'ಹೊಸ ನಿಯಮದ ಪ್ರಕಾರ ಮಹಿಳೆಯರು ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಪಡೆಯಬಹುದು': ತಾಲಿಬಾನ್
ಕಾಬೂಲ್, ಆಗಸ್ಟ್ 30: "ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸ ಮಾಡಲು ಅಫ್ಘಾನಿಸ್ತಾನದ ಮಹಿಳೆಯರು ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆಯಬಹುದು. ಆದರೆ ಪುರುಷರು ಹಾಗೂ ಮಹಿಳೆಯರಿಗೆ ಒಟ್ಟಾಗಿ ತರಗತಿಯನ್ನು ಈ ಹೊಸ ನಿಯಮದ ಪ್ರಕಾರ ನಡೆಸುವಂತಿಲ್ಲ," ಎಂದು ತಾಲಿಬಾನ್‌ನ ಹಾಲಿ ಸಚಿವ ಭಾನುವಾರ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ತಾಲಿಬಾನ್‌ನ ಆಡಳಿತಕ್ಕೆ ಒಳಪಟ್ಟಿರುವ ಅಫ್ಘಾನಿಸ್ತಾನದ ಪ್ರೌಢ ಶಿಕ್ಷಣ ಹಾಲಿ ಸಚಿವ ಅಬ್ದುಲ್ ಬಾಕ್ವಿ ಹಕ್ಕಾನಿ ಹಿರಿಯರೊಂದಿಗೆ ಭಾನುವಾರ ನಡೆದ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ. "ಅಫ್ಘಾನಿಸ್ತಾನದ ಜನರು ತಮ್ಮ ಪ್ರೌಢ ಶಿಕ್ಷಣವನ್ನು ಮುಂದುವರಿಸುತ್ತಾರೆ. ಶರಿಯಾ ಕಾನೂನಿನ ಪ್ರಕಾರವಾಗಿ ವಿದ್ಯಾಭ್ಯಾಸ ಪಡೆಯಲಿದ್ದಾರೆ. ಮಹಿಳೆಯರು ಕೂಡಾ ವಿದ್ಯಾಭ್ಯಾಸ ಪಡೆಯಬಹುದು. ಆದರೆ ಮಹಿಳೆಯರು ಹಾಗೂ ಪುರುಷರಿಗೆ ಜೊತೆಯಾಗಿ ತರಗತಿ ನಡೆಯುವುದಿಲ್ಲ," ಎಂದು ತಿಳಿಸಿದ್ದಾರೆ.
ಸಮಂಜಸವಾದ ಹಾಗೂ ಇಸ್ಲಾಮಿಕ್ ಪಠ್ಯಕ್ರಮವನ್ನು ಜಾರಿಗೆ ತರಲು ತಾಲಿಬಾನ್ ಬಯಸಿದೆ. ನಮ್ಮ ಇಸ್ಲಾಮಿಕ್ ಬಗ್ಗೆ ಪಠ್ಯಕ್ರಮ ಇರಲಿದೆ. ಹಾಗೆಯೇ ರಾಷ್ಟ್ರೀಯ ಹಾಗೂ ಐತಿಹಾಸಿಕ ಮೌಲ್ಯಗಳ ಬಗ್ಗೆಯೂ ಪಠ್ಯಕ್ರಮ ಒಳಗೊಳ್ಳಲಿದೆ. ಇದರೊಂದಿಗೆ ವಿಶ್ವದ ಇತರೆ ದೇಶಗಳೊಂದಿಗೆ ಸ್ಫರ್ಧಿಸಲು ಸಾಧ್ಯವಾಗುವಂತಹ ವಾತಾವರಣ ನಿರ್ಮಿಸಲಾಗುವುದು," ಎಂದು ಅಬ್ದುಲ್ ಬಾಕ್ವಿ ಹಕ್ಕಾನಿ ಹೇಳಿದ್ದಾರೆ.

ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳನ್ನು ಹೆಣ್ಣು ಹಾಗೂ ಗಂಡು ಮಕ್ಕಳನ್ನು ಬೇರೆ ಬೇರೆಯೇ ಇರಿಸಲಾಗುವುದು. ಅಲ್ಲಿ ಈಗಾಗಲೇ ಆಳವಾದ ಸಾಂಪ್ರಾದಾಯವಾದಿ ಪದ್ಧತಿ ಇದೆ ಎಂದು ಹೇಳಲಾಗಿದೆ. ಈ ಹಿಂದೆ 1990 ರ ಕಾಲಾವಧಿಯಲ್ಲಿ ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸಿದ್ದ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಯಾವುದೇ ಸ್ಥಾನಮಾನ ನೀಡಿರಲಿಲ್ಲ. ಮಹಿಳೆಯರಿಗೆ ಶಿಕ್ಷಣ ಪಡೆಯುವ ಅವಕಾಶ ಇರಲಿಲ್ಲ.
ಇತ್ತೀಚೆಗೆ ಸುಮಾರು ಎರಡು ದಶಕದ ನಂತರ ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ಯುಎಸ್ ವಾಪಾಸ್ ಪಡೆದಿದ್ದು ಈ ಬಳಿಕ ತಾಲಿಬಾನ್ ಮತ್ತೆ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ತಾಲಿಬಾನ್‌ನ ಈ ಆಡಳಿತ ಅವಧಿಯನ್ನು ಮಹಿಳೆಯರಿಗೆ ಯಾವುದೇ ಸ್ವಾತಂತ್ಯ್ರ ಇರಲಾರದು ಎಂಬ ಆತಂಕ ಎಲ್ಲ ಮಾನವ ಹಕ್ಕು ಹಾಗೂ ಮಹಿಳಾ ಹಕ್ಕು ಹೋರಾಟಗಾರರಲ್ಲಿ ಉಂಟಾಗಿತ್ತು. ಈ ನಿಟ್ಟಿನಲ್ಲಿ ಹಲವಾರು ಮಂದಿ ಅಫ್ಘಾನಿಸ್ತಾನವನ್ನು ತೊರೆದು ಹೋಗಿದ್ದಾರೆ. ಮಹಿಳೆಯರಿಗೆ ಅಫ್ಘಾನಿಸ್ತಾನದಲ್ಲಿ ತಮ್ಮೆಲ್ಲಾ ಹಕ್ಕುಗಳೊಂದಿಗೆ ಜೀವಿಸುವುದು ಕಷ್ಟ ಎಂಬಂತಹ ಹಲವಾರು ನಿದರ್ಶನಗಳು ಕೂಡಾ ನಡೆದಿದ್ದವು.
ಈ ನಡುವೆ ತಾಲಿಬಾನ್ ಮಹಿಳೆಯರಿಗೂ ವಿದ್ಯಾಭ್ಯಾಸ ಪಡೆಯುವ ಅವಕಾಶವಿದೆ ಎಂದು ಹೇಳಿದೆ. ತಮ್ಮ ಕಠಿಣವಾದ ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ ಮಾತ್ರ ಈ ತಾಲಿಬಾನ್ ಸಂಘಟನೆಯು ಮಹಿಳೆಯರ ವಿಚಾರದಲ್ಲಿ ಕೆಲವೊಂದು ಬದಲಾವಣೆಯನ್ನು ತಂದುಕೊಳ್ಳಲು ಮುಂದಾಗಿದೆ. ಆದರೆ ವಿದ್ಯಾಭ್ಯಾಸ ಪಡೆದ ಮಹಿಳೆಯು ಪುರುಷರಂತೆ ಕಾರ್ಯ ನಿರ್ವಹಣೆ ಮಾಡಬಹುದೇ, ಕೆಲಸಕ್ಕೆ ಹೋಗಬಹುದೇ, ಇತರೆ ಪುರುಷರೊಂದಿಗೆ ಸೇರಿ ತಾವು ಪಡೆದ ವಿದ್ಯಾಭ್ಯಾಸಕ್ಕೆ ತಕ್ಕುದಾದ ಕೆಲಸವನ್ನು ಮಾಡಬಹುದೇ ಎಂಬುವುದರ ಬಗ್ಗೆ ಮಾತ್ರ ತಾಲಿಬಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ನಡುವೆ ತಾಲಿಬಾನ್ ಈಗ ನೀಡಿದ ಭರವಸೆಗೆ ಅಂಟಿಕೊಂಡಿರುತ್ತದೆಯೇ ಎಂಬ ಅನುಮಾನಗಳನ್ನು ಕೂಡಾ ಹಲವಾರು ಮಂದಿ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ಶಿಕ್ಷಣದ ವಿಚಾರದಲ್ಲಿ ಕಾಬೂಲ್‌ನಲ್ಲಿ ಭಾನುವಾರ ನಡೆದ ಸಭೆಯಲ್ಲಿ ಓರ್ವ ಮಹಿಳೆಯು ಕೂಡಾ ಭಾಗಿಯಾಗಿರಲಿಲ್ಲ. ತಾಲಿಬಾನ್‌ನ ಹಿರಿಯ ನಾಯಕರುಗಳು ಮಾತ್ರ ಈ ಸಭೆಯಲ್ಲಿ ಹಾಜರಿದ್ದರು ಎಂದು ಹೇಳಲಾಗಿದೆ.
ಇದಕ್ಕೂ ಹಿಂದಿನ ಅಶ್ರಫ್ ಘನಿ ಸರ್ಕಾರದ ವೇಳೆ ನಗರದ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕಿಯಾಗಿದ್ದ ಮಹಿಳೆ, "ತಾಲಿಬಾನ್‌ನ ಸಚಿವಾಲಯವು ಪ್ರೌಢ ಶಿಕ್ಷಣದಕ್ಕೆ ಕೇಲವ ಪುರುಷ ಪ್ರಾಧ್ಯಾಪಕರನ್ನು ಹಾಗೂ ವಿದ್ಯಾರ್ಥಿಗಳನ್ನು ಮಾತ್ರ ವಿಶ್ವವಿದ್ಯಾನಿಲಯದ ಆರಂಭದ ಬಗ್ಗೆ ಸಮಾಲೋಚನೆ ನಡೆಸಿದೆ," ಎಂದು ತಿಳಿಸಿದ್ದಾರೆ. "ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ಮಹಿಳೆಯರನ್ನು ಸೇರಿಸದಿರುವುದು ತಾಲಿಬಾನ್‌ನ ಈ ನೀಡಿದ ಭರವಸೆ ಹಾಗೂ ಇನ್ನು ಕೈಗೊಳ್ಳಬಹುದಾದ ಕ್ರಮಗಳ ನಡುವೆ ಅಂತರವ್ನನು ಸೃಷ್ಟಿ ಮಾಡಿದೆ," ಎಂದು ಅಭಿಪ್ರಾಯಿಸಿದ್ದಾರೆ.
ಸುಮಾರು ಇಪ್ಪತ್ತು ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಕೂಡಾ ಪುರುಷರೊಂದಿಗೆಯೇ ವಿದ್ಯಾಭ್ಯಾಸ ಪಡೆದಿದ್ದಾರೆ ಹಾಗೆಯೇ ಪುರುಷರಂತೆ ಮಹಿಳೆಯರು ಕೂಡಾ ಕಾರ್ಯ ನಿರ್ವಹಿಸುತ್ತಿದ್ದರು. ಗೋಷ್ಠಿಗಳಲ್ಲಿ ಪುರುಷ, ಮಹಿಳಾ ಪ್ರಾಧ್ಯಾಪಕರು ಜೊತೆಯಾಗಿ ಹಾಜರಾಗುತ್ತಿದ್ದರು. ಆದರೆ ಅಫ್ಘಾನಿಸ್ತಾನಕ್ಕೆ ತಾಲಿಬಾನ್ ದಾಳಿ ನಡೆಸಿದ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಹಲವಾರು ಮಂದಿಯ ಹತ್ಯೆ ಮಾಡಲಾಗಿದೆ. ಇದರಿಂದಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಭಾರೀ ಆತಂಕ ನಿರ್ಮಾಣವಾಗಿದೆ.
ಈ ಹಿಂದೆ ಉದ್ಯೋಗಸ್ಥ ಮಹಿಳೆಯರನ್ನು ಮನೆಯಲ್ಲೇ ಇರಲು ತಾಲಿಬಾನ್ ಹೇಳಿದೆ. ಹೊರಗೆ ಪರಿಸ್ಥಿತಿ ಈಗ ಸರಿಯಿಲ್ಲದ ಕಾರಣ ಸದ್ಯಕ್ಕೆ ಉದ್ಯೋಗಸ್ಥ ಮಹಿಳೆಯರು ಮನೆಯಲ್ಲೇ ಇರಿ ಎಂದಿದೆ. ಇನ್ನು ಇದಕ್ಕೂ ಮುನ್ನ ಮಹಿಳೆಯೊಬ್ಬರು ಬಿಗಿಯಾದ ಬಟ್ಟೆ ಧರಿಸಿ, ಒಬ್ಬರೇ ಮನೆಯಿಂದ ಹೊರ ಬಂದ ಕಾರಣಕ್ಕೆ ಆಕೆಯನ್ನು ಅಮಾನುಷವಾಗಿ ತಾಲಿಬಾನ್ ಹತ್ಯೆ ಮಾಡಿತ್ತು, ಹಾಗೆಯೇ ಮಹಿಳೆಯರು ಬಲವಂತವಾಗಿ ತಾಲಿಬಾನ್ ಉಗ್ರರ ಜೊತೆ ವಿವಾಹ ಮಾಡಿಸಲಾಗಿದೆ ಎಂದು ವರದಿಯಾಗಿದೆ.
(ಒನ್ ಇಂಡಿಯಾ ಸುದ್ದಿ)












Click it and Unblock the Notifications