Nelamangala elections: ಬೆಂಗಳೂರು ನಗರದ ಹೆಬ್ಬಾಗಿಲು ನೆಲಮಂಗಲದ ರಾಜಕೀಯ ಚಿತ್ರಣ
ಬೆಂಗಳೂರು, ಮಾರ್ಚ್, 27: ರಾಜ್ಯದಲ್ಲಿ ವಿಧಾಸಭೆ ಚುನಾವಣೆ ಕಣ ರಂಗೇರಿದ್ದು, ಎಲ್ಲಾ ರಾಜಕೀಯ ಪಕ್ಷಗಳ ರಾಜಕಾರಣಿಗಳು ಪ್ರಚಾರದಲ್ಲಿ ಕಾರ್ಯನಿರತರಾಗಿದ್ದಾರೆ. ಹಾಗಾದರೆ ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ರಂಗು ಹೇಗಿದೆ ಎಂದು ಇಲ್ಲಿ ಮಾಹಿತಿ ತಿಳಿಯಿರಿ.
ಮತ್ತೊಮ್ಮೆ ಚುನಾವಣಾ ಸಮರಕ್ಕೆ ಸಜ್ಜಾಗಿರುವ ನೆಲಮಂಗಲ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದಾಗಿದೆ. 2018, ಕಳೆದ ಚುನಾವಣೆಯಲ್ಲಿ ಇಲ್ಲಿ ಜನತಾ ದಳ (ಜಾತ್ಯತೀತ) ಪಕ್ಷದ ಅಭ್ಯರ್ಥಿ ಶ್ರೀನಿವಾಸಮೂರ್ತಿ ಜಯ ಸಾಧಿಸಿದ್ದರು. ಇನ್ನು ಇವರ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಆರ್.ನಾರಾಯಣಸ್ವಾಮಿ 24,321 ಮತಗಳ ಅಂತರದಿಂದ ಸೋಲನುಭವಿಸಿದ್ದರು.

ಬೆಂಗಳೂರು ಗ್ರಾಮಾಂತರ ಭಾಗದಲ್ಲೂ ಕೂಡ ವಿಧಾನಸಭೆ ಚುನಾವಣೆ ಬಿಸಿ ಜೋರಾಗಿದೆ. ಸಿಲಿಕಾನ್ ಸಿಟಿಯ ಹೆಬ್ಬಾಗಿಲು ಅಂತಲೇ ಹೆಸರುವಾಸಿಯಾಗಿರುವ ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲೂ ಕೂಡ ಚುನಾವಣೆ ಕಾವು ಏರತೊಡಗಿದೆ. ಲೋಕಸಭೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಭಾಗ ಆಗಿರುವ ನೆಲಮಂಗಲ, ವಿಧಾನಸಭೆಯಲ್ಲಿ ತನ್ನದೇ ಆದ ಕ್ಷೇತ್ರವನ್ನು ಒಳಗೊಂಡಿದೆ. ಪ್ರಸ್ತುತ ಜೆಡಿಎಸ್ ಭದ್ರಕೋಟೆ ಆಗಿರುವ ನೆಲಮಂಗಲದಲ್ಲಿ ಡಾ. ಶ್ರೀನಿವಾಸಮೂರ್ತಿ ಶಾಸಕರಾಗಿದ್ದಾರೆ.
ನೆಲಮಂಗಲ ಕ್ಷೇತ್ರ ಪರಿಚಯ
ನೆಲಮಂಗಲವು ಎರಡು ರಾಷ್ಟ್ರೀಯ ಹೆದ್ದಾರಿಗಳ ಜಂಕ್ಷನ್ ಪಾಯಿಂಟ್ ಆಗಿದೆ. ಬೆಂಗಳೂರು -ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75 ಮತ್ತು ಮುಂಬೈ-ಬೆಂಗಳೂರು-ಚೆನ್ನೈ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-4ರ ಬೆಂಗಳೂರು ನಗರದ ಉತ್ತರಕ್ಕಿದೆ. ಕಿರ್ಲೋಸ್ಕರ್, ಜಿಂದಾಲ್ ಸೇರಿ ಹಲವು ಕಂಪನಿ, ಬ್ಯಾಂಕ್‌ಗಳು, ಎರಡು ಕೈಗಾರಿಕಾ ಪ್ರದೇಶಗಳು, ನೀರು ಕಲುಷಿತಗೊಂಡಿರುವ ಬೃಹತ್ ಕೆರೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಇದೀಗ ಬೆಂಗಳೂರು ಗ್ರಾಮಾಂತರ ನಾಲ್ಕು ಕ್ಷೇತ್ರಗಳ ಪೈಕಿ ನೆಲಮಂಗಲ ಕ್ಷೇತ್ರ ಪ್ರತಿಷ್ಠೆಯ ಕಣವಾಗಿದೆ.

ಈ ಕ್ಷೇತ್ರ ಸದ್ಯ ಜೆಡಿಎಸ್ ಭದ್ರಕೋಟೆ ಆಗಿದೆ. ಜೆಡಿಎಸ್ ಪಕ್ಷದ ಡಾ. ಶ್ರೀನಿವಾಸಮೂರ್ತಿ ಇಲ್ಲಿನ ಶಾಸಕರಾಗಿದ್ದಾರೆ. ಈ ಬಾರಿಯೂ ಇವರಿಗೆ ಜೆಡಿಎಸ್ ಟಿಕೆಟ್ ಘೋಷಣೆ ಮಾಡಿ, ಕಣಕ್ಕಿಳಿಸಿದೆ. ಪುರಸಭೆಯನ್ನು ನಗರಸಭೆ ಮಾಡಿಸಿ ಒಳ ಚರಂಡಿಗೆ ಅನುದಾನ ತಂದಿದ್ದೇನೆ. ಈ ಮೂಲಕ ನಗರ ಮುಖ್ಯ ರಸ್ತೆಯನ್ನು ಅಭಿವೃದ್ಧಿ ಮಾಡಿಸಿದ್ದೇನೆ ಎಂದು ಶಾಸಕರೇ ಹೇಳಿಕೊಂಡಿದ್ದಾರೆ. ನಗರದಿಂದ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆ ಅಭಿವೃದ್ಧಿಪಡಿಸಲಾಗಿದೆ.
Nelamangala Constituency Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ಕೆ. ಶ್ರೀನಿವಾಸ ಮೂರ್ತಿ (ಜೆಡಿಎಸ್) | 69,277 | ಆರ್ ನಾರಾಯಣಸ್ವಾಮಿ (ಕಾಂಗ್ರೆಸ್) | 44,956 |
| 2013 | ಕೆ. ಶ್ರೀನಿವಾಸ ಮೂರ್ತಿ (ಜೆಡಿಎಸ್) | 60,492 | ಅಂಜನಾ ಮೂರ್ತಿ (ಕಾಂಗ್ರೆಸ್) | 45,389 |
| 2008 | ಎಂ.ವಿ. ನಾಗರಾಜು (ಬಿಜೆಪಿ ) | 37,892 | ಅಂಜನಾ ಮೂರ್ತಿ (ಕಾಂಗ್ರೆಸ್) | 35,741 |
ಕ್ಷೇತ್ರದಲ್ಲಿನ ಸಮಸ್ಯೆಗಳು
ನೆಲಮಂಗಲವು ಗ್ರಾಮಾಂತರ ಹಾಗೂ ನಗರ ಪ್ರದೇಶಗಳನ್ನು ಹೊಂದಿರುವ ಕ್ಷೇತ್ರ ಆಗಿದೆ. ಬೆಂಗಳೂರು-ಮಂಗಳೂರು, ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕ್ಷೇತ್ರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಪ್ರತಿನಿತ್ಯ ಇದ್ದೇ ಇರುತ್ತದೆ. ಇನ್ನು ರಾಷ್ಟ್ರೀಯ ಹೆದ್ದಾರಿಯಿರುವ ಹಿನ್ನೆಲೆಯಲ್ಲಿ ರಸ್ತೆ ಅಕ್ಕ ಪಕ್ಕದಲ್ಲಿರುವ ಭೂಮಿಗೆ ಬೆಲೆ ದುಬಾರಿಯಾಗಿದೆ. ಅಲ್ಲದೇ ಕ್ಷೇತ್ರವು ಹಲವಾರು ಕೆರೆಗಳನ್ನು ಒಳಗೊಂಡಿದೆ. ಕೆರೆಗಳಿಗೆ ನೀರನ್ನರಸಿ ಬರುವ ಆನೆಗಳು ರೈತರ ಬೆಳೆಯನ್ನು ನಾಶ ಮಾಡುತ್ತಿದ್ದು, ಇದರಿಂದ ಇಲ್ಲಿನ ರೈತರು ಬೇಸತ್ತು ಹೋಗಿದ್ದಾರೆ.
ಎರಡು ಬಾರಿ ಶಾಸಕರಾಗಿರುವ ಡಾ. ಶ್ರೀನಿವಾಸಮೂರ್ತಿಗೆ ಈ ಬಾರಿಯೂ ಜೆಡಿಎಸ್ ಘೋಷಣೆ ಮಾಡಿದೆ. ಮತ್ತೊಂದೆಡೆ ಬಿಜೆಪಿಯಿಂದ ಮಾಜಿ ಶಾಸಕ ಎಂ.ವಿ. ನಾಗರಾಜ್ ಅಖಾಡಕ್ಕಿಳಿಯಲು ತಯಾರಾಗಿದ್ದಾರೆ. ಈ ಹಿಂದೆ ನೆಲಮಂಗಲದಿಂದ ಶಾಸಕರಾಗಿ, ಕಾಂಗ್ರೆಸ್‌ನಿಂದ ಧರ್ಮಸಿಂಗ್ ಸಂಪುಟದಲ್ಲಿ ಸಚಿವರಾಗಿದ್ದ ಅಂಜನ್ ಮೂರ್ತಿಯವರು ಈ ಬಾರಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಇನ್ನೊಂದೆಡೆ ಉದ್ಯಮಿ ಶ್ರೀನಿವಾಸ್ ಎಂಬುವವರು ಸಹ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಪೈಪೋಟಿ ನಡೆಸುತ್ತಿದ್ದಾರೆ.
ನೆಲಮಂಗಲ ಕ್ಷೇತ್ರದಲ್ಲಿ ಒಟ್ಟು 2,10,357 ಮತದಾರರಿದ್ದಾರೆ. ಇದರಲ್ಲಿ ಲಿಂಗಾಯತ 40,000, ಎಸ್‌ಸಿ, ಎಸ್‌ಟಿ 68,000, ಒಕ್ಕಲಿಗ 35,000 ಮತದಾರು ಇದ್ದಾರೆ. ಹಾಗೆಯೇ ವಿಶ್ವಕರ್ಮ 20,000, ಬ್ರಾಹ್ಮಣ 15,000, ಕುರುಬರು 10,000, ಸವಿತಾ ಸಮಾಜದ ಮತದಾರರು 4,000 ಜನರಿದ್ದಾರೆ. ಉಳಿದಂತೆ ಮುಸ್ಲಿಂ 8,000 ಸೇರಿ ಇತರೆ ಮತದಾರರು 34,000 ಜನರಿದ್ದಾರೆ.












Click it and Unblock the Notifications