ತನ್ನ ಕೊಲೆಗೆ ತಾನೇ ಸುಪಾರಿ ನೀಡಿ ಕೊಲೆಯಾದ ರಾಜಸ್ಥಾನದ ಬಲ್ಬೀರ್
ಜೈಪುರ್, ಸೆಪ್ಟೆಂಬರ್ 10: ಕುಟುಂಬದವರಿಗೆ ಐವತ್ತು ಲಕ್ಷ ರುಪಾಯಿಯ ಜೀವ ವಿಮೆ ಹಣ ಸಿಗಲಿ ಎಂಬ ಕಾರಣಕ್ಕೆ ರಾಜಸ್ಥಾನದ ವ್ಯಕ್ತಿಯೊಬ್ಬ ತನ್ನ ಕೊಲೆಗೆ ತಾನೇ ಸುಪಾರಿ ಕೊಟ್ಟ ಆರೋಪ ಕೇಳಿಬಂದಿದೆ. ರಾಜಸ್ಥಾನದ ಭಿಲ್ವಾರ ಜಿಲ್ಲೆಯ ಮಂಗ್ರೋಪ್ ಹಳ್ಳಿಯಲ್ಲಿ ಕಳೆದ ವಾರ ಬಲ್ಬೀರ್ ನ ಶವ ಪತ್ತೆಯಾಗಿತ್ತು. ಆತನ ಹೆಸರಲ್ಲಿ ವಿಮೆ ಮಾಡಲಾಗಿತ್ತು.
ಈಗ ಪೊಲೀಸರು ಹೇಳುವ ಪ್ರಕಾರ, ತನ್ನ ಹತ್ಯೆಗೆ ಬಲ್ಬೀರ್ ತಾನೇ ಸಂಚು ರೂಪಿಸಿದ್ದಾನೆ. ಉತ್ತರಪ್ರದೇಶದ ಸುನೀಲ್ ಯಾದವ್ ಹಾಗೂ ಆತನ ಸಹಚರ ರಾಜ್ ವೀರ್ ಗೆ ಹತ್ಯೆ ಸುಪಾರಿ ನೀಡಿದ್ದ ಬಲ್ಬೀರ್, ಅದಕ್ಕಾಗಿ ಎಂಬತ್ತು ಸಾವಿರ ರುಪಾಯಿ ಹಣ ಕೂಡ ನೀಡಿದ್ದಾನೆ. ಎಲ್ಲಿ ತನ್ನ ಕೊಲೆ ಆಗಬೇಕು ಎಂದು ಮುಂಚೆಯೇ ನಿರ್ಧರಿಸಿ, ಅಲ್ಲಿಗೆ ಸುನೀಲ್ ನನ್ನು ಕೂಡ ಕರೆದೊಯ್ದಿದ್ದಾನೆ.
ಪೊಲೀಸರ ತನಿಖೆಯಿಂದ ಹೊರಬಿದ್ದ ಸಂಗತಿ ಪ್ರಕಾರ, ಬಲ್ಬೀರ್ ಇಪ್ಪತ್ತು ಲಕ್ಷ ರುಪಾಯಿ ಹಣವನ್ನು ಜನರಿಂದ ಸಾಲ ಪಡೆದಿದ್ದ. ಆ ಹಣವನ್ನು ಹೆಚ್ಚಿನ ಬಡ್ಡಿಗೆ ಬೇರೆಯವರಿಗೆ ತಾನು ಸಾಲ ನೀಡಿದ್ದ. ಆದರೆ ಕಳೆದ ಆರು ತಿಂಗಳಿಂದ ತನಗೆ ಬರಬೇಕಾಗಿದ್ದ ಹಣ ಬಾರದಿದ್ದಾಗ ಹತಾಶನಾಗಿದ್ದ ಬಲ್ಬೀರ್, ಐವತ್ತು ಲಕ್ಷ ಮೌಲ್ಯದ ಅಪಘಾತ ವಿಮೆ ಮಾಡಿಸಿದ್ದಾನೆ. ಆ ನಂತರ ಎಂಟೂವರೆ ಲಕ್ಷದಷ್ಟು ಇನ್ಶೂರೆನ್ಸ್ ಪ್ರೀಮಿಯಂ ಕೂಡ ಪಾವತಿಸಿದ್ದಾನೆ.

ತಾನು ಸಾಲ ಪಡೆದವರಿಂದ ಕುಟುಂಬಕ್ಕೆ ಯಾವ ತೊಂದರೆಯೂ ಆಗಬಾರದು ಹಾಗೂ ಕುಟುಂಬ ಸದಸ್ಯರು ಇನ್ಷೂರೆನ್ಸ್ ಹಣದಲ್ಲಿ ಸಂತೋಷವಾಗಿ ಬಾಳಲಿ ಎಂದು ಲೆಕ್ಕ ಹಾಕಿಕೊಂಡು ಹೀಗೆ ಮಾಡಿದ್ದಾನೆ. ಆದರೂ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಲ್ಬೀರ್ ನ ಪ್ಲಾನ್ ಬಗ್ಗೆಯಾಗಲೀ ಇನ್ಷೂರೆನ್ಸ್ ಬಗ್ಗೆಯಾಗಲೀ ನಮಗೇನೂ ತಿಳಿದಿಲ್ಲ ಎಂದು ಬಲ್ಬೀರ್ ಕುಟುಂಬ ಸದಸ್ಯರು ತಿಳಿಸಿದ್ದಾರೆ.












Click it and Unblock the Notifications