ಕಲ್ಲನ್ನು ಕೆತ್ತಿ ಶಿಲೆ ಮಾಡುವವರ ಬದುಕು ಕಷ್ಟದಲ್ಲಿದೆ!
ಕಲಬುರಗಿ, ಏಪ್ರಿಲ್ 10 : ಇವರು ಎಲ್ಲಿಯವರು ಎಂದು ಸ್ಥಳೀಯರಿಗೆ ಗೊತ್ತಿಲ್ಲ. ಕಲ್ಲಿನಲ್ಲಿ ಗೃಹೋಪಯೋಗಿ ಸಾಮಾನುಗಳನ್ನು ಕೆತ್ತನೆ ಮಾಡುವ ಇವರು ಅಲೆಮಾರಿಗಳು. ಕೆತ್ತನೆ ಮಾರಾಟದಿಂದ ಬರುವ ಅಲ್ಪ ಹಣದಲ್ಲಿ ಬದುಕು ಸಾಗಿಸುವ ಕಷ್ಟದ ಜೀವಿಗಳು.
ಕೊರೊನಾ ಹರಡದಂತೆ ನಿಯಂತ್ರಿಸಲು ದೇಶಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. 21 ದಿನಗಳ ಲಾಕ್ ಡೌನ್ ವೇಳೆ ಈ ಅಲೆಮಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆತ್ತನೆಗಳನ್ನು ಕೊಳ್ಳುಲು ಜನರಿಲ್ಲ. ಅದನ್ನು ಹೋತ್ತು ಬೇರೆ ಕಡೆ ಹೋಗಿ ಮಾರಾಟ ಮಾಡಲು ಸಾಧ್ಯವಿಲ್ಲ.
ಲಾಕ್ ಡೌನ್ ಪರಿಣಾಮದಿಂದಾಗಿ ಬರುವ ಆದಾಯಕ್ಕೂ ಕತ್ತರಿ ಬಿದ್ದಿದೆ. ಇಂತಹ ಅಲೆಮಾರಿಗಳ ನೆರವಿಗೆ ತಹಶೀಲ್ದಾರ್ ಬಂದಿದ್ದಾರೆ. ಇದು ಕಲಬುರಗಿ ಜಿಲ್ಲೆಯ ಶಹಾಬಾದ ತಹಶೀಲ್ದಾರ್ ಸುರೇಶ ವರ್ಮಾ ಅವರ ಕಾರ್ಯ ವೈಖರಿ.

ಶುಕ್ರವಾರ ಸುರೇಶ ವರ್ಮಾ ಪಟ್ಟಣದ ಬಸವೇಶ್ವರ ಚೌಕ್, ಜೇವರ್ಗಿ ರಸ್ತೆಯ ಬೆಟ್ಟ ಪ್ರದೇಶ, ಭಂಕೂರ ಗ್ರಾಮದಲ್ಲಿ ಟೆಂಟ್ ಹಾಕಿ ನೆಲೆಸಿರುವ ಅಲೆಮಾರಿ ಜನಾಂಗದವರನ್ನು ಭೇಟಿ ಮಾಡಿದರು. ಬಡ ಕೂಲಿ ಕಾರ್ಮಿಕರಿಗೆ ತರಕಾರಿ, ಅಕ್ಕಿ, ಬೇಳೆ ಅಗತ್ಯ ವಸ್ತುಗಳನ್ನು ನೀಡಿದರು.
ಲಾಕ್ ಡೌನ್ ಪರಿಣಾಮದಿಂದ ಅಲೆಮಾರಿ, ಭಿಕ್ಷುಕರು, ನಿರ್ಗತಿಕರಿಗೆ ಆಹಾರದ ಸಮಸ್ಯೆ ಆಗುತ್ತಿದೆ. ಕಲಬುರಗಿ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಇಂತವರಿಗೆ ಅಹಾರ ಸರಬರಾಜು ಮಾಡಲು ಕ್ರಮಗಳನ್ನು ಕೈಗೊಂಡಿದೆ.

ಬೀದಿ ಬದಿಯಲ್ಲಿರುವ ಭಿಕ್ಷುಕರಿಗೆ, ನಿರ್ಗತಿಕರಿಗೆ ಸಿದ್ಧ ಆಹಾರ, ಸ್ವಚ್ಚ ಕುಡಿಯುವ ನೀರನ್ನು ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ನೀಡುತ್ತಿದ್ದು, ಅವರು ಹಸಿವಿನಿಂದ ಬಳಲದಂತೆ ನೋಡಿಕೊಳ್ಳುತ್ತಿದೆ.












Click it and Unblock the Notifications