ಇದೇ ನನ್ನ ಕೊನೆಯ ಚುನಾವಣೆ : ಮಲ್ಲಿಕಾರ್ಜುನ ಖರ್ಗೆ
Recommended Video

ಕಲಬುರಗಿ, ಮಾರ್ಚ್ 04 : 'ನನಗೂ ವಯಸ್ಸಾಗಿದೆ. ಇದೇ ನನ್ನ ಕೊನೆಯ ಚುನಾವಣೆ' ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. 2019ರ ಚುನಾವಣೆಯಲ್ಲಿ ಖರ್ಗೆ ವಿರುದ್ಧ ಸ್ಪರ್ಧಿಸಲು ಬಿಜೆಪಿ ಡಾ.ಉಮೇಶ್ ಜಾಧವ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಿದೆ.
ಸೇಡಂನಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮಾಡಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, '9 ಬಾರಿ ಶಾಸಕನಾಗಿ, ಎರಡು ಬಾರಿ ಸಂಸದನಾಗಿ ಸತತ 11 ಬಾರಿ ಜನರು ಆಯ್ಕೆ ಮಾಡಿದ್ದಾರೆ. ಈ ಬಾರಿಯೂ ಗೆದ್ದರೆ ಒಂದು ಡಜನ್ ಬಾರಿ ಗೆದ್ದು ದಾಖಲೆ ಮಾಡಿದಂತಾಗುತ್ತದೆ' ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಲು ಅನುಕಂಪದ ಆಧಾರದ ಮೇಲೆ ಮತಗಳನ್ನು ಸೆಳೆಯಲು ನಿವೃತ್ತಿಯ ಮಾತನಾಡಿದರೇ? ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಬಿಜೆಪಿ ಖರ್ಗೆ ಅವರನ್ನು ಈ ಬಾರಿ ಸೋಲಿಸಲೇಬೇಕು ಎಂದು ಪಣ ತೊಟ್ಟಿದೆ.
ಡಾ.ಉಮೇಶ್ ಜಾಧವ್, ಬಾಬೂರಾವ್ ಚಿಂಚನಸೂರು, ಮಾಲೀಕಯ್ಯ ಗುತ್ತೇದಾರ್ ಮಲ್ಲಿಕಾರ್ಜುನ ಖರ್ಗೆ ಅವರ ಗೆಲುವಿನ ಹಿಂದಿನ ಶಕ್ತಿಯಾಗಿದ್ದರು. ಆದರೆ, ಈಗ ಎಲ್ಲಾ ನಾಯಕರು ಬಿಜೆಪಿಯಲ್ಲಿದ್ದಾರೆ. ಇದರಿಂದಾಗಿ ಖರ್ಗೆ ಅವರಿಗೆ ಹಿನ್ನಡೆ ಆಗಲಿದೆಯೇ? ಎಂದು ಕಾದು ನೋಡಬೇಕು.....

ಜನ ನನ್ನ ಕೈ ಹಿಡಿದಿದ್ದಾರೆ
'ಗುರುಮಿಠಕಲ್ ಕ್ಷೇತ್ರ ಬದಲಾವಣೆ ನಂತರವೂ ಜನ ನನ್ನ ಕೈ ಹಿಡಿದಿದ್ದಾರೆ. ನನಗೂ ವಯಸ್ಸಾಗಿದೆ. ಇದೇ ನನ್ನ ಕೊನೆಯ ಚುನಾವಣೆ' ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಸೋಲಿಲ್ಲದ ಸರದಾರ
ಮಲ್ಲಿಕಾರ್ಜುನ ಖರ್ಗೆ ಅವರು ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದಿದ್ದಾರೆ. ಗುರುಮಿಠಕಲ್ ಕ್ಷೇತ್ರದಿಂದ 8 ಬಾರಿ ಮತ್ತು ಚಿತ್ತಾಪುರ ಕ್ಷೇತ್ರದಿಂದ 1 ಬಾರಿ ಸೇರಿ ಒಟ್ಟು 9 ಬಾರಿ ವಿಧಾನಸಭೆಗೆ ಆರಿಸಿ ಬಂದಿದ್ದಾರೆ. ಎರಡು ಬಾರಿ ಅವರು ಸಂಸದರಾಗಿ ಆಯ್ಕೆಯಾಗಿದ್ದಾರೆ.

ಸೋಲಿಸಲು ಬಿಜೆಪಿ ಪಣ
ಬಿಜೆಪಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇಬ್ಬರು ನಾಯಕರನ್ನು ಸೋಲಿಸಬೇಕು ಎಂದು ಪಣ ತೊಟ್ಟಿದೆ. ಒಬ್ಬರು ಮಲ್ಲಿಕಾರ್ಜು ಖರ್ಗೆ ಗುಲ್ಬರ್ಗಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ. ಮತ್ತೊಬ್ಬರು ಗುಲ್ಬರ್ಗಾ ಪಕ್ಕದ ಸೊಲ್ಲಾಪುರ ಕ್ಷೇತ್ರದಿಂದ ಕಣಕ್ಕಿಳಿಯುವ ಸುಶೀಲ್ ಕುಮಾರ್ ಶಿಂಧೆ.

ಮಲ್ಲಿಕಾರ್ಜುನ ಖರ್ಗೆ ಗೆಲುವು
2014ರ ಚುನಾವಣೆಯಲ್ಲಿ 507193 ಮತಗಳನ್ನು ಪಡೆದು ಮಲ್ಲಿಕಾರ್ಜುನ ಖರ್ಗೆ ಅವರು ಗುಲ್ಬರ್ಗಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಬಿಜೆಪಿಯಿಂದ ಅವರ ಎದುರಾಳಿಯಾಗಿ ರೇವು ನಾಯಕ್ ಬೆಳಮಗಿ ಕಣಕ್ಕಿಳಿದಿದ್ದರು. 432460 ಮತಗಳನ್ನು ಅವರು ಪಡೆದಿದ್ದರು.












Click it and Unblock the Notifications