ಬಗರ್ ಹುಕುಂ ಅರ್ಜಿದಾರರಿಗೆ ಸಾಗುವಳಿ ಚೀಟಿ ವಿತರಣೆ ಬಗ್ಗೆ ಬಿಗ್ ಅಪ್ಡೇಟ್
ಬಗರ್ ಹುಕುಂ ಯೋಜನೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಒಟ್ಟಾರೆ 1.26 ಲಕ್ಷ ಅರ್ಜಿದಾರರನ್ನು ಅರ್ಹರು ಎಂದು ಗುರುತಿಸಲಾಗಿದೆ. ಮುಂದಿನ ಆರು ತಿಂಗಳೊಳಗೆ ಅರ್ಹರೆಲ್ಲರಿಗೂ ಸಾಗುವಳಿ ಚೀಟಿ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಭರವಸೆ ನೀಡಿದ್ದಾರೆ.
ಮೊದಲ ಹಂತದಲ್ಲಿ ಡಿಸೆಂಬರ್ ಅಂತ್ಯದೊಳಗೆ ಕನಿಷ್ಠ 5000 ಜನರಿಗೆ ಡಿಜಿಟಲ್ ಸಾಗುವಳಿ ಚೀಟಿ ನೀಡಬೇಕು ಎಂಬ ಗುರಿಯನ್ನು ಹೊಂದಿದ್ದೇವೆ. ಜನವರಿ ತಿಂಗಳ ವೇಳೆಗೆ ಈ ಸಂಖ್ಯೆಯನ್ನು 20 ಸಾವಿರಕ್ಕೆ ಏರಿಸಲಾಗುವುದು. ಮುಂದಿನ ಆರು ತಿಂಗಳೊಳಗಾಗಿ ಎಲ್ಲರಿಗೂ ಸಾಗುವಳಿ ಚೀಟಿ ನೀಡಬೇಕು ಎಂಬುದು ನಮ್ಮ ಉದ್ದೇಶ ಎಂದು ಹೇಳಿದ್ದಾರೆ.

ಎಲ್ಲರಿಗ ಗುಂಡ್ಲುಪೇಟೆ ಮಾದರಿಯಲ್ಲೇ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಿಯೇ ಹಕ್ಕುಪತ್ರ ನೀಡಲಾಗುವುದು. ಈ ಮೂಲಕ ರೈತರ ಮಾಲೀಕತ್ವಕ್ಕೆ ಸರ್ಕಾರದ ಅಧಿಕೃತ ಮುದ್ರೆ ಒತ್ತಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಕಳೆದ ನಾಲ್ಕು ದಶಕಗಳಿಂದ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಲಕ್ಷಾಂತರ ರೈತರಿಗೆ ಜಮೀನು ಮಂಜೂರು ಮಾಡಲಾಗಿದೆ. ಆದರೆ, ನಾನಾ ಕಾರಣಗಳಿಂದಾಗಿ ರೈತರಿಗೆ ಸೂಕ್ತ ದಾಖಲೆಗಳನ್ನು ನೀಡಲಾಗಿಲ್ಲ. ಪರಿಣಾಮ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ರೈತರು ತಮ್ಮ ಪಾಲಿನ ಜಮೀನು ಇದ್ದರೂ ಸಹ ಪೋಡಿಯಾಗದೆ ಸರ್ಕಾರಿ ಕಚೇರಿಗಳಿಗೆ ಸುತ್ತುತ್ತಿದ್ದಾರೆ. ಹೀಗಾಗಿ ರೈತರಿಗೆ ಇಂತಹ ಶೋಷಣೆಗಳಿಂದ ತುಸು ನೆಮ್ಮದಿ ನೀಡಲು ಮುಂದಾಗಿದ್ದೇವೆ ಎಂದಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ನಮೂನೆ 1-5 ಹಾಗೂ 6-10 ಅನ್ನು ಸರಳೀಕರಣಗೊಳಿಸಿ, ರೈತರ ಜಮೀನನ್ನು ದುರಸ್ತಿ ಮಾಡಬೇಕು ಹಾಗೂ ಬಡ ರೈತರ ಪಾಲಿನ ಮಹತ್ವಾಕಾಂಕ್ಷೆಯ ಯೋಜನೆಯಾದ ಬಗರ್ ಹುಕುಂ ಅಡಿಯಲ್ಲಿ ಮಂಜೂರು ಮಾಡಲಾಗುವ ಜಮೀನಿಗೆ ಹಕ್ಕುಪತ್ರ ನೀಡಬೇಕು. ನೋಂದಣಿ ಕಚೇರಿಯಲ್ಲಿ ಸ್ವತಃ ತಹಶೀಲ್ದಾರ್ ನೋಂದಣಿ ಮಾಡಿಕೊಡುವಂತಹ ವ್ಯವಸ್ಥೆಯನ್ನು ರೂಪಿಸುವ ವಿಚಾರದಲ್ಲಿ ನಮ್ಮ ಸರ್ಕಾರ ದೃಢ ನಿರ್ಧಾರ ತೆಗೆದುಕೊಂಡಿತ್ತು ಎಂದು ಹೇಳಿದ್ದಾರೆ.
ಅದರಂತೆ ನಮೂನೆ 1-5 ಹಾಗೂ 6-10 ಅನ್ನು ಸರಳೀಕರಣಗೊಳಿಸಿ ಜಮೀನನ್ನು ದುರಸ್ತಿಗೊಳಿಸುವ ಕುರಿತು ಸುತ್ತೋಲೆ ಹೊರಡಿಸಿ ಅಭಿಯಾನವನ್ನು ಆರಂಭಿಸಿದ ನಂತರ ಇದೀಗ ಬಗರ್ ಹುಕುಂ ಯೋಜನೆಯ ಅಡಿ ಫಲಾನುಭವಿಗೆ ಆತನ ಜಮೀನನ್ನು ನೋಂದಣಿ ಮಾಡಿಸಿಕೊಡುವ ಮೂಲಕ ಕಂದಾಯ ಇಲಾಖೆ-ರಾಜ್ಯ ಸರ್ಕಾರ ಹೊರ ಮನ್ವಂತರಕ್ಕೆ ಮುನ್ನುಡಿ ಬರೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಮೊದಲ ಫಲಾನುಭವಿಗೆ ಡಿಜಿಟಲ್ ಸಾಗುವಳಿ ಚೀಟಿ
ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಹೋಬಳಿಯ ಬೊಮ್ಮನಹಳ್ಳಿ ಗ್ರಾಮದ ನಂಜುಂಡಯ್ಯ ಬಿನ್ ಹುಚ್ಚಯ್ಯ ಎಂಬುವರಿಗೆ ಇಂದು ಬಗರ್ ಹುಕುಂ ಅಧಿಕೃತ ಸಾಗುವಳಿ ಡಿಜಿಟಲ್ ಚೀಟಿಯನ್ನು ನೋಂದಣಿ ಮಾಡಿಸಿಕೊಡಲಾಗಿದೆ. ಕಳೆದ ನವೆಂಬರ್ 28ರಂದು ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಬಗರ್ ಹುಕುಂ ಸಮಿತಿಯಲ್ಲಿ ಅನುಮೋದನೆ ಪಡೆಯುತ್ತಿದ್ದಂತೆ ಗುಂಡ್ಲುಪೇಟೆ ತಹಶೀಲ್ದಾರರಾದ ರಮೇಶ್ ಬಾಬು ಅವರು ಇಂದು ಅಧಿಕೃತ ಡಿಜಿಟಲ್ ಸಾಗುವಳಿ ಚೀಟಿಯನ್ನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಿದ್ದಾರೆ ಎಂದು ಹೇಳಿದ್ದಾರೆ.
ಇದು ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ರಾಜ್ಯದಲ್ಲೇ ಮೊದಲ ನೋಂದಣಿ ಮಾಡಿಸಿದ ಡಿಜಿಟಲ್ ಸಾಗುವಳಿ ಚೀಟಿ ಪಡೆದ ಫಲಾನುಭವಿ ಎಂಬ ಶ್ರೇಯಕ್ಕೆ ನಂಜುಂಡಯ್ಯ ಪಾತ್ರರಾಗಿದ್ದಾರೆ. ಸರ್ಕಾರದ ಈ ನಡೆಯಿಂದ ಇನ್ನು ಮುಂದೆ ರೈತರ ಬವಣೆಗಳಿಗೆ ಶಾಶ್ವತ ಪರಿಹಾರ ನೀಡಿದಂತಾಗಿದೆ. ದಾಖಲೆ ಕಳವು, ತಿದ್ದುವುದು ಸೇರಿದಂತೆ ಯಾರೋ ಕೆಲವರು ಮಾಡುವ ಕೃತ್ಯಕ್ಕೆ ರೈತರು ಪ್ರತಿನಿತ್ಯ ಸರ್ಕಾರಿ ಕಚೇರಿಗಳಿಗೆ ಅಲೆಯುವುದು ಶಾಶ್ವತವಾಗಿ ತಪ್ಪಲಿದೆ. ರೈತರ ಜಮೀನು ಮಾಲೀಕತ್ವಕ್ಕೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ಈ ಬೆಳವಣಿಗೆ ರಾಜ್ಯದ ರಾಜಕೀಯ ಇತಿಹಾಸದಲ್ಲೇ ಮೈಲಿಗಲ್ಲು ಎಂದರೆ ತಪ್ಪಾಗಲಾರದು ಎಂದು ಕೃಷ್ಣಬೈರೇಗೌಡ ಹೇಳಿದ್ದಾರೆ.












Click it and Unblock the Notifications