹ ಪೀಡಿತ ಪ್ರದೇಶಗಳ ಕುಟುಂಬಗಳಿಗೆ ತಲಾ 10 ಸಾವಿರ ರೂಪಾಯಿಗಳನ್ನು ಬಿಜೆಪಿ ಸರ್ಕಾರ ಪರಿಹಾರ ರೂಪದಲ್ಲಿ ನೀಡಿತ್ತು. ಜೊತೆಗೆ ಸಂಪೂರ್ಣವಾಗಿ ಕುಸಿದಿದ್ದ ಮನೆಗಳಿಗೆ ತಲಾ 5 ಲಕ್ಷ ರೂಪಾಯಿಗಳ ಪರಿಹಾರವನ್ನು ನಮ್ಮ ಸರ್ಕಾರ ಪರಿಹಾರ ರೂಪದಲ್ಲಿ ಕೊಟ್ಟಿತ್ತು. ಅತಿವೃಷ್ಟಿ ಸಂದರ್ಭದಲ್ಲಿ ಬೆಳೆ ಹಾನಿಗೆ 1,000 ಕೋಟಿ ರೂಪಾಯಿಗಳ ಪರಿಹಾರ ಹಂಚಿಕೆ ಮಾಡಿದ್ದೇವೆ. ಹೀಗೆ ಒಟ್ಟಾರೆಯಾಗಿ ಅತಿವೃಷ್ಟಿ ಹಾಗೂ ಪ್ರವಾಹದ ಸಂದರ್ಭದಲ್ಲಿ ಒಟ್ಟಾರೆ 6,018 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಡಾ. ಅಶ್ವಥ್ ನಾರಾಯಣ ಮಾಹಿತಿ ಕೊಟ್ಟಿದ್ದಾರೆ.

ಉಪ ಚುನಾವಣೆ
ಬಿ.ಎಸ್. ಯಡಿಯೂರಪ್ಪ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ, ಮುಖ್ಯಮಂತ್ರಿಗಳಾಗಿದ್ದಾಗ ಜನರ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಹೀಗಾಗಿಯೇ ಉಪ ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನಗಳನ್ನು ಪಡೆಯುವುದರೊಂದಿಗೆ ಬಹುಮತವನ್ನು ನಮ್ಮ ಸರ್ಕಾರ ಪಡೆಯಿತು.
ಕಳೆದ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ತಿರಸ್ಕಾರ ಮಾಡಿದ್ದರು. ಆದರೂ ಭಂಡತನದಿಂದ ಮತ್ತೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸಿದ್ದರು. ಅವರ ಆಡಳಿತದಿಂದ ಜನತೆ ತತ್ತರಿಸಿ ಹೋಗಿದ್ದರು. ಹೀಗಾಗಿ ಜನತೆ ಬಯಸಿದಂತೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿತು ಎಂದು ಡಾ. ಅಶ್ವಥ್ ನಾರಾಯಣ ಹೇಳಿದರು.

ನಿರಂತರ ಸವಾಲುಗಳು
ನಮ್ಮ ಸರ್ಕಾರ ನಿರಂತರವಾಗಿ ಸವಾಲುಗಳನ್ನು ಎದುರಿಸಿ ಗೆದ್ದಿದೆ. ಅತಿವೃಷ್ಟಿ, ಕೋವಿಡ್ ಹೀಗೆ ಒಂದರ ಮೇಲೊಂದರಂತೆ ಕಠಿಣ ಸವಾಲುಗಳನ್ನು ಎದುರಿಸಿದ್ದೇವೆ.
ಕೋವಿಡ್ ಸಂದರ್ಭದಲ್ಲಿ ಇಡೀ ಪ್ರಪಂಚವೇ ಸಂಕಷ್ಟ ಎದುರಿಸುತ್ತಿದೆ. ಆದರೆ ನಮ್ಮ ಪ್ರಧಾನಿ ಇದನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಇಡೀ ದೇಶದಲ್ಲಿ ಒಗ್ಗಟ್ಟಾಗಿ ಕೋವಿಡ್ ಎದುರಿಸುತ್ತಿದ್ದೇವೆ. 130 ಜನಸಂಖ್ಯೆಯ ದೇಶದಲ್ಲಿ ಏನಾಗಬಹುದು ಎಂದು ಇಡೀ ಪ್ರಪಂಚವೇ ಎದುರು ನೋಡುತ್ತಿತ್ತು. ಆದರೆ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಿಂದ, ಕೋವಿಡ್ ಅನ್ನು ಸಮರ್ಥವಾಗಿ ನಿರ್ವಹಿಸಲಾಗಿದೆ.
ರಾಜ್ಯದಲ್ಲಿಯೂ ಕೋವಿಡ್ ಪರೀಕ್ಷೆಗೆ 100 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಪಿಪಿಇ ಕಿಟ್, ಔಷಧಿ ಉತ್ಪಾದನೆಯನ್ನು ರಾಜ್ಯ, ದೇಶದಲ್ಲಿಯೇ ಮಾಡಲಾಗುತ್ತಿದೆ ಎಂದು ಡಾ. ಅಶ್ವಥ್ ನಾರಾಯಣ ಅವರು ತಮ್ಮ ಸರ್ಕಾರದ ಸಾಧನೆಯನ್ನು ಹೇಳಿಕೊಂಡಿದ್ದಾರೆ.












Click it and Unblock the Notifications