Mallikarjun Kharge: ಮಲ್ಲಿಕಾರ್ಜುನ ಖರ್ಗೆ ಕೋಟೆ ಭೇದಿಸೋಕೆ ಬಿಜೆಪಿ ಮಾಸ್ಟರ್ ಪ್ಲ್ಯಾನ್ ಏನು?
ಬೆಂಗಳೂರು, ಫೆಬ್ರವರಿ.28: ಲೋಕಸಭಾ ಸಮರಕ್ಕೆ ದೇಶವೇ ಸಜ್ಜಾಗುತ್ತಿದೆ. ಮುಂದಿನ ತಿಂಗಳು ಚುನಾವಣಾ ದಿನಾಂಕ ಘೊಷನೆಯಾಗುವ ಸಾಧ್ಯತೆಯಿದೆ. ಇದರ ಮಧ್ಯೆಯೇ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ನೇತೃತ್ವದ ಎನ್‌ಡಿಎ ಸಿದ್ಧತೆ ನಡೆಸಿದೆ. ಕಾಂಗ್ರೆಸ್ ನೇತೃತ್ವ 'ಇಂಡಿಯಾ' ಒಕ್ಕೂಟ ಕೂಡ ಅಧಿಕಾರಕ್ಕೆ ಏರಲು ಪ್ರಯತ್ನ ಪಡುತ್ತಿದೆ.
ಇತ್ತ, ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿರುವ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಸೇಡು ತೀರಿಸಿಕೊಳ್ಳಲು ಕಾತುರದಿಂದ ಕಾಯುತ್ತಿದೆ. ಜೊತೆಗೆ ಗೆಲ್ಲಲು ಯಾವ ಯಾವ ಮಾಸ್ಟರ್ ಪ್ಲ್ಯಾನ್‌ಗಳನ್ನು ಮಾಡಬೇಕಿದೆಯೊ ಅದೆಲ್ಲವನ್ನು ಮಾಡುತ್ತಿದೆ. ಅದರಲ್ಲಿಯೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಲಬುರಗಿ ಕ್ಷೇತ್ರದಲ್ಲಿ ಸೋಲಿಸಲು ಬಿಜೆಪಿ ಸಿದ್ಧತೆ ನಡೆಸಿದೆ.

ಖರ್ಗೆ ಕಟ್ಟಿಹಾಕಲು ಬಿಜೆಪಿ ಮಾಸ್ಟರ್ ಪ್ಲ್ಯಾನ್!
ರಾಜ್ಯದಲ್ಲಿ 28 ಕ್ಕೆ 28 ಕ್ಷೇತ್ರಗಳನ್ನು ತಮ್ಮದಾಗಿಸಿಕೊಳ್ಳುವ ಆತುರದಲ್ಲಿರುವ ಬಿಜೆಪಿ ಮೊದಲು ತಮ್ಮ ಕಣ್ಣು ಇಟ್ಟಿರುವುದು ಕಲಬುರಗಿ ಲೋಕಸಭಾ ಕ್ಷೇತ್ರದ ಮೇಲೆ. ಹೌದು... ಕೇಸರಿ ಪಾಳಯದ ಕಣ್ಣು ಮಲ್ಲಿಕಾರ್ಜುನ್ ಖರ್ಗೆ ಅವರ ಭದ್ರಕೋಟೆ ಮೇಲೆ ಬಿದ್ದಿದೆ. ಇಲ್ಲಿಂದಲೇ ಕಾಂಗ್ರೆಸ್ ಬುಡ ಅಲುಗಾಡಿಸಲು ಸಿದ್ಧತೆ ನಡೆಸಿದ್ದಾರೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿ ಸೇರಿರುವ ಬೆನ್ನಲ್ಲೇ ಮತ್ತೆ ಕಮಲ ಬಿಟ್ಟು ಕೈ ಹಿಡಿದಿರುವ ಕಾಂಗ್ರೆಸ್ ನಾಯಕರ ಕೈಯಲ್ಲಿ ಮತ್ತೆ ಕೇಸರಿ ಬಾವುಟ ಹಿಡಿಸಲು ಪ್ರಯತ್ನ ಪಡುತ್ತಿದ್ದಾರೆ. ಕಲಬುರಗಿಯ ಮತ್ತೊಬ್ಬ ಕಾಂಗ್ರೆಸ್ ಮುಖಂಡರಾದ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಅವರ ಮೇಲೆ ಬಿಜೆಪಿ ಕಣ್ಣು ಹಾಕಿದೆ. ಅವರು ಕೂಡ ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರಿದ್ದವರು.

ಕಲಬುರಗಿ ಭಾಗದ ಪ್ರಬಲ ಕೋಲಿ ಸಮಾಜದ ಮುಖಂಡರಾಗಿರುವ ಬಾಬುರಾವ್ ಚಿಂಚನಸೂರ ಅವರು ವಿಧಾನಸಭಾ ಚುನಾವಣೆಯಲ್ಲಿ ಗುರುಮಿಠಕಲ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಕಲಬುರಗಿ ಲೋಕಸಭಾ ಕ್ಷೇತ್ರದ ಉಸ್ತುವಾರಿ ತೆಗೆದುಕೊಂಡಿರುವ ಸುರಪುರ ಮಾಜಿ ಶಾಸಕ ರಾಜುಗೌಡ ಕ್ಷೇತ್ರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಕಳೆದ ಬಾರಿ ತಮ್ಮ ಸ್ಥಾನ ಕಳೆದುಕೊಂಡಿರುವ ಖರ್ಗೆ ಅವರು ಮತ್ತೆ ಕ್ಷೇತ್ರದಲ್ಲಿ ಗೆಲುವು ಕಾಣಬಾರದು ಎಂದು ಪಣ ತೊಟ್ಟಿರುವ ಬಿಜೆಪಿ ಪ್ರಮುಖ ನಾಯಕರನ್ನು ತನ್ನತ್ತ ಸೆಳೆಯುತ್ತಿದೆ. ಬಿಜೆಪಿಯ ಪ್ರಮುಖ ನಾಯಕರು ಕಲಬುರಗಿಯ ರಾಜಕೀಯ ಮುಖಂಡರನ್ನು ಭೇಟಿಯಾಗಿ ಒಳಗೊಳಗೆ ರಣತಂತ್ರ ಹೂಡುತ್ತಿದ್ದಾರೆ. ಈ ಎಲ್ಲಾ ಮಾಸ್ಟರ್ ಪ್ಲ್ಯಾನ್ ದಾಟಿ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಕ್ಷೇತ್ರವನ್ನು ಹೇಗೆ ಉಳಿಸಿಕೊಳ್ಳುತ್ತಾರೋ ಕಾದು ನೋಡಬೇಕಿದೆ.












Click it and Unblock the Notifications