Fake Marks Card: 28 ವಿವಿಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿ ಮಾರಾಟ ಜಾಲ! ಪ್ರಮುಖ ಆರೋಪಿ ಬಂಧನ
ಕಲಬುರಗಿ, ಫೆಬ್ರವರಿ 28: ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿನ ವಿಶ್ವ ವಿದ್ಯಾಲಯಗ ಓರಿಜಿನಲ್ ಅಂಕಪಟ್ಟಿಗಳಂತೆ ನಕಲಿ ಅಂಕಪಟ್ಟಿ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಆನ್‌ಲೈನ್ ಮೂಲಕ ನಿರುದ್ಯೋಗಿ ಯುವಕರನ್ನು ಸಂಪರ್ಕಿಸಿ, ಅಂಕಪಟ್ಟಿ ಮಾರಾಟ ಮಾಡಿ ಹಣ ಗಳಿಸುತ್ತಿದ್ದ ಆರೋಪಿಯೊಬ್ಬನನ್ನು ದೆಹಲಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ ಸೇರಿದಂತೆ ಭಾರತದ 28 ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಅಂಕಪಟ್ಟಿಗಳನ್ನು ನಕಲಿ ಮಾಡುತ್ತಿದ್ದ ಜಾಲವನ್ನು ಕಲಬುರಗಿ ಪೊಲೀಸರು ಪತ್ತೆ ಮಾಡಿದ್ದಾರೆ. ಸೂಕ್ತ ಮಾಹಿತಿ ಮೆರೆಗೆ ದೆಹಲಿಯಲ್ಲಿ ರಾಮ್ ಪಾರ್ಕ್ ಅಪಾರ್ಟ್‌ಮೆಂಟ್‌ನಲ್ಲಿ ರಾಜೀವ್ ಸಿಂಗ್ ಅರೋರಾ ಎಂಬಾತನನ್ನು ಬಂಧಿಸಿದ್ದಾರೆ.

ಕಲಬುರಗಿ ನಗರ ಪೊಲೀಸ್ ಡಾ.ಶರಣಪ್ಪ ಎಸ್.ಡಿ ಅವರು ಮಾಹಿತಿ ನೀಡಿದ್ದಾರೆ. ಈ ಆರೋಪಿ ದೇಶದ 28 ವಿವಿಗಳ ಅಂಕಗಳಟ್ಟಗಳನ್ನು ಬೋಗಸ್ ಮಾಡಿ ಯುವಕರನ್ನು ಸಂಪರ್ಕಿಸಿ ಮಾರಾಟ ಮಾಡುತ್ತಿದ್ದ. ವಿವಿಧ ರಾಜ್ಯಗಳಲ್ಲಿ ಈ ಸಂಪರ್ಕ ಹೊಂದಿದ್ದ. ಸೂಕ್ತ ಮಾಹಿತಿ ಮೇರೆಗೆ ಕಾರ್ಯಾಚರಣೆಗೆ ಇಳಿದು ಆರೋಪಿಯನ್ನು ಬಂಧಿಸಿದ್ದೇವೆ ಎಂದರು.
ಕಾನ್ವೋಕೇಷನ್ ಪ್ರಮಾಣ ಪತ್ರ ನಕಲಿ: ಪೊಲೀಸ್ ವಶಕ್ಕೆ
ನಕಲಿ ಅಂಕಪಟ್ಟಿ ಮಾತ್ರವಲ್ಲದೇ ಕಾನ್ವೋಕೇಷನ್ ಪ್ರಮಾಣ ಪತ್ರ ಸಹ ಈ ಸಿದ್ಧಪಡಿಸುತ್ತಿದ್ದ. ನಂತರ ಆನ್‌ಲೈನ್ ಮೂಲಕ ಯುವಕರನ್ನು ಸೆಳೆದು ಮಾರಾಟ ಮಾಡಿ ಸಾವಿರಾರು ರೂಪಾಯಿ ಸಂಗ್ರಹಿಸುತ್ತಿದ್ದ. ಈತನಿಂದ 522 ನಕಲಿ ಬೋಗಸ್ ಅಂಕಪಟ್ಟಿ, 1622 ಖಾಲಿ ಅಂಕಪಟ್ಟಿ, ಅನೇಕ ವಿಶ್ವವಿದ್ಯಾಲಯಗಳ ಹೆಸರಿನ ಸುಮಾರು 122 ನಕಲಿ ಸೀಲ್‌ಗಳು, ಕೃತ್ಯಕ್ಕೆ ಬಳಸಿದ್ದ 36 ಮೊಬೈಲ್, 2 ಲ್ಯಾಪ್‌ಟಾಪ್ ಹಾಗೂ ಪ್ರಿಂಟರ್ ಮತ್ತು ಎಟಿಎಂ ಕಾರ್ಡ್, 123 ನಕಲಿ ಗುರುತಿನ ಚೀಟಿಗಳನ್ನು ವಶಕ್ಕೆ ಪಡೆಯಲಾಗಿದೆ. ಈತ ವ್ಯವಹಾರ 85 ಬ್ಯಾಂಕ್ ಅಕೌಂಟ್ ಪಾಸ್‌ಬುಕ್ ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಪಿಯು, ಪದವಿ ಕೋರ್ಸ್‌ಗಳ ಅಂಕಪಟ್ಟಿ ನಕಲು
ಬಂಧಿತ ಎಲ್ಲ ವರ್ಗದ ಯುವಕರಿಗೆ ಅನುಕೂಲವಾಗುವಂತೆ, ಹೆಚ್ಚಿನ ಹಣ ಗಳಿಕೆ ಪ್ಲಾನ್ ಮಾಡಿಕೊಂಡಿದ್ದ. ಹೀಗಾಗಿಯೇ ಪದವಿ, ಪಿಯುಸಿ, ಬಿಟೆಕ್, ಡಿಪ್ಲೊಮಾ ಇನ್ ಎಜುಕೇಶನ್, ಡಿಪ್ಲೊಮಾ ಆಫ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ, ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಸೇರಿದಂತೆ ಅನೇಕ ಕೋರ್ಸ್‌ಗಳ ಅಂಕಪಟ್ಟಿ ತಯಾರಿಸುತ್ತಿದ್ದ. ಅವುಗಳನ್ನು ಮಾರಾಟ ಮಾಡಲು ದೊಡ್ಡ ನೆಟ್ ವರ್ಕ್ ಹೊಂದಿರುವುದು ತಿಳಿದು ಬಂದಿದೆ.
ಈತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಈತನ ವಿಚಾರಣೆ ಮಾಡಿದರೆ, ಈ ಜಾಲದಲ್ಲಿ ಮತ್ತೆ ಯಾರೆಲ್ಲ ಇದ್ದಾರೆ ಎಂದು ತಿಳಿಯಲಿದೆ. ಪೊಲೀಸರು ಶೀಘ್ರವೇ ಹೆಚ್ಚಿನ ಮಾಹಿತಿ ನೀಡಲಿದ್ದಾರೆ.












Click it and Unblock the Notifications