'ದಲಿತ ಎಂಬ ಕಾರಣಕ್ಕೆ ಸಿಎಂ ಪದವಿಗೇರಲು ಇಷ್ಟವಿಲ್ಲ'
ಬೆಂಗಳೂರು, ಮೇ 13: ಕರ್ನಾಟಕ ವಿಧಾನಸಭೆ ಚುನಾವಣೆ 2018ರ ಫಲಿತಾಂಶ ಹೊರ ಬರುವುದಕ್ಕೂ ಮುನ್ನವೇ ಮುಖ್ಯಮಂತ್ರಿ ಯಾರು ಎಂಬ ಚರ್ಚೆ ಜೋರಾಗಿ ನಡೆದಿದೆ.
ನಿನ್ನೆ ತನಕ 'ನಾನೇ ಮುಂದಿನ ಸಿಎಂ' ಎನ್ನುತ್ತಿದ್ದ ಸಿದ್ದರಾಮಯ್ಯ ಅವರು ಈಗ ಈ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ, ದಲಿತರಿಗೆ ಸಿಎಂ ಪಟ್ಟ ಕೊಡಬೇಕು ಎಂದು ಕಾರ್ಯಕರ್ತರು ಬಯಸಿದರೆ, ನಾನು ಅಡ್ಡಿಪಡಿಸುವುದಿಲ್ಲ ಎಂದಿದ್ದಾರೆ.
ಇದಾದ ಬಳಿಕ ಸಿಎಂ ಸ್ಥಾನಕ್ಕೇರುವ ಸಾಧ್ಯತೆಯಿರುವ ಕಾಂಗ್ರೆಸ್ಸಿನ ದಲಿತ ನಾಯಕರತ್ತ ಮಾಧ್ಯಮಗಳ ಮೈಕ್ ತಿರುಗಿದೆ. ವಿವಾಹದ ವಾರ್ಷಿಕೋತ್ಸವ(50ನೇ)ದ ಚಿನ್ನದ ಹಬ್ಬದ ಸಂಭ್ರಮದಲ್ಲಿದ್ದ ಹಿರಿಯ ನಾಯಕ ಖರ್ಗೆ ಅವರು ಈ ಪ್ರಶ್ನೆಗೆ ಉತ್ತರಿಸಿದ್ದಾರೆ.

ದಲಿತರೊಬ್ಬರು ಸಿಎಂ ಆಗುವುದಾದರೆ ನನ್ನದೇನೂ ಆಕ್ಷೇಪವಿಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಬೆನ್ನಲ್ಲೇ, ಕಾಂಗ್ರೆಸ್ನಲ್ಲಿ ದಲಿತ ಕೋಟಾದಡಿ ಮುಖ್ಯಮಂತ್ರಿ ಸ್ಥಾನಕ್ಕೇರುವ ಸಾಧ್ಯತೆ ಇರುವ ಮಲ್ಲಿಕಾರ್ಜುನ ಖರ್ಗೆ ಅವರು ಬಗ್ಗೆ ಪ್ರತಿಕ್ರಿಯೆ ನೀಡಿ, ದಲಿತ ನಾಯಕ ಎಂದು ಸಿಎಂ ಸ್ಥಾನ ನೀಡುವುದು ಬೇಡ ಎಂದು ಅವರು ಹೇಳಿದ್ದಾರೆ.
ತ್ರಿಶಂಕು ಫಲಿತಾಂಶ : ಮಲ್ಲಿಕಾರ್ಜುನ ಖರ್ಗೆ ಬಾಯಿಗೆ ಲಡ್ಡು?
ಕಲಬುರಗಿಯಲ್ಲಿ ಈ ಬಗ್ಗೆ ಮಾತನಾಡಿರುವ ಅವರು, "ಕಾಂಗ್ರೆಸ್ನ ಹಿರಿಯ ನಾಯಕ ಎಂದು ಸಿಎಂ ಪದವಿ ಕೊಟ್ಟರೆ ಕೊಡಲಿ. ಇಲ್ಲವಾದರೆ, ಕಾಂಗ್ರೆಸ್ ನಿಷ್ಟಾವಂತ ಕಾರ್ಯಕರ್ತ ಎಂದು ಪರಿಗಣಿಸಿ ಹುದ್ದೆ ಕೊಟ್ಟರೆ ಕೊಡಲಿ. ಆದರೆ, ದಲಿತರಿಗೆ ಸಿಎಂ ಕುರ್ಚಿ ಅನ್ನೋ ಚರ್ಚೆ ಬೇಡ. ನಾನು ಯಾವತ್ತು ದಲಿತ ಸಿಎಂ ಎಂದು ಅರ್ಜಿ ಹಾಕಿಲ್ಲ, ಹಾಕುವುದೂ ಇಲ್ಲ,ಈ ಬಾರಿ ಕಾಂಗ್ರೆಸ್ ಬಹುಮತ ಗಳಿಸಿ, ಸರ್ಕಾರ ರಚನೆ ಮಾಡಲಿದೆ" ಎಂದು ಹೇಳಿದ್ದಾರೆ.












Click it and Unblock the Notifications