just in: ಕಳ್ಳನೆಂದು ತರಕಾರಿ ವ್ಯಾಪಾರಿಯನ್ನು ಹೊಡೆದು ಕೊಂದ ಜನ
ಜೈಪುರ, ಆಗಸ್ಟ್ 16: ರಾಜಸ್ಥಾನದ ಅಲ್ವಾರ್‌ನಲ್ಲಿ ಸೋಮವಾರ ಕಳ್ಳನೆಂದು ತಪ್ಪಾಗಿ ಭಾವಿಸಿ ತರಕಾರಿ ವ್ಯಾಪಾರಿಯೊಬ್ಬರನ್ನು ಜನರ ಗುಂಪು ಥಳಿಸಿತ್ತು. ಗಾಯಗೊಂಡು ಜೈಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂತ್ರಸ್ತ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೋವಿಂದಗಢ ಪೊಲೀಸ್ ಠಾಣೆ ವ್ಯಾಪ್ತಿಯ ಅಲ್ವಾರ್ ಜಿಲ್ಲೆಯ ರಾಂಬಾಸ್ ಗ್ರಾಮದಲ್ಲಿ ಘಟನೆ ನಡೆದಿತ್ತು. ಮೃತ ವ್ಯಕ್ತಿಯನ್ನು 45 ವರ್ಷದ ಚಿರಂಜಿ ಸೈನಿ ಎಂದು ಗುರುತಿಸಲಾಗಿದೆ. ತರಕಾರಿ ಮಾರಾಟಗಾರನಾಗಿದ್ದ ಇವರನ್ನು ಕಳ್ಳನೆಂದು ತಪ್ಪಾಗಿ ಭಾವಿಸಿ ಥಳಿಸಲಾಗಿತ್ತು.
ರಾಜಸ್ಥಾನ: ದಲಿತ ಬಾಲಕ ಹತ್ಯೆ ಪ್ರಕರಣ- ಗ್ರಾಮಕ್ಕೆ ಸಚಿನ್ ಪೈಲಟ್ ಭೇಟಿ
ಚಿರಂಜಿ ಸೈನಿ ತಮ್ಮ ಜಮೀನಿನಿಂದ ಮನೆಗೆ ಹೋಗುತ್ತಿದ್ದಾಗ ಹತ್ತಕ್ಕೂ ಹೆಚ್ಚು ಜನರು ಥಳಿಸಿದ್ದಾರೆ. ಊರಿನಲ್ಲಿ ಟ್ರ್ಯಾಕ್ಟರ್ ಕಳ್ಳತನವಾಗಿತ್ತು. ಖಚಿತ ಮಾಹಿತಿ ಮೇರೆಗೆ ಸದರ್ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಟ್ರ್ಯಾಕ್ಟರ್ ಮಾಲೀಕರು ಕಳ್ಳರ ಬೆನ್ನಟ್ಟಿದ್ದಾರೆ. ಪೊಲೀಸರು ಸುತ್ತುವರಿದಿರುವುದನ್ನು ಕಂಡ ಕಳ್ಳರು ಪವರ್‌ಹೌಸ್ ಬಳಿಯ ಜಮೀನಿನಲ್ಲಿ ಟ್ರ್ಯಾಕ್ಟರ್ ಬಿಟ್ಟು ಪರಾರಿಯಾಗಿದ್ದಾರೆ.
ಅದೇ ಸ್ಥಳದಿಂದ ಮನೆಗೆ ಹೋಗುತ್ತಿದ್ದ ತರಕಾರಿ ವ್ಯಾಪಾರಿ ಸೈನಿಯನ್ನು ಕಳ್ಳ ಎಂದು ಭಾವಿಸಿ ಟ್ರ್ಯಾಕ್ಟರ್ ಮಾಲೀಕರು ಮತ್ತು ಅವನ ಸಹಚರರು ಗಂಭೀರವಾಗಿ ಥಳಿಸಿದ್ದಾರೆ. ಸ್ವಲ್ಪ ಸಮಯದ ನಂತರ ಆಗಮಿಸಿದ ಪೊಲೀಸರು ಮಧ್ಯಪ್ರವೇಶಿಸಿ ಗಾಯಾಳುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ನಂತರ ಜೈಪುರ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.
ಮೃತ ಚಿರಂಜಿ ಸೈನಿ ಯವರು ತರಕಾರಿ ಗಾಡಿ ಹಾಕಿಕೊಂಡು ಜೀವನ ಸಾಗಿಸುತ್ತಿದ್ದರು. ಅವರ ಸಾವಿನ ಸುದ್ದಿ ಕೇಳಿ ಆಕ್ರೋಶಗೊಂಡ ಜನರು ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಪೊಲೀಸ್ ಠಾಣೆಗೆ ಘೇರಾವ್ ಹಾಕಿದರು. ಅಲ್ಲದೆ, ಕುಟುಂಬಕ್ಕೆ ನಷ್ಟ ಭರಿಸಲು ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
ಮೃತನ ಪುತ್ರ ಯೋಗೇಶ್ ಸೈನಿ ಗೋವಿಂದಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನ್ನ ತಂದೆಯ ಸಾವಿಗೆ ವಿಕ್ರಮ್ ಸೇರಿದಂತೆ ಟ್ರ್ಯಾಕ್ಟರ್ ಮಾಲೀಕನೇ ಕಾರಣ ಎಂದು ಆರೋಪಿಸಿದ್ದಾರೆ ಈ ಬಗ್ಗೆ ಪೊಲೀಸರು ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ.