Karnataka Assembly Elections: ಟಿಪ್ಪು ರಾಜಧಾನಿಗೆ ದಳಪತಿ ಯಾರು?

ಶ್ರೀರಂಗಪಟ್ಟಣ, ಮಾರ್ಚ್‌ 23: ಮಂಡ್ಯ ಜಿಲ್ಲೆಯ ಬಹುಮುಖ್ಯ ಕ್ಷೇತ್ರವಾದ ಶ್ರೀರಂಗಪಟ್ಟಣದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಅಖಾಡ ಶುರುವಾದಗಿನಿಂದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಸ್ಥಿತಿಗತಿ ತಿಳಿಯುವುದು ಅವಗತ್ಯವಾಗಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಒಂದು ಪ್ರಮುಖ ಐತಿಹಾಸಿಕ, ಸಾಂಸ್ಕೃತಿಕ ಹಾಗು ಧಾರ್ಮಿಕ ಮಹತ್ವ ಹೊಂದಿರುವ ಪಟ್ಟಣವಾಗಿದೆ. ಮೈಸೂರು ನಗರದಿಂದ ಕೇವಲ 13 ಕಿ.ಮೀ , ಮಂಡ್ಯ ನಗರದಿಂದ 25 ಕಿ ಮೀ ದೂರದಲ್ಲಿರುವ ಶ್ರೀರಂಗಪಟ್ಟಣ ಮಂಡ್ಯ ಜಿಲ್ಲೆಯ ಗಡಿಯಲ್ಲಿದೆ. ಪಟ್ಟಣವು ಸುತ್ತಲೂ ಕಾವೇರಿ ನದಿಯಿಂದ ಆವೃತವಾಗಿದೆ. ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿಯು ಪೂರ್ವವಾಹಿನಿ ಹಾಗೂ ಪಶ್ಚಿಮವಾಹಿನಿಗಳಾಗಿ ಕವಲೊಡೆದು ಹರಿಯುತ್ತದೆ. ಇದರಿಂದಾಗಿ ಶ್ರೀರಂಗಪಟ್ಟನವು ಒಂದು ದ್ವೀಪದಂತಿದೆ.

karnataka assembly elections 2023 srirangapatna constituency analysis

ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಶ್ರೀರಂಗಪಟ್ಟಣ ಐತಿಹಾಸಿಕ ಮಹತ್ವವುಳ್ಳ ಪ್ರದೇಶವಾಗಿದೆ. ಶ್ರೀರಂಗಪಟ್ಟಣ ಮೈಸೂರು ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಅದು ಯದು ವಂಶದ ಯದುರಾಯರ ಕಾಲದಿಂದಲೂ ಟಿಪ್ಪು ಸುಲ್ತಾನ್‌ನ ತನಕವೂ ಮುಂದುವರೆದಿತ್ತು. ಇಲ್ಲಿ ಇತಿಹಾಸ ಪ್ರಸಿದ್ದ ಶ್ರೀರಂಗನಾಥ ಸ್ವಾಮಿ ದೇವಾಲಯವಿದೆ. ಈ ಊರು ಮೈಸೂರಿನ ರಾಜಧಾನಿಯಾದಾಗ ತನ್ನ ಪ್ರಾಮುಖ್ಯತೆಯನ್ನು ಗಳಿಸಿತು. ಇಲ್ಲಿನ ದೇವಾಲಯಗಳು, ದರಿಯಾ ಡೌಲಾತು ಆ ಕಾಲದಲ್ಲೇ ನಿರ್ಮಾಣಗೊಂಡವು. ಶ್ರೀರಂಗಪಟ್ಟಣವು ಬೆರಗುಗೊಳಿಸುವ ಸುಂದರ ತಾಣಗಳನ್ನು ಹೊಂದಿದೆ. ಭಾರತದ ಎರಡನೆ ಅತಿದೊಡ್ಡ ಜಲಪಾತವೆಂದು ಪರಿಗಣಿಸಲ್ಪಟಿರುವ ಶಿವನಸಮುದ್ರ ಜಲಪಾತದಂತಹ ಪ್ರಸಿದ್ಧ ತಾಣಗಳು ಈ ತಾಲೂಕಿನ ವ್ಯಾಪ್ತಿಯಲ್ಲಿವೆ. ಇದಲ್ಲದೆ ಅನೇಕ ಐತಿಹಾಸಿಕ ಸ್ಥಳಗಳು ಇಲ್ಲಿವೆ.

ಶ್ರೀರಂಗಪಟ್ಟಣದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೊದಲಿನಿಂದಲೂ ಎದುರಾಳಿ ಪಕ್ಷಗಳಾಗಿದ್ದು, ಈ ಬಾರಿ ಬಿಜೆಪಿ ಕೂಡ ಪೈಪೋಟಿ ನೀಡುವ ಸಾಧ್ಯತೆ ಹೆಚ್ಚಾಗಿದೆ. ಇದರ ನಡುವೆ ರೈತ ಸಂಘವೂ ಪ್ರವೇಶಿಸಿದ್ದು, ಈಗಿನಿಂದಲೇ ರೈತಸಂಘದ ಅಭ್ಯರ್ಥಿಯೂ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಎರಡು ಪಕ್ಷ ಮಾತ್ರವಲ್ಲ ಎರಡು ಕುಟುಂಬಗಳು ರಾಜಕೀಯ ಪ್ರಾಬಲ್ಯ ಹೊಂದಿವೆ. ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ ಎರಡು ಕುಟುಂಬಗಳ ಸೆಣಸಾಟವೂ ಆಗಿದೆ. ಎರಡು ಕುಟುಂಬಗಳು ಸುಮಾರು ನಾಲ್ಕೈದು ದಶಕಗಳಿಂದ ರಾಜಕೀಯ ಮಾಡಿಕೊಂಡು ಬಂದಿರುವುದು ವಿಶೇಷ.

karnataka assembly elections 2023 srirangapatna constituency analysis

ಹಾಲಿ ಶಾಸಕ ಮತ್ತು ಮುಂದಿನ ವಿಧಾನಸಭಾ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಆಗಿರುವ ರವೀಂದ್ರ ಶ್ರೀಕಂಠಯ್ಯ ಮತ್ತು ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಎ.ಬಿ.ರಮೇಶ್ ಬಾಬು ಬಂಡಿಸಿದ್ದೇಗೌಡರ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ಈ ಎರಡು ಕುಟುಂಬದ ಸ್ಪರ್ಧೆಯಂತೆ ಚುನಾವಣೆ ಕಣ ಏರ್ಪಟ್ಟಿದೆ. ದಿವಂಗತ ಎ.ಬಿ.ಬಂಡಿಸಿದ್ದೇಗೌಡ ಅವರು ಎರಡು ಬಾರಿ ಶಾಸಕರಾಗಿ ಉಗ್ರಾಣ ಸಚಿವರಾಗಿ ಕಾರ್ಯನಿರ್ವಹಿದ್ದರು. ಅವರ ಅಕಾಲಿಕ ನಿಧನದ ಬಳಿಕ ಉಪಚುನಾವಣೆ ನಡೆದಾಗ ಅವರ ಪತ್ನಿ ವಿಜಯಲಕ್ಷ್ನಿ ಬಂಡಿಸಿದ್ದೇಗೌಡರು ರಾಜಕೀಯಕ್ಕೆ ಎಂಟ್ರಿ ಕೊಡುವುದರೊಂದಿಗೆ ಗೆಲುವು ಸಾಧಿಸಿದ್ದರು. ಆ ನಂತರ ಮೂರು ಬಾರಿ ಶಾಸಕಿಯಾದ ಅವರು ಎರಡು ಬಾರಿ ನಿಗಮ ಮಂಡಳಿ ಅಧ್ಯಕ್ಷರಾಗಿದ್ದರು. ಇವರ ಪುತ್ರರಾಗಿರುವ ಎ.ಬಿ.ರಮೇಶ್ ಬಾಬು ಬಂಡಿಸಿದ್ದೇಗೌಡರು ಈ ಹಿಂದೆ ಜೆಡಿಎಸ್ ನಿಂದ ಸ್ಪರ್ಧಿಸಿ ಎರಡು ಬಾರಿ ಶಾಸಕರಾಗಿದ್ದರು. ಆದರೆ ಬದಲಾದ ರಾಜಕೀಯದಲ್ಲಿ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದು ಈಗ ಕ್ಷೇತ್ರದಲ್ಲಿ ಕಾಂಗ್ರೆಸ್ ನ್ನು ಪ್ರತಿನಿಧಿಸಿಕೊಂಡು ಬರುತ್ತಿದ್ದಾರೆ.

ಇನ್ನು ಹಾಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಬಗ್ಗೆ ಹೇಳುವುದಾದರೆ ಅವರ ತಾತ ಚುಂಚೇಗೌಡರು 1957ರಲ್ಲಿ ಕಾಂಗ್ರೆಸ್ ನಿಂದ ಶಾಸಕರಾಗಿದ್ದರು. ಪುತ್ರ ಶ್ರೀಕಂಠಯ್ಯ ತಂದೆ ಪ್ರತಿನಿಧಿಸುತ್ತಿದ್ದ ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧಿಸಿದ್ದರೂ ಗೆಲುವು ಸಾಧ್ಯವಾಗಿರಲಿಲ್ಲ. ಬಳಿಕ ಪಕ್ಷೇತರರಾಗಿ ಅದೃಷ್ಟ ಪರೀಕ್ಷೆಗಿಳಿದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಅವರ ಪತ್ನಿ ಪಾರ್ವತಿ ಶ್ರೀಕಂಠಯ್ಯ ಅವರು 1999ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇವರ ಪುತ್ರನಾಗಿರುವ ರವೀಂದ್ರ ಶ್ರೀಕಂಠಯ್ಯ 2018ರವರೆಗೆ ಜೆಡಿಎಸ್ ನಲ್ಲಿದ್ದು ಎರಡು ಬಾರಿ ಗೆಲುವು ಸಾಧಿಸಿ ಮೂರನೇ ಬಾರಿಯೂ ಗೆಲುವಿನ ಹಾದಿಯಲ್ಲಿದ್ದ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರು ಬದಲಾದ ರಾಜಕೀಯ ಕಾರಣಗಳಿಂದ ಕಾಂಗ್ರೆಸ್‌ಗೆ ಮುಖಮಾಡಿ ಅಲ್ಲಿಂದ 2018ರ ಸ್ಪರ್ಧೆಗೆ ಟಿಕೆಟ್ ಪಡೆದಿದ್ದರು. ಇದೇ ವೇಳೆ ಕಾಂಗ್ರೆಸ್ ನಲ್ಲಿದ್ದ ರವೀಂದ್ರ ಶ್ರೀಕಂಠಯ್ಯ ಅವರು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು ಸದ್ಯ ಶಾಸಕರಾಗಿರುವ ಅವರು ಮುಂದಿನ ಬಾರಿಯ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ ಕ್ಷೇತ್ರದಲ್ಲಿ ಅಧಿಕೃತವಾಗಿ ಯಾವುದೇ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಆದರೆ ಕಾಂಗ್ರೆಸ್‌ನಿಂದ ರಮೇಶ್ ಬಾಬು ಅವರಿಗೆ ಬಿಜೆಪಿಯಿಂದ ಇಂಡುವಾಳು ಸಚ್ಚಿದಾನಂದ ಎಂದು ಹೇಳಲಾಗುತ್ತಿದೆ. ಇವರ ನಡುವೆ ರೈತಸಂಘವೂ ಕೂಡ ಸ್ಪರ್ಧೆಗೆ ಇಳಿದಿದೆ. ರೈತ ಸಂಘದಲ್ಲಿ ಹೋರಾಟದ ಮೂಲಕ ಗುರುತಿಸಿಕೊಂಡಿದ್ದ ಕಿರಂಗೂರು ಪಾಪು (ಮೋಹನ್‌ ಕುಮಾರ್) ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಇಚ್ಛೆ ತೋರುತ್ತಿದ್ದಾರೆ. ಒಟ್ಟಾರೆ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಈ ಬಾರಿಯ ರಾಜಕೀಯ ಜಿದ್ದಾಜಿದ್ದಿನಲ್ಲಿ ಯಾರತ್ತ ಮತದಾರರು ಒಲವು ತೋರುತ್ತಾರೆ ಎಂಬುದೇ ಕುತೂಹಲಕಾರಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+