ತಬು, ಸೈಫ್, ನೀಲಂ, ಸೋನಾಲಿಗೆ ಕೋರ್ಟಿನಿಂದ ನೋಟಿಸ್
ಜೋಧ್ ಪುರ್(ರಾಜಸ್ಥಾನ), ಮೇ 21: ಬಾಲಿವುಡ್ಡಿನ ಸ್ಟಾರ್ ನಟ, ನಟಿಯರನ್ನು 1998ರ ಕೃಷ್ಣಮೃಗ ಬೇಟೆ ಪ್ರಕರಣ ಇನ್ನಿಲ್ಲದ್ದಂತೆ ಕಾಡುತ್ತಿದೆ. ಸಲ್ಮಾನ್ ಖಾನ್ ಅವರು ಪ್ರಮುಖ ಆರೋಪಿಯಾಗಿರುವ ಈ ಪ್ರಕರಣದ ಸಹ ಆರೋಪಿಗಳಿಗೆ ರಾಜಸ್ಥಾನದ ಹೈಕೋರ್ಟಿನಿಂದ ಸೋಮವಾರ(ಮೇ 20)ದಂದು ಹೊಸದಾಗಿ ನೋಟಿಸ್ ಜಾರಿ ಮಾಡಲಾಗಿದೆ.
ಮುಖ್ಯ ಆರೋಪಿಯ ಜತೆ ಘಟನಾ ಸ್ಥಳದಲ್ಲಿದ್ದ ಕಾರಣಕ್ಕೆ ಆರೋಪ ಹೊತ್ತಿದ್ದ ಹಮ್ ಸಾಥ್ ಸಾಥ್ ಹೈ ಚಿತ್ರ ತಂಡದ ಸೋನಾಲಿ ಬೇಂದ್ರೆ, ನೀಲಂ ಕೊಥಾರಿ, ತಬು, ಸೈಫ್ ಅಲಿ ಖಾನ್ ಹಾಗೂ ದುಷ್ಯಂತ್ ಕುಮಾರ್ ಅವರು ಸಹ ಆರೋಪಿಗಳಾಗಿದ್ದರು.
ಆದರೆ, ಐದು ತಿಂಗಳ ಹಿಂದೆ ಇವರೆಲ್ಲರ ವಿರುದ್ಧ ಸರಿಯಾದ ಸಾಕ್ಷಿ ಸಿಗದ ಕಾರಣ, ಪ್ರಕರಣದಿಂದ ಖುಲಾಸೆಗೊಂಡಿದ್ದರು. ನಟ, ನಟಿಯರನ್ನು ಕೇಸಿನಿಂದ ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ, ರಾಜಸ್ಥಾನ ಸರ್ಕಾರವು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿತ್ತು.
ಮೇಲ್ಮನವಿ ಪುರಸ್ಕರಿಸಿದ ನ್ಯಾಯಾಲಯವು, ಆರೋಪಿಗಳಿಗೆ ಮಾರ್ಚ್ 11, 2019ರಂದು ನೋಟಿಸ್ ಜಾರಿ ಮಾಡಿತ್ತು. ಸೋಮವಾರದಂದು ನಡೆದ ವಿಚಾರಣೆಯಲ್ಲಿ ನೀಲಂ ಕೊಥಾರಿ ಹೊರತುಪಡಿಸಿ, ಮಿಕ್ಕವರಿಗೆ ನೋಟಿಸ್ ತಲುಪಿಲ್ಲ ಎಂದು ಆರೋಪಿಗಳ ಪರ ವಕೀಲರು ವಾದಿಸಿದ್ದರು. ಜಸ್ಟೀಸ್ ಮನೋಜ್ ಗರ್ಗ್ ಅವರು ಹೊಸದಾಗಿ ನೋಟಿಸ್ ಜಾರಿಗೊಳಿಸಿದ್ದಾರೆ.

1998ರಲ್ಲಿ 'ಹಮ್ ಸಾಥ್ ಸಾಥ್ ಹೈ' ಚಿತ್ರ
1998ರಲ್ಲಿ 'ಹಮ್ ಸಾಥ್ ಸಾಥ್ ಹೈ' ಚಿತ್ರದ ಶೂಟಿಂಗ್ ವೇಳೆ ಸಲ್ಮಾನ್ ಖಾನ್ ರಿಂದ ರಾಜಸ್ಥಾನದ ಕಂಕನಿ ಹಳ್ಳಿಯ ಬಳಿ ಕೃಷ್ಣಮೃಗ ಬೇಟೆಯಾಡಿದ್ದರು. ಕಂಕನಿ ಗ್ರಾಮಸ್ಥರಿಂದ ಸಲ್ಮಾನ್ ಖಾನ್ ಹಾಗೂ ಇತರ ನಟರ ವಿರುದ್ಧ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ವನ್ಯಜೀವಿ ಸಂರಕ್ಷಣೆ ಕಾಯ್ದೆ 51 ಹಾಗೂ ದುಷ್ಟ ಕಾರ್ಯ ಮಾಡಲು ಗುಂಪು ಸೇರಿರುವ ಆರೋಪದ ಮೇಲೆ IPC ಸೆಕ್ಷನ್ 149 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಸಲ್ಮಾನ್ ಖಾನ್ ಅವರನ್ನು ವಿಚಾರಣೆಗೊಳಪಡಿಸಲಾಗಿತ್ತು.

ಸಲ್ಮಾನ್ ಗೆ ಶಿಕ್ಷೆ, ಉಳಿದವರಿಗೆ ಖುಲಾಸೆಯಾಗಿತ್ತು
ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರಿಗೆ 5 ವರ್ಷಗಳ ಕಾಲ ಶಿಕ್ಷೆ ಪ್ರಕಟಿಸಲಾಯಿತು. ಜೋಧಪುರ ಜೈಲಿನಲ್ಲಿ ಎರಡು ರಾತ್ರಿ ಕಳೆದ ಸಲ್ಮಾನ್, ಜಾಮೀನು ಪಡೆದು ಹೊರ ಬಂದರು. ಮಿಕ್ಕ ಎಲ್ಲಾ ನಟ, ನಟಿಯರು ಹಾಗೂ ರಾಜಸ್ಥಾನಿ ಗೈಡ್ ದುಷ್ಯಂತ್ ಸಿಂಗ್ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಯಿತು. ಬೆನಿಫಿಟ್ ಆಫ್ ಡೌಟ್ ಎಂದು ಪರಿಗಣಿಸಿ, ಘಟನೆ ನಡೆದ ಸ್ಥಳದಲ್ಲಿದ್ದರೂ ಸೋನಾಲಿ ಬೇಂದ್ರೆ, ನೀಲಂ ಕೊಥಾರಿ, ತಬು, ಸೈಫ್ ಅಲಿ ಖಾನ್ ಹಾಗೂ ದುಷ್ಯಂತ್ ಸಿಂಗ್ ಅವರು ಕ್ರೈಂಗೆ ಕುಮ್ಮಕ್ಕು ನೀಡಿದ್ದರ ಬಗ್ಗೆ ಯಾವುದೇ ಸಾಕ್ಷಿ ಸಿಕ್ಕಿರಲಿಲ್ಲ

ತ್ವರಿತವಾಗಿ ಜಾಮೀನು ಪಡೆದಿದ್ದ ಸಲ್ಮಾನ್
ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರಿಗೆ 5 ವರ್ಷ ಶಿಕ್ಷೆ ಪ್ರಕಟಿಸಲಾಯಿತು. ಆದರೆ, ಜೋಧಪುರದ ಜೈಲಿನಲ್ಲಿದ್ದ ಸಲ್ಮಾನ್ ಗೆ ಷರತ್ತುಬದ್ಧ ಜಾಮೀನು ತಕ್ಷಣವೇ ಸಿಕ್ಕಿತು. 25 ಸಾವಿರ ರೂ ಭದ್ರತಾ ಠೇವಣಿ ಹಾಗೂ ವೈಯಕ್ತಿಕ ಬಾಂಡ್ 50 ಸಾವಿರ ರೂ. ಇರಿಸಿ ಜಾಮೀನು ಪಡೆದರು. ವಿದೇಶಕ್ಕೆ ತೆರಳುವಾಗ ಕೋರ್ಟಿನ ಅನುಮತಿ ಅಗತ್ಯ ಎಂಬ ಷರತ್ತು ವಿಧಿಸಲಾಗಿದೆ.

ಸಲ್ಮಾನ್ ಗೆ ವಿದೇಶಿ ಪ್ರಯಾಣಕ್ಕೂ ಅನುಮತಿ
ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದ ಬಾಲಿವುಡ್ ನಟ ಸಲ್ಮಾನ್ ಖಾನ್ ವಿದೇಶಕ್ಕೆ ತೆರಳಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮನ್ನಿಸಿದ ನ್ಯಾಯಾಲಯವು ವಿದೇಶಕ್ಕೆ ತೆರಳಲು ಅನುಮತಿ ನೀಡಿದೆ. ಕೆಲವು ವೈಯಕ್ತಿಕ ಕಾರಣಗಳಿಂದ ನಾಲ್ಕು ದೇಶಗಳಿಗೆ ತೆರಳಬೇಕಿದೆ ಎಂದು ಅರ್ಜಿಯಲ್ಲಿ ತಿಳಿಸಿರುವ ಖಾನ್, ಕೋರ್ಟಿನ ಅನುಮತಿ ಕೇಳಿದ್ದರು.












Click it and Unblock the Notifications