ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ತಂತ್ರ; ಕಾಂಗ್ರೆಸ್‌ಗೆ ಹಿನ್ನಡೆ?
ಕಲಬುರಗಿ, ಸೆಪ್ಟೆಂಬರ್ 23; ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಯಾರಿಗೆ ಎಂಬುದು ಇನ್ನೂ ಕುತೂಹಲವಾಗಿಯೇ ಉಳಿದೆ. ಮೇಯರ್ ಮತ್ತು ಉಪ ಮೇಯರ್ ಚುನಾವಣೆಗೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಅತಂತ್ರ ಫಲಿತಾಂಶದಿಂದಾಗಿ ಮೇಯರ್ ಪಟ್ಟ ಯಾರಿಗೆ ಸಿಗಲಿದೆ? ಎಂಬ ಚರ್ಚೆ ನಡೆಯುತ್ತಿದೆ.
ಮಹಾನಗರ ಪಾಲಿಕೆಯ 55 ವಾರ್ಡ್‌ಗಳ ಪೈಕಿ 23ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಒಬ್ಬರು ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಪಕ್ಷೇತರ ಅಭ್ಯರ್ಥಿಯನ್ನು ಬಿಜೆಪಿ ಸೆಳೆದಿದ್ದು, ಮೇಯರ್ ಪಟ್ಟದ ಲೆಕ್ಕಾಚಾರ ಮತ್ತೆ ತಲೆಕೆಳಗಾಗಿದೆ.
ಸೆಪ್ಟೆಂಬರ್ 3ರಂದು ನಡೆದ ಪಾಲಿಕೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ 36ನೇ ವಾರ್ಡ್‍ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಡಾ. ಶಂಭುಲಿಂಗ ಬಳಬಟ್ಟಿ ಹಾಗೂ ಅವರ ಬೆಂಬಲಿಗರು ಗುರುವಾರ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾನ, ಅಶ್ವತ್ಥ ನಾರಾಯಣ, ಶಾಸಕರಾದ ರಾಜ್‍ಕುಮಾರ್ ಪಾಟೀಲ ತೇಲ್ಕೂರ, ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮೂಡ, ಕಲಬುರ್ಗಿ ನಗರ ಜಿಲ್ಲಾಧ್ಯಕ್ಷರಾದ ಸಿದ್ದಾಜಿ ಎಸ್. ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.
ಅತಂತ್ರ ಫಲಿತಾಂಶ; ಕಲಬುರಗಿ ಮಹಾನಗರ ಪಾಲಿಕೆಯ 55 ವಾರ್ಡ್‌ಗಳ ಪೈಕಿ ಕಾಂಗ್ರೆಸ್ 27, ಬಿಜೆಪಿ 23, ಜೆಡಿಎಸ್ 4, ಒಬ್ಬರು ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಈಗ ಪಕ್ಷೇತರ ಅಭ್ಯರ್ಥಿ ಬಿಜೆಪಿ ಸೇರುವ ಮೂಲಕ ಮತ್ತೊಂದು ಸದಸ್ಯ ಬಲ ಹೆಚ್ಚಾಗಿದೆ.
ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಕಲಬುರಗಿ ಮೇಯರ್ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿವೆ. ಆದರೆ ಯಾರಿಗೂ ಸಹ ಮೇಯರ್ ಗದ್ದುಗೆ ಏರಲು ಮ್ಯಾಜಿನ್ ನಂಬರ್ ಇಲ್ಲ. 4 ಸ್ಥಾನದಲ್ಲಿ ಗೆದ್ದಿರುವ ಜೆಡಿಎಸ್ ಬೆಂಬಲ ಅತ್ಯಗತ್ಯವಾಗಿದೆ.
ಜೆಡಿಎಸ್ ಪಕ್ಷ ಬೆಂಬಲ ನೀಡುವುದಕ್ಕೆ ಮೇಯರ್ ಪಟ್ಟ ತನಗೆ ಕೊಡಬೇಕು ಎಂದು ಬೇಡಿಕೆ ಇಟ್ಟಿದೆ. ವಿಧಾನಸಭೆ ಅಧಿವೇಶನ ಆರಂಭವಾದ ಕಾರಣ ಮೇಯರ್, ಉಪ ಮೇಯರ್ ಆಯ್ಕೆಗೆ ಚುನಾವಣೆ ನಡೆಸಲು ಅಧಿಸೂಚನೆ ಪ್ರಕಟವಾಗಿಲ್ಲ. ಜೆಡಿಎಸ್ ಷರತ್ತಿಗೆ ಯಾವ ಪಕ್ಷ ಒಪ್ಪಿಗೆ ನೀಡಲಿದೆ? ಎಂದು ಕಾದು ನೋಡಬೇಕಿದೆ.
ಕಲಬುರಗಿ ಪಾಲಿಕೆ ಚುನಾವಣೆಯಲ್ಲಿ ಗೆದ್ದ ನಾಲ್ವರು ಜೆಡಿಎಸ್ ಸದಸ್ಯರು ಬೆಂಗಳೂರಿಗೆ ಆಗಮಿಸಿ ಪಕ್ಷದ ವರಿಷ್ಠ ಎಚ್. ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಭೇಟಿ ಮಾಡಿದ್ದರು. ಯಾರಿಗೆ ಬೆಂಬಲ ನೀಡಬೇಕು? ಎಂಬ ತೀರ್ಮಾನ ಕೈಗೊಳ್ಳುವ ಜವಾಬ್ದಾರಿಯನ್ನು ದೇವೇಗೌಡರು ಕುಮಾರಸ್ವಾಮಿಗೆ ನೀಡಿದ್ದಾರೆ.
ಮೀಸಲಾತಿ ಪ್ರಕಟ; ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಮೀಸಲಾತಿ ಈಗಾಗಲೇ ಪ್ರಕಟವಾಗಿದೆ. ಮೇಯರ್ ಸ್ಥಾನ ಸಾಮಾನ್ಯ ಮಹಿಳೆ, ಉಪ ಮೇಯರ್ ಸ್ಥಾನ ಒಬಿಸಿಗೆ ನಿಗದಿಯಾಗಿದೆ. ಈ ಅರ್ಹತೆ ಇರುವ ಅಭ್ಯರ್ಥಿಗಳು ಕಾಂಗ್ರೆಸ್, ಬಿಜೆಪಿ ಎರಡು ಪಕ್ಷದಲ್ಲಿದ್ದಾರೆ.
ಬಿಜೆಪಿ ಪಾಲಿಕೆಯಲ್ಲಿ 23 ಸ್ಥಾನಗಳಲ್ಲಿ ಜಯಗಳಿಸಿದೆ. ಪಕ್ಷೇತರ ಅಭ್ಯರ್ಥಿ ಬೆಂಬಲ ಸಹ ಬಿಜೆಪಿಗೆ ಸಿಗಲಿದೆ. ಜೆಡಿಎಸ್‌ನ 4 ಸದಸ್ಯರ ಬೆಂಬಲ ಪಡೆದರೆ ಒಂದು ಸಂಸದ, ಮೂವರು ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ಬೆಂಬಲದೊಂದಿಗೆ ಪಕ್ಷ ಮೇಯರ್ ಹುದ್ದೆ ಪಡೆಯಬಹುದು.
ಜೆಡಿಎಸ್ ಪಕ್ಷದ ಷರತ್ತಿಗೆ ಕಾಂಗ್ರೆಸ್ ಪಕ್ಷ ಒಪ್ಪಿಗೆ ಕೊಟ್ಟರೆ ಕಾಂಗ್ರೆಸ್ ಸಂಖ್ಯಾಬಲ 31ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಸಂಪೂರ್ಣ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ.












Click it and Unblock the Notifications