PUC ಪರೀಕ್ಷೆ ಬರೆದಿದ್ದ 'ಕೈ' ಕಾರ್ಯಕರ್ತೆ ಪೊಲೀಸ್ ಕಸ್ಟಡಿಗೆ: ಕೋರ್ಟ್ ಆದೇಶ
ಕಲಬುರಗಿ, ಮಾರ್ಚ್ 11: ರಾಜ್ಯಾದ್ಯಂತ ದ್ವಿತಿಯ ಪಿಯುಸಿ ಪರೀಕ್ಷೆ ನಡೆಯುತ್ತಿವೆ. ಇತ್ತೀಚೆಗೆ ಜಿಲ್ಲೆಯ ಕಾಲೇಜೊಂದರಲ್ಲಿ ವಿದ್ಯಾರ್ಥಿನಿ ಬದಲಾಗಿ ಪಿಯುಸಿ ರಾಜ್ಯ ಶಾಸ್ತ್ರ ಪರೀಕ್ಷೆ ಬರೆದಿದ್ದ ಕಾಂಗ್ರೆಸ್ ಕಾರ್ಯಕರ್ತೆ ಪ್ರಕರಣದ ವಿಚಾರಣೆ ನಡೆದಿದೆ. ಇಲ್ಲಿನ ನಾಲ್ಕನೇ ಜಿಎಂಎಫ್‌ಸಿ ನ್ಯಾಯಾಲಯವು ಮಂಗಳವಾರ ಕೈ ಕಾರ್ಯಕರ್ತೆ ಸಂಪೂರ್ಣ ಪಾಟೀಲ್ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ಇಲ್ಲಿನ ಮಿಲಿಂದ್ ಕಾಲೇಜಿನಲ್ಲಿ ಈ ಘಟನೆ ಮಾರ್ಚ್ 05ರಂದು ನಡೆದಿತ್ತು. ಅಂದು ರಾಜ್ಯಶಾಸ್ತ್ರ ಪರೀಕ್ಷೆಯನ್ನು ವಿದ್ಯಾರ್ಥಿನಿ ಅರ್ಚನಾ ಬರೆಯಬೇಕಿತ್ತು. ಆದರೆ ಅವರ ಬದಲಾಗಿ ಕಾಂಗ್ರೆಸ್ ಕಾರ್ಯಕರ್ತೆ ಸಂಪೂರ್ಣ ಪಾಟೀಲ್ ಬರೆದಿದ್ದರು. ಈ ಬಗ್ಗೆ ದಲಿತ ಸೇನೆ ಖಚಿತ ಮಾಹಿತಿ ಪಡೆದು ಪ್ರತಿರೋಧ ಒಡ್ಡಿದ್ದರು. ಕೂಡಲೇ ಪ್ರಾಂಶುಪಾಲರು ಸ್ಥಳೀಯ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು.

ಪೊಲೀಸರ ಸ್ಥಳಕ್ಕೆ ಬಂದಾಗ ಪರೀಕ್ಷಾ ಅಕ್ರಮ ಬಯಲಿಗೆ ಬಂದಿದೆ. ಕೂಡಲೇ ಸಂಪೂರ್ಣ ಪಾಟೀಲ್ ಅವರನ್ನು ಬಂಧಿಸಿದ್ದಾರೆ. ಈ ಪ್ರಕರಣ ಸಂಬಂಧ ಬಂಧಿತಳನ್ನು ನಾಲ್ಕನೇ ಜಿಎಂಎಫ್‌ಸಿ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರುಪಡಿಸಲಾಗಿತ್ತು.
ಅಕ್ರಮದ ಹಿಂದೆ ಯಾರಿದ್ದಾರೆ. ಒಬ್ಬ ಪ್ರಮುಖ ಪಕ್ಷದ ಕಾರ್ಯಕರ್ತೆಯಾಗಿ ಈ ಕೆಲಸಕ್ಕೆ ಕೈ ಹಾಕಿದ್ದರ ಉದ್ದೇಶ ತಿಳಿಯಬೇಕು. ಹೆಚ್ಚಿನ ವಿಚಾರಣೆ ನಡೆಸಬೇಕು ಎಂದು ಕೋರಿದ್ದಾರೆ. ವಾದ ವಿವಾದ ಆಲಿಸಿದ ನ್ಯಾಯಪೀಠ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.
ಕಲಬುರಗಿ: ಪ್ರಶ್ನೆ ಪತ್ರಿಕೆ ಲೀಕ್
ಇದೇ ಕಲಬುರಗಿ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪೂರ್ವ ಭಾವಿ ಪರೀಕ್ಷೆ ವೇಳೆ ಸಮಾಜ ವಿಜ್ಞಾನ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಶಿಕ್ಷಣ ಇಲಾಖೆಯು ಈ ಬಗ್ಗೆ ಮಾಹಿತಿ ಪಡೆದಿತ್ತು. ಪ್ರಕರಣ ಗಂಭೀರವಾಗಿ ಪರಿಗಣಿಸಿದ ಸರ್ಕಾರ ತನಿಖೆಗೆ ಆದೇಶಿಸಿತು. ಇದಕ್ಕು ಮೊದಲು ಪರೀಕ್ಷಾ ಅಕ್ರಮ, ದೃಷ್ಕೃತ್ಯ ಕುರಿತು ಸಾಕಷ್ಟು ಪ್ರಕರಣ ಬೆಳಕಿಗೆ ಬಂದಿದ್ದವು. ಆದರೆ ಶಿಕ್ಷಣ ಇಲಾಕೆ ಆರೋಪಗಳನ್ನು ತಳ್ಳಿ ಹಾಕಿತ್ತು.
ಆದರೆ ಸಮಾಜ ವಿಜ್ಞಾನ ಪರೀಕ್ಷೆ ಪ್ರಶ್ನೆ ಪತ್ರಿಕೆಯು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಕರಣ ಗಂಭೀರವಾಗಿ ಪರಿಗಣಿಸಿ ತನಿಖೆಗೆ ಸೂಚನೆ ನೀಡಲಾಗಿದೆ.












Click it and Unblock the Notifications