ಟಾಟಾ, ಬಿರ್ಲಾ ಮೀರಿಸುವ ಶ್ರೀಗಳ ಬೆಡ್ ರೂಂ: ಯಾರದು 'ಆ' ಪೀಠಾಧಿಪತಿ?
ಕಲಬುರಗಿ, ಮೇ 10; ವರಿಷ್ಠರ ಎಚ್ಚರಿಕೆಯ ನಂತರವೂ ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮಾತಿನ ಪ್ರಹಾರ ಕಮ್ಮಿಯಾಗುತ್ತಿಲ್ಲ. "ನಾನು ಯಾರಿಗೂ ಹೆದರುವ ಮಗನಲ್ಲ" ಎಂದಿರುವ ಯತ್ನಾಳ್, ಹೆಸರು ಉಲ್ಲೇಖಿಸದೇ ಸ್ವಾಮೀಜಿಯವರೊಬ್ಬರ ಬಗ್ಗೆ ಅಣಕವಾಡಿದ್ದಾರೆ.
ರಾಜ್ಯದಲ್ಲಿರುವ ಇತರ ಕೆಲವು ಸ್ವಾಮೀಜಿಗಳು ಹೇಗೆ ಬದುಕು ಸಾಗಿಸುತ್ತಾರೆ, ಆ ಸ್ವಾಮಿ ಹೇಗೆ ಐಷಾರಾಮಿ ಜೀವನ ನಡೆಸುತ್ತಾರೆ ಎನ್ನುವುದರ ಬಗ್ಗೆ ಅತ್ಯಂತ ವ್ಯಂಗ್ಯದಿಂದ ಹೇಳಿಕೆಯನ್ನು ನೀಡಿರುವ ಯತ್ನಾಳ್, ಆ ಸ್ವಾಮೀಜಿ ವಿರುದ್ಧ ಏಕವಚನದ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲೂ ಸಮುದಾಯದ ಕೆಲವು ಪೀಠಾಧಿಪತಿಗಳ ವಿರುದ್ದ ಹರಿಹಾಯ್ದಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಕೆಲವು ಪೀಠಾಧಿಪತಿಗಳ ಲೈಫ್ ಸ್ಟೈಲ್ ಬಗ್ಗೆ ಲೇವಡಿ ಮಾಡಿದ್ದಾರೆ.
ಈ ಹಿಂದೆ ಕೂಡಾ ಪಂಚಮಸಾಲಿ ಪೀಠಾಧಿಪತಿಗಳೋರ್ವರ ಬಗ್ಗೆ ಯತ್ನಾಳ್ ಮಾತನಾಡಿದ್ದರು. ಈಗ ಕೂಡ ಪರೋಕ್ಷವಾಗಿ ಅದೇ ಸ್ವಾಮೀಜಿಯ ಬಗ್ಗೆ ಯತ್ನಾಳ್ ಮಾತನಾಡುತ್ತಿದ್ದಾರಾ? ಎನ್ನುವುದು ಅಸ್ಪಷ್ಟವಾಗಿದೆ. ಟಾಟಾ, ಬಿರ್ಲಾ ಮೀರಿಸುವ ಸ್ವಾಮೀಜಿಯ ಬೆಡ್ ರೂಂ, ಮುಂದೆ ಓದಿ..

ಕಲಬುರಗಿಯಲ್ಲಿ ಮಾತನಾಡಿದ ಯತ್ನಾಳ್
ಕಲಬುರಗಿಯಲ್ಲಿ ಮಾತನಾಡುತ್ತಿದ್ದ ಯತ್ನಾಳ್,"ಕೆಲವೊಂದು ಸ್ವಾಮೀಜಿಗಳು ಆಧ್ಯಾತ್ಮಿಕವಾಗಿ ತಮ್ಮನ್ನು ತೊಡಗಿಸಿಕೊಂಡು ಸಮಾಜಕ್ಕೆ ಒಳಿತನ್ನು ಮಾಡುತ್ತಿದ್ದಾರೆ. ಅಂತಹ ಸ್ವಾಮೀಜಿಗಳ ಬೆಡ್ ರೂಂನಲ್ಲಿ ಒಂದು ಒಳ್ಳೆಯ ಮಂಚವಿಲ್ಲ, ಚಾಪೆಯ ಮೇಲೆ ಮಲಗುತ್ತಾರೆ. ಯಾವುದೋ ಹಳೆಯ ಫ್ಯಾನ್ ಶಬ್ದದಿಂದ ಮಾಡಿಕೊಂಡು ತಿರುಗುತ್ತಿರುತ್ತದೆ. ಇಂತಹ ಸ್ವಾಮೀಜಿಗಳೂ ನಮ್ಮ ನಾಡಿನಲ್ಲಿ ಇದ್ದಾರೆ"ಎಂದು ಯತ್ನಾಳ್ ಹೇಳಿದ್ದಾರೆ.

ಸ್ವಾಮೀಜಿಯ ಬಗ್ಗೆ ಯತ್ನಾಳ್ ಲೇವಡಿ
"ಇನ್ನು ಕೆಲವು ಸ್ವಾಮೀಜಿಗಳಿದ್ದಾರೆ, ಅವನು ಎಷ್ಟು ಐಷಾರಾಮಿಯಾಗಿ ಬದುಕುತ್ತಿದ್ದಾನೆ. ಅವನು ಕೂರುವ ಕುರ್ಚಿ ಏನು, ಅವನ ಬೆಡ್ ರೂಂ ಏನು. ಟಾಟಾ ಬಿರ್ಲಾ ಸಹಿತ ಅಂತಹ ಬೆಡ್ ರೂಂನಲ್ಲಿ ಮಲಗಿಕೊಳ್ಳುವುದಿಲ್ಲವೇನೋ?. ಸೆಟೆದು ಮಾತನಾಡುವುದೇನು, ಯಾವಾಗ ನೋಡಿದರೂ ಆಶೀರ್ವಾದ ಮಾಡುವ ರೀತಿಯಲ್ಲಿ ಕೂತಿರುತ್ತಾನೆ. ಅವನು ನಾಗರಹಾವು ಇದ್ದ ಹಾಗೇ, ಅವನು ಮಾಡುವುದು ಆಶೀರ್ವಾದವಲ್ಲ. ಇದನ್ನೆಲ್ಲಾ ಜನರು ಅರಿತುಕೊಳ್ಳಬೇಕು"ಎಂದು ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದ್ದಾರೆ.

ವಾಜಪೇಯಿ ಮತ್ತು ಅಡ್ವಾಣಿಗೆ ಕಾಲು ಮುಗಿಯುತ್ತಿದ್ದೆ
"ಎಲ್ಲಾ ಸ್ವಾಮೀಜಿಗಳ ಪಾದಕ್ಕೆ ಎರಗಬಾರದು, ನಾನು ಅಷ್ಟು ಬೇಗ ಯಾವುದೇ ಸ್ವಾಮೀಜಿಗಳ ಕಾಲು ಹಿಡಿಯಲು ಹೋಗುವುದಿಲ್ಲ, ಮಾತನಾಡಿಸಲೂ ಹೋಗುವುದಿಲ್ಲ. ನಾನು ಕಾಲು ಹಿಡಿಯುವುದು ಸಿದ್ದೇಶ್ವರ ಅಪ್ಪನವರಿಗೆ ಮಾತ್ರ. ರಾಜಕಾರಣದಲ್ಲೂ ಅಟಲ್ ಬಿಹಾರಿ ವಾಜಪೇಯಿ ಮತ್ತು ಅಡ್ವಾಣಿಯವರಿಗೆ ಕಾಲು ಮುಗಿಯುತ್ತಿದ್ದೆ. ಮೋದಿಯವರಂತೂ ಯಾರನ್ನೂ ಕಾಲು ಮುಟ್ಟಿ ನಮಸ್ಕರಿಸಲು ಬಿಡುವುದಿಲ್ಲ"ಎಂದು ಯತ್ನಾಳ್ ಹೇಳಿದ್ದಾರೆ.

ನನ್ನ ರಾಜಕೀಯ ಚೊಕ್ಕವಾಗಿದೆ
"ನನ್ನ ರಾಜಕೀಯ ಚೊಕ್ಕವಾಗಿದೆ, ಯಾರು ನನ್ನ ಮೇಲೆ ಎಗರಾಡಿದರೂ ನಾನು ಕೇರ್ ಮಾಡಲ್ಲ. ಒಳ್ಳೆಯ ಗುರುಮಠ ಮತ್ತು ಅಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲು ನನ್ನ ಕೈಯಲ್ಲಾದ ಸಹಾಯವನ್ನು ಮಾಡುತ್ತೇನೆ. ಮೀಸಲಾತಿ ಜಾರಿಯಾದ ಮೇಲೆ ನಮ್ಮ ಹುಡುಗರು ಬೆಂಗಳೂರಿಗೆ ಹೋದಾಗ, ಅಲ್ಲೊಂದು ಹಾಸ್ಟೆಲ್ ಕಟ್ಟುವ ಉದ್ದೇಶವಿದೆ. ಒಂದು ಸಣ್ಣ ಗುರುಮಠ ಕೂಡಾ ಕಟ್ಟುತ್ತೇವೆ, ಅದು ಆಶ್ರಮದ ರೀತಿಯಲ್ಲಿ ಇರುತ್ತದೆ, ಐಷಾರಾಮಿ ಬೆಡ್ ರೂಂ ಅಲ್ಲಿ ಇರುವುದಿಲ್ಲ"ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.












Click it and Unblock the Notifications