ವಿಡಿಯೋ; ತುಂಬಿ ಹರಿದ ಕಾಗಿಣಾ ನದಿ; ನಡುಗಡ್ಡೆಯಲ್ಲಿ ಸಿಲುಕಿದ್ದ 8 ಜನರ ರಕ್ಷಣೆ
ಕಲಬುರಗಿ, ಜುಲೈ 4: ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರುವುದರಿಂದ ಕೃಷ್ಣಾ ಹಾಗೂ ಉಪನದಿಗಳ ಒಳಹರಿವಿನಲ್ಲಿ ಏರಿಕೆಯಾಗಿದೆ. ಜೊತೆಗೆ ಮಹಾರಾಷ್ಟ್ರದಿಂದ ನಿನ್ನೆ ನೀರು ಬಿಟ್ಟಿದ್ದು, ಕಾಗಿಣಾ ನದಿಯ ಒಳ ಹರಿವೂ ಹೆಚ್ಚಾಗಿದೆ.
ಈ ನಡುವೆ ಸೇಡಂ ತಾಲೂಕಿನ ಬಿದ್ದಳ್ಳಿ ಗ್ರಾಮದ ಬಳಿ ಮರಳು ತರಲೆಂದು ಕಾಗಿಣಾ ನದಿಗೆ ಎಂಟು ಮಂದಿ ಇಳಿದಿದ್ದರು. ಆದರೆ ಇದ್ದಕ್ಕಿದ್ದಂತೆ ನದಿಯ ನೀರಿನ ಹರಿವು ಹೆಚ್ಚಾಗಿದ್ದರಿಂದ ನೀರಿನ ನಡುವೆಯೇ ಎಲ್ಲರೂ ಸಿಲುಕಿಕೊಂಡಿದ್ದಾರೆ. ದಿಕ್ಕು ತೋಚದೇ ನಡುಗಡ್ಡೆಯಲ್ಲೇ ಭಯದಿಂದ ಉಳಿದುಕೊಂಡಿದ್ದಾರೆ.

ಎಂಟು ಮಂದಿಯು ನದಿ ನಡುವೆ ಸಿಲುಕಿರುವ ವಿಷಯ ತಿಳಿಯುತ್ತಿದ್ದಂತೆ ಸೇಡಂ ಠಾಣೆಯ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಎಲ್ಲರನ್ನೂ ನಡುಗಡ್ಡೆಯಿಂದ ರಕ್ಷಿಸಲಾಗಿದೆ. ಸೇಡಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












Click it and Unblock the Notifications