'ಜೆಡಿಎಸ್ಸಿಗೆ ಕಾಂಗ್ರೆಸ್ಸಿನ 78 ಶಾಸಕರ ಮಾರಾಟದ ತನಿಖೆಯಾಗಲಿ'
ಚಿಂಚೋಳಿ ಮೇ 9 2019: ಸ್ವಾಭಿಮಾನಕ್ಕೆ ಧಕ್ಕೆ ಆಗಿ ಪಕ್ಷ ತೊರೆದಿರುವ ಉಮೇಶ್ ಜಾಧವ್ ಬಗ್ಗೆ ಆರೋಪ ಮಾಡುತ್ತಿರುವ ಕಾಂಗ್ರೆಸ್ ನಾಯಕರು ತಮ್ಮ 78 ಶಾಸಕರನ್ನು ಜೆಡಿಎಸ್ ಗೆ ಮಾರಾಟ ಮಾಡಿರುವ ಬಗ್ಗೆಯೂ ತನಿಖೆಯನ್ನು ನಡೆಸಲಿ ಎಂದು ಮಾಜಿ ಸಚಿವ ವಿ ಸೋಮಣ್ಣ ಸವಾಲ್ ಹಾಕಿದ್ದಾರೆ.
ಚಿಂಚೋಳಿ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಡಾ ಅವಿನಾಶ್ ಜಾಧವ್ ಪರ ಬಿರುಸಿನ ಪ್ರಚಾರ ಕೈಗೊಂಡ ಅವರು ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು. ರಾಜಕಾರಣದಲ್ಲಿ ಎಲ್ಲವೂ ಸರಿ ಆದರೆ ಒಬ್ಬರ ಬಗ್ಗೆ ಇಷ್ಟು ಕೀಳು ಮಟ್ಟದಲ್ಲಿ ಟೀಕೆ ಮಾಡುವುದು ಸರಿಯಲ್ಲ. ಕಾಂಗ್ರೆಸ್ ನಾಯಕರು ಉಮೇಶ್ ಜಾಧವ್ ಮಾರಾಟವಾಗಿದ್ದಾರೆ ಎಂದು ಟೀಕೆ ಮಾಡುತ್ತಿದ್ದಾರೆ.
ಆದರೆ, ತಮ್ಮ 78 ಶಾಸಕರನ್ನು 37 ಶಾಸಕರನ್ನು ಹೊಂದಿರುವ ಜೆಡಿಎಸ್ ಪಕ್ಷಕ್ಕೆ ಮಾರಾಟ ಮಾಡಿಕೊಂಡಿರುವುದರ ಬಗ್ಗೆ ಚಕಾರ ಎತ್ತುವುದಿಲ್ಲಾ. ಈ ಒಡಂಬಡಿಕೆಯ ಹಿಂದಿನ ರಹಸ್ಯದ ಬಗ್ಗೆ ತನಿಖೆ ನಡೆಸಿ ಹಾಗೆಯೇ ಉಮೇಶ್ ಜಾಧವ್ ಹಣ ಪಡೆದಿರುವ ಬಗ್ಗೆಯೂ ತನಿಖೆ ನಡೆಸಲಿ ಎಂದು ಸವಾಲ್ ಹಾಕಿದರು.

ರಾಷ್ಟ್ರ ರಾಜಕಾರಣದ ಕೇಂದ್ರ ಬಿಂದುವಾಗಿದೆ
ಚಿಂಚೋಳಿ ವಿಧಾನಸಭಾ ಕ್ಷೇತ್ರ ರಾಷ್ಟ್ರ ರಾಜಕಾರಣದ ಕೇಂದ್ರ ಬಿಂದುವಾಗಿದೆ. ಏಕೆಂದರೆ, ಈ ಕ್ಷೇತ್ರದಲ್ಲಿ ಗೆಲವು ಸಾಧಿಸುವ ಪಕ್ಷ ರಾಜ್ಯದಲ್ಲಿ ಸರಕಾರ ರಚನೆ ಮಾಡುತ್ತದೆ. ಈ ಹಿನ್ನಲೆಯಲ್ಲಿ ಈ ಬಾರಿ ಚಿಂಚೋಳಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಗೆಲವು ಸಾಧಿಸುವ ಮೂಲಕ ರಾಜ್ಯ ರಾಜಕಾರಣದ ದಿಕ್ಕನ್ನು ಬದಲಿಸಲಿದೆ ಎಂದರು.

ಉಮೇಶ್ ಜಾಧವ್ ಅವರ ಸ್ವಾಭಿಮಾನ ಗೆಲವು
ಕಳೆದ ಎಲ್ಲಾ ಚುನಾವಣೆಗಳಲ್ಲೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಳ್ಳುತ್ತಿದ್ದ ಖರ್ಗೆ ಅವರನ್ನು ಈ ಬಾರಿ ಕಲಬುರ್ಗಿಯಲ್ಲೇ ಕಟ್ಟಿ ಹಾಕುವಲ್ಲಿ ಉಮೇಶ್ ಜಾಧವ್ ಸಫಲರಾಗಿದ್ದಾರೆ. ದೇಶದಲ್ಲಿ ಮೋದಿ ಅವರ ಅಲೆ ಇದ್ದು, ಅವರ ಒಳ್ಳೆಯ ಆಡಳಿತ ಹಾಗೂ ಉಮೇಶ್ ಜಾಧವ್ ಅವರ ಸ್ವಾಭಿಮಾನ ಗೆಲವು ತಂದು ಕೊಡಲಿದೆ ಎಂದರು.

ಬಿಜೆಪಿ ಅಭ್ಯರ್ಥಿ ಡಾ ಅವಿನಾಶ್ ಜಾಧವ್
ಬಿಜೆಪಿ ಅಭ್ಯರ್ಥಿ ಡಾ ಅವಿನಾಶ್ ಜಾಧವ್ ಮಾತನಾಡಿ, ಕ್ಷೇತ್ರದ ಅಭಿವೃದ್ದಿಗೆ ನನ್ನ ತಂದೆಯವರಾದ ಉಮೇಶ್ ಜಾಧವ್ ಅವರು ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಕ್ಷೇತ್ರದ ಅಭಿವೃದ್ದಿಗೆ ಸರಿಯಾಗಿ ಸಹಕಾರ ನೀಡದೇ ಇರುವ ನಿಟ್ಟಿನಲ್ಲಿ ಪಕ್ಷ ತೊರೆದು ಬಿಜೆಪಿ ಗೆ ಸೇರ್ಪಡೆಯಾಗಿದ್ದಾರೆ. ಈ ಬಾರಿ ನನ್ನನ್ನು ಗೆಲ್ಲಿಸುವ ಮೂಲಕ ನಿಮ್ಮ ಸೇವೆ ಮಾಡುವ ಅವಕಾಶ ನೀಡುವಂತೆ ಮನವಿ ಮಾಡಿದರು. ಮೇ 13,14 ಮತ್ತು 15 ರಂದು ಬಿ ಎಸ್ ಯಡಿಯೂರಪ್ಪನವರೂ ಕೂಡಾ ಮತ್ತೊಂದು ಸುತ್ತಿನ ಪ್ರಚಾರ ನಡೆಸಲಿದ್ದಾರೆ ಎಂದರು.

ಬಿಜೆಪಿ ಅಭ್ಯರ್ಥಿ ಡಾ ಅವಿನಾಶ್ ಜಾಧವ್ ಪ್ರಚಾರ
ಚಿಮ್ಮನಚೋಡ, ನಾಗರಾಳ, ಚೌಕಿತಾಂಡ, ನರನಾಳ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳಲಾಯಿತು. ಮಾಜಿ ಸಚಿವ ವಲ್ಯಾಪುರೆ, ಬಾಬುರಾವ್ ಪಾಟೀಲ್, ಲಕ್ಷ್ಮಣ ಅವಂಟಿ ಸೇರಿದಂತೆ ಹಲವು ಮುಖಂಡರು ಸಾಥ್ ನೀಡಿದರು.












Click it and Unblock the Notifications