Kalaburagi: ಕಲಬುರಗಿ ಜಿಲ್ಲೆಗೆ ಭರ್ಜರಿ ಗುಡ್‌ನ್ಯೂಸ್ ಕೊಟ್ಟ ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ ಜಿಲ್ಲೆಗೆ ಬಂಪರ್ ಗುಡ್‌ನ್ಯೂಸ್‌ವೊಂದು ಸಿಕ್ಕಿದೆ. ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸ್ವಚ್ಛ ಕಲಬುರಗಿ, ಶಾಶ್ವತ ಸಮೃದ್ಧಿ ಯೋಜನೆಯಡಿಯಲ್ಲಿ ಬರೋಬ್ಬರಿ 296 ಕೋಟಿ ರೂಪಾಯಿ ವೆಚ್ಚದ ನೀಲನಕ್ಷೆ ತಯಾರಿಸಲಾಗಿದ್ದು, ಜಿಲ್ಲಾಡಳಿತ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ವಿಷಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಪ್ರಮುಖವಾಗಿ ನಗರದಲ್ಲಿ ರಸ್ತೆಗಳು ಹಾಳಾಗಿರುವ ಕುರಿತು ಸಾರ್ವಜನಿಕರ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದವು. ಜೊತೆಗೆ ಕಲಬುರಗಿ ನಗರದ ಅಭಿವೃದ್ದಿಗೆ ವಿವಿಧ ವಲಯದ ಪ್ರಮುಖ ಬೇಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮೂರು ವರ್ಷಗಳ ಅವಧಿಗಾಗಿ "ಸ್ವಚ್ಛ ಕಲಬುರಗಿ, ಶಾಶ್ವತ ಸಮೃದ್ಧಿ" ಯೋಜನೆಯ ನೀಲನಕ್ಷೆ ತಯಾರಿಸಲಾಗಿದ್ದು, ಗುರುತಿಸಲ್ಪಟ್ಟ ಐದು ವಲಯಗಳ ಅಭಿವೃದ್ಧಿಗೆ 296 ಕೋಟಿ ರೂಪಾಯಿ ಅನುದಾನ ವಿನಿಯೋಗಿಸಲಾಗುತ್ತಿದೆ. ಈ ಯೋಜನೆಗಳಿಗಾಗಿ ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ.

ರಸ್ತೆ ಅಭಿವೃದ್ಧಿಪಡಿಸುವ ಉದ್ದೇಶದಿಂದ ಈಗಾಗಲೇ ರಸ್ತೆಗಳ ಅಡಿಟ್ ಮಾಡಲಾಗಿದೆ. ಸ್ವಚ್ಚ ಕಲಬುರಗಿ ನಿರ್ಮಾಣ ಮಾಡುವ ಧೈಯೋದ್ದೇಶದಿಂದ ಉದ್ಯಾನಗಳ ಅಭಿವೃದ್ದಿ, ನೀರಿನ ಮೂಲಗಳ ಸಂರಕ್ಷಣೆ, ಉದ್ಯಾನವನ ಹಾಗೂ ವೃತ್ತಗಳ ಅಧುನೀಕರಣ ಹಾಗೂ ಅಭಿವೃದ್ದಿಗೆ ಒತ್ತು ನೀಡಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಹಿತಿ ನೀಡಿದ್ದಾರೆ.
1. ನಗರದ 63 ರಸ್ತೆಗಳ ಅಭಿವೃದ್ಧಿಗಾಗಿ 116 ಕೋಟಿ ರೂಪಾಯಿ.
2. ನಗರದ ವ್ಯಾಪ್ತಿಯ 33 ಉದ್ಯಾನವನಗಳ ಅಭಿವೃದ್ಧಿಗೆ ಒಟ್ಟು 22.4 ಕೋಟಿ ರೂಪಾಯಿ.
3. 25 ಸರ್ಕಲ್‌ಗಳ ಅಭಿವೃದ್ಧಿಗಾಗಿ ಒಟ್ಟು 13.4 ಕೋಟಿ ರೂಪಾಯಿ
4. 4 ಕೆರೆಗಳ ಅಭಿವೃದ್ಧಿ ಹಾಗೂ ಜಲಮೂಲಗಳ ಸಂರಕ್ಷಣೆಗಾಗಿ 39.3 ಕೋಟಿ ರೂಪಾಯಿ
5. ಘನತ್ಯಾಜ್ಯ ಸಂಸ್ಕರಣೆ ಹಾಗೂ ವಿಲೇವಾರಿಗಾಗಿ 55.7 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಮಾಡಲಾಗುವುದು ಎಂದಿದ್ದಾರೆ.
ನಗರದ ಸೌಂದರ್ಯಿಕರಣ, ಕೆರೆಗಳ ಅಭಿವೃದ್ಧಿ, ಕೋಟೆಗಳ ರಕ್ಷಣೆ, ಜಲ ಸಂಪನ್ಮೂಲಗಳ ಸಂರಕ್ಷಣೆ, ವೈಜ್ಞಾನಿಕ ಘನ ತ್ಯಾಜ್ಯ ನಿರ್ವಹಣೆ ಹಾಗೂ ವಿಲೇವಾರಿ, ಪ್ರಮುಖ ಸರ್ಕಲ್ ಗಳ ಅಭಿವೃಧ್ದಿ, ಪಾದಚಾರಿ ರಸ್ತೆಗಳ ನಿರ್ಮಾಣ, ರಸ್ತೆ ನಿರ್ಮಾಣ ಹಾಗೂ ತಗ್ಗುಗುಂಡಿಗಳನ್ನು ಮುಚ್ಚುವುದು ಸೇರಿದಂತೆ ಹಲವು ಪ್ರಮುಖ ಅಭಿವೃದ್ಧಿ ಕೆಲಸ ಕೈಗೆತ್ತಿಕೊಳ್ಳಲಾಗುವುದು. ಇದಕ್ಕೆ ನಿಗದಿಪಡಿಸಿದ ಅನುದಾನವನ್ನು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ, ನಗರಸಭೆ, ಕೆಕೆಆರ್‌ಡಿಬಿ, ನಗರಾಭಿವೃದ್ದಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸರ್ಕಾರದ ಯೋಜನೆಗಳು ವಿಸ್ತಾರವಾಗಿ ಜನರಿಗೆ ತಲುಪಬೇಕು ಎಂದಾದರೆ, ಸಾರ್ವಜನಿಕರ ಭಾಗಿತ್ವ ಪ್ರಮುಖವಾಗುತ್ತದೆ. ಹಾಗಾಗಿ, ಸಾರ್ವಜನಿಕರು ಈ ಯೋಜನೆಗಾಗಿ ಕೈ ಜೋಡಿಸಬೇಕು. ಕಲಬುರಗಿ ನಗರವನ್ನು ಸ್ವಚ್ಛ ಸುಂದರ ನಗರವನ್ನಾಗಿ ಮಾಡುವುದು ನಮ್ಮ ಸಂಕಲ್ಪವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಹಿತಿ ನೀಡಿದ್ದಾರೆ.












Click it and Unblock the Notifications