Kalaburagi: ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ಎಡವಟ್ಟು: ಹೊಟ್ಟೆಯಲ್ಲಿ ಬಟ್ಟೆ-ಹತ್ತಿ ಬಿಟ್ಟು ಸಿಜೇರಿಯನ್
ಕಲಬುರಗಿ ಫೆಬ್ರವರಿ 23: ಬಾಣಂತಿಯರ ಸಾವು ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗಿ ನಡೆಯುತ್ತಿರುವ ಈ ಸಮಯದಲ್ಲಿ ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರಿಂದ ಎಡವಟ್ಟೊಂದು ನಡೆದು ಹೋಗಿದೆ. ಹೆರಿಗೆ ಬಳಿಕ ಹೊಟ್ಟೆಯಲ್ಲಿ ಬಟ್ಟೆ ಹಾಗೂ ಹತ್ತಿಯನ್ನು ಬಿಟ್ಟ ಭಯಾನಕ ಘಟನೆ ನಡೆದಿದೆ. ಬಾಣಂತಿಗೆ ಹೊಟ್ಟೆ ನೋವು ಕಾಣಿಸಿಕೊಂಡಾಗ ವೈದ್ಯರ ಎಡವಟ್ಟು ಬೆಳಕಿಗೆ ಬಂದಿದೆ. ಇದರಿಂದಾಗಿ ಕುಟುಂಬಸ್ಥರು ವೈದ್ಯರ ವಿರುದ್ಧ ಆಕ್ರೋಶಗೊಂಡಿದ್ದಾರೆ.
ಹೌದು... ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಈ ದುರ್ಘಟನೆ ನಡೆದಿದೆ. ಭಾಗ್ಯಶ್ರೀ ಅವರಿಗೆ ಫೆಬ್ರವರಿ 5ರಂದು ಈ ಆಸ್ಪತ್ರೆಯಲ್ಲಿ ಹೆರಿಗೆ ಮಾಡಲಾಗಿತ್ತು. ಹೆರಿಗೆ ಬಳಿಕ ಫೆಬ್ರವರಿ 6ರಂದು ಭಾಗಶ್ರೀ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಆದರೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದ ಬಳಿಕ ಭಾಗ್ಯಶ್ರೀ ಅವರಿಗೆ ನಿರಂತರವಾಗಿ ಹೊಟ್ಟೆ ನೋವು ಹಾಣಿಸಿಕೊಂಡಿದೆ.

ಹೊಟ್ಟೆಯಲ್ಲಿ ಬಟ್ಟೆ-ಹತ್ತಿ ಬಿಟ್ಟು ಸಿಜೇರಿಯನ್
ಇದರಿಂದಾಗಿ ಪುನ: ಅವರನ್ನು ಒಂದು ವಾರದ ನಂತರ ಅಫಜಲ್‌ಪುರ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ನೋವು ಕಾಣಿಸಿಕೊಂಡ ಭಾಗದಲ್ಲಿ ಸ್ಕ್ಯಾನಿಂಗ್ ಮಾಡಿ ನೋಡಿದಾಗ ಅಲ್ಲಿ ಯಾವುದೋ ವಸ್ತು ಇರುವುದು ವೈದ್ಯರಿಗೆ ಗೊತ್ತಾಗಿದೆ. ತಕ್ಷಣ ಎಚ್ಚೆತ್ತುಕೊಂಡ ವೈದ್ಯರು ಭಾಗ್ಯಶ್ರೀ ಅವರನ್ನು ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಸೂಚಿಸಿದ್ದಾರೆ.
ಶಸ್ತ್ರಚಿಕಿತ್ಸೆಯ ಬಳಿಕ ಬಟ್ಟೆ-ಹತ್ತಿ ಉಂಡೆ ಬಿಟ್ಟು ಸಿಜೇರಿಯನ್ ಮಾಡಿರುವುದು ಗೊತ್ತಾಗಿದೆ. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಈ ಬಗ್ಗೆ ಪ್ರಶ್ನೆ ಮಾಡಿದಾಗ ವೈದ್ಯರ ಅಸಂಬದ್ಧ ಉತ್ತರ ಕುಟುಂಬಸ್ಥರ ಕೋಪವನ್ನು ನೆತ್ತಿಗೇರಿಸಿದೆ. ರಿಮ್ಸ್ ವೈದ್ಯರು ಹೇಳಿದ ಮಾತಿಗೆ ಕುಟುಂಬಸ್ಥರು ಮತ್ತಷ್ಟು ಕೋಪಗೊಂಡಿದ್ದಾರೆ.
ಜಿಮ್ಸ್ ಆಸ್ಪತ್ರೆ ವಿರುದ್ಧ ಸಂಬಂಧಿಕರ ಆಕ್ರೋಶ
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಭಾಗ್ಯಾಶ್ರೀ ಸಂಬಂಧಿ ಭೀಮಾಶಂಕರ್ ಹೊನ್ನಕೇರಿ, 'ಫೆಬ್ರವರಿ 5ರಂದು ಜಿಮ್ಸ್ ಆಸ್ಪತ್ರೆಯಲ್ಲಿ ಭಾಗ್ಯಶ್ರೀ ಅವರಿಗೆ ಹೆರಿಗೆ ಆಗಿದೆ. ಸಿಜೇರಿನ್ ಆದ ಮರುದಿನ ಅವರನ್ನು ಡಿಸ್ಚಾರ್ಜ್ ಮಾಡಿದರು. ಆದರೆ ಭಾಗ್ಯಶ್ರೀ ಮನೆಗೆ ಬಂದ ಬಳಿಕ ಒಂದು ವಾರ ನಿರಂತರವಾಗಿ ವಿಪತೀತ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಇದರಿಂದಾಗಿ ಅಫಜಲ್‌ಪುರ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಗುಪ್ತಾಂಗದಲ್ಲಿ ಕಾಟನ್ ಹಾಗೂ ಬಟ್ಟೆ ಬಿಟ್ಟಿರುವುದು ಗೊತ್ತಾಗಿದೆ' ಎಂದರು.
'ಬಳಿಕ ನಾವು ಜಿಮ್ಸ್ ಆಸ್ಪತ್ರೆಗೆ ಹೋಗಿ ಪ್ರಶ್ನೆ ಮಾಡಿದೆವು. ಆದರೆ ಅಲ್ಲಿನ ವೈದ್ಯರು ನಮಗೆ ಈ ವಿಚಾರ ಗೊತ್ತಿಲ್ಲ. ನಾವು ಸಿಜೇರಿಯನ್ ಮಾಡಿಲ್ಲ, ಅವರು ಮಾಡಿದ್ದಾರೆ ಇವರು ಮಾಡಿದ್ದಾರೆ ಎಂದು ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ತಪ್ಪು ಮಾಡಿದವರನ್ನು ಹಾಗೇ ಬಿಟ್ಟಿದ್ದಾರೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಈಗಾಗಗಲೇ ಬಾಣಂತಿಯರ ಸಾವು ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗಿವೆ. ಕಾರಣ ಏನು ಎನ್ನುವುದು ಮಾತ್ರ ಯಾರಿಗೂ ಗೊತ್ತಾಗಿಲ್ಲ. ಈ ರೀತಿ ಬೇಜವಬ್ದಾರಿಯಿಂದ ವರ್ತಿಸಿದರೆ ಸಾವಾಗದೇ ಇನ್ನೇನು ಆಗುತ್ತದೆ' ಎಂದು ಭಾಗ್ಯಶ್ರೀ ಸಂಬಂಧಿ ಭೀಮಾಶಂಕರ್ ಆಕ್ರೋಶ ವ್ಯಕ್ತಪಡಿದ್ದಾರೆ.












Click it and Unblock the Notifications