ಅಂತರ್ಜಾತಿ ವಿವಾಹ : ಯುವಕನ ಪೋಷಕರ ಮೇಲೆ ಮಾರಣಾಂತಿಕ ಹಲ್ಲೆ, ಆಸ್ಪತ್ರೆಗೆ ದಾಖಲು
ಕಲಬುರಗಿ, ಜೂ. 3: ಅನ್ಯಕೋಮಿನ ಯುವತಿಯನ್ನ ಪ್ರೀತಿ ಮಾಡುತ್ತಿದ್ದ ಯುವಕನ ಬರ್ಬರ ಹತ್ಯೆ ವಿಷಯ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಅನ್ಯಜಾತಿ ಎಂಬ ಕಾರಣಕ್ಕೆ ಯುವಕನ ಮನೆ ಹೊಕ್ಕ ಯುವತಿ ಮನೆಯವರು ಸಿಕ್ಕ ಸಿಕ್ಕವರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಸಮೀಪದ ಚಾಮನೂರು ಗ್ರಾಮದಲ್ಲಿ ನಡೆದಿದೆ.
ಚಾಮನೂರ ಗ್ರಾಮದ ಸೂರ್ಯಕಾಂತ ಮತ್ತು ಸಂಗೀತಾ ಅನ್ಯಜಾತಿಯವರಾಗಿದ್ದು, ಪರಸ್ಪರ ಪ್ರೀತಿಸಿ ಕಳೆದೊಂದು ವರ್ಷದ ಹಿಂದೆ ವಿವಾಹವಾಗಿ ಬೆಂಗಳೂರಿನಲ್ಲಿ ವಾಸವಾಗಿದ್ದರು. ಇದೀಗ ಮಗು ಜನಿಸಿದ್ದು, ತೊಟ್ಟಿಲು ಕಾರ್ಯಕ್ರಮಕ್ಕೆಂದು ದಂಪತಿ ಚಾಮನೂರ ಗ್ರಾಮಕ್ಕೆ ಆಗಮಿಸಿದ್ದರು. ಮುಂಚೆಯೇ ನಿರ್ಧರಿಸಿದಂತೆ ನಿನ್ನೆ ತೊಟ್ಟಿಲು ಕಾರ್ಯಕ್ರಮ ಮುಗಿಸಿದ ದಂಪತಿ ಇಂದು ಮರಳಿ ಬೆಂಗಳೂರಿಗ ತೆರಳಲು ಸಿದ್ಧರಾಗಿದ್ದರು.
ಆದರೆ ಇಬ್ಬರು ಗ್ರಾಮಕ್ಕೆ ಆಗಮಿಸಿದ ಬಗ್ಗೆ ಮಾಹಿತಿ ತಿಳಿದ ಯುವತಿಯ ತಂದೆ ದ್ಯಾವಪ್ಪ ಮಾಲಗತ್ತಿ ಹಾಗೂ ಸಹೋದರರು ಕೊಡಲಿ, ಕಟ್ಟಿಗೆ ಸೇರಿದಂತೆ ಮಾರಕಾಸ್ತ್ರಗಳೊಂದಿಗೆ ಯುವಕನ ಮನೆಗೆ ಆಗಮಿಸಿ ಕೈಗೆ ಸಿಕ್ಕವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಗ್ರಾಮದಲ್ಲಿ ಆತಂಕದ ಛಾಯೆ
ಘಟನೆಯಲ್ಲಿ ಯುವಕ, ಯುವತಿ, ಯುವಕನ ತಂದೆ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ತೊಟ್ಟಿಲು ಕಾರ್ಯಕ್ರಮದ ಸಂಭ್ರಮದಲ್ಲಿದ್ದ ಮನೆಯಲ್ಲಿ ರಕ್ತ ಹರಿದಾಡಿದ್ದು, ಗ್ರಾಮದಲ್ಲಿ ಆತಂಕದ ಛಾಯೆ ಆವರಿಸಿದೆ.
ನಿನ್ನೆಯಷ್ಟೇ ಯುವಕ ಮತ್ತು ಕುಟುಂಬಸ್ಥೃಉ ಠಾಣೆಗೆ ತೆರಳಿ ಜೀವ ಬೆದರಿಕೆ ಇದೆ ಎಂದು ದೂರು ದಾಖಲಿಸಲು ತೆರಳಿದ್ದರಂತೆ, ಪೊಲೀಸರು ದೂರು ದಾಖಲಿಸಿಕೊಂಡಿಲ್ಲದ ಕಾರಣ ಇಂದು ಈ ದುರ್ಘಟನೆ ನಡೆದಿದೆ ಎಂದು ಯುವಕನ ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಸ್ಥಳಕ್ಕೆ ಭೇಟಿ ನೀಡಿದ ವಾಡಿ ಠಾಣೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)











Click it and Unblock the Notifications