449 ದಿನ ಮರದ ಮೇಲೆಯೇ ಜೀವನ: ಪರಿಸರ ಉಳಿಸಿದ ಮಹಿಳೆಯ ರೋಚಕ ಹೋರಾಟದ ಕಥೆ
ಜಿರಳೆ ಪಾರ್ಟಿಯಿಂದ ವಿನೂತನ ಪ್ರತಿಭಟನೆ ನೋಡಿದ್ದೀರಿ. ಕಾಲಕಾಲಕ್ಕೆ ಪ್ರತಿಭಟನೆಗಳು ಹೊಸ ಹೊಸ ರೂಪ ಪಡೀತಾ ಇರ್ತವೆ. ಆದ್ರೂ ಹೆಚ್ಚೆಂದರೆ ಎಷ್ಟು ದಿನ ಮಾಡಬಹುದು? ಒಂದು ವಾರ, ಎರಡು ವಾರ? ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಬಳಿಕ ಮೂರನೇ ವಾರಕ್ಕೆ ಸುಸ್ತಾಗಿ ಮನೆಗೆ ಹೋಗಬಹುದು. ನಂತರ ಎಲ್ಲವೂ ಮರೆತು ಹೋಗುತ್ತದೆ. ಆದರೆ ಆಸ್ಟ್ರೇಲಿಯಾದ ಮಹಿಳೆಯೊಬ್ಬಳು ಪರಿಸರವನ್ನು ಉಳಿಸಲು ಮಾಡಿದ ಪ್ರತಿಭಟನೆ ಮಾತ್ರ ಜಗತ್ತಿನ ಗಮನ ಸೆಳೆದಿದೆ. ಆಕೆ ಒಂದೆರಡು ದಿನವಲ್ಲ, 449 ದಿನ 60 ಮೀಟರ್ ಎತ್ತರದ ಮರ ಹತ್ತಿ ಅದರ ಮೇಲೇ ಬದುಕಿದ್ದಳು! ಆಕೆಯಿಂದಾಗಿ ಸುಮಾರು 1.7 ಲಕ್ಷ ಹೆಕ್ಟೇರ್ ಅರಣ್ಯ ಉಳಿಸಲು ಸರ್ಕಾರ ಮುಂದಾಯಿತು.
ಆ ದಿಟ್ಟ ಮಹಿಳೆಯ ಕತೆ ನೋಡೋಣ. ಆಕೆಯ ಹೆಸರು ಮಿರಾಂಡಾ ಗಿಬ್ಸನ್. 2011ರ ಡಿಸೆಂಬರ್ 14ರಂದು ಮಿರಾಂಡಾ ಆಸ್ಟ್ರೇಲಿಯಾದ ದಕ್ಷಿಣ ಭಾಗದ ಟಾಸ್ಮೇನಿಯಾದಲ್ಲಿರುವ ಸುಮಾರು 60 ಮೀಟರ್ ಎತ್ತರದ ಯೂಕಲಿಪ್ಟಸ್ ಮರವೊಂದನ್ನು ಹತ್ತಿ ಕೂತಳು. ಆ ಮರಕ್ಕೆ ಅವಳಿಟ್ಟ ಹೆಸರು ಅಬ್ಸರ್ವರ್ ಟ್ರೀ. ಸುತ್ತಮುತ್ತಲಿನ ಪುರಾತನ ಅರಣ್ಯವನ್ನು ಮರ ಕಡಿಯುವ ಕಂಪನಿಗಳಿಂದ ರಕ್ಷಿಸುವುದು ಅವಳ ಉದ್ದೇಶವಾಗಿತ್ತು.

ಮರದ ಮೇಲೆಯೇ ದಾಖಲೆ
ಮಿರಾಂಡಾ ಸುಮ್ಮನೆ ಮರದ ಮೇಲೆ ಕುಳಿತಿರಲಿಲ್ಲ. ಮರದ ಮೇಲೆಯೇ ಒಂದು ಸಣ್ಣ ವೇದಿಕೆ ಕಟ್ಟಿಕೊಂಡಿದ್ದಳು. ಅಲ್ಲಿಯೇ ಮಲಗುತ್ತಿದ್ದಳು, ಊಟ ಮಾಡುತ್ತಿದ್ದಳು. ಸೌರಶಕ್ತಿಯಿಂದ ನಡೆಯುವ ಕಂಪ್ಯೂಟರ್ ಬಳಸಿ ಇಂಟರ್ನೆಟ್ ಮೂಲಕ ಜಗತ್ತಿನೊಂದಿಗೆ ಸಂಪರ್ಕದಲ್ಲಿದ್ದಳು.
ವಿದ್ಯಾರ್ಥಿಗಳೊಂದಿಗೆ ವಿಡಿಯೊ ಮೂಲಕ ಮಾತನಾಡುತ್ತಿದ್ದಳು. ಬ್ಲಾಗ್ ಬರೆಯುತ್ತಿದ್ದಳು. ನೆಲಕ್ಕೆ ಕಾಲಿಡದೇ ಇವೆಲ್ಲವನ್ನೂ ಮಾಡುತ್ತಿದ್ದಳು. ಚಳಿಗಾಲದ ಕೊರೆಯುವ ಚಳಿ, ಬೇಸಿಗೆಯ ಬಿಸಿಲು, ಗಾಳಿ, ಮಳೆ- ಯಾವುದೂ ಆಕೆಯನ್ನು ಕೆಳಗಿಳಿಸಲಿಲ್ಲ. ಸುಮಾರು ಏಳು ತಿಂಗಳು. ಆಸ್ಟ್ರೇಲಿಯಾದಲ್ಲೇ ಆಗಿದ್ದ ಹಿಂದಿನ ದಾಖಲೆಯನ್ನೂ ಮುರಿದಳು. 208 ದಿನ ಮರದ ಮೇಲಿನ ವಾಸದ ದಾಖಲೆ ಮುರಿದು ಪ್ರತಿಭಟನೆ ಮುಂದುವರಿಸಿದಳು.
ಆದರೆ ಯಾಕೆ ಈ ಸತ್ಯಾಗ್ರಹ? ಆಕೆ ಕೂತಿದ್ದ ಕಾಡು ಸಂರಕ್ಷಿತಾರಣ್ಯ. ಭವಿಷ್ಯದಲ್ಲಿ ಸಂರಕ್ಷಿಸಬೇಕೆಂದು ಗುರುತಿಸಲಾಗಿದ್ದುದು. ಅಲ್ಲಿ ಮರ ಕಡಿಯಲು ಸರ್ಕಾರ ಅವಕಾಶ ನೀಡಿತ್ತು. ಟಾ ಆನ್ ಎಂಬ ಕಂಪನಿ ಆ ಭಾಗದಲ್ಲಿ ಮರ ಕಡಿಯುತ್ತಿತ್ತು. ಸಂರಕ್ಷಣೆ ಎಂದು ಹೇಳುತ್ತಾ, ಇನ್ನೊಂದು ಕಡೆ ಕಾಡು ಕಡಿಯುವುದು ಸರಿಯೇ ಎಂಬ ಪ್ರಶ್ನೆಯನ್ನು ಆಕೆ ಪ್ರತಿಭಟನೆಯ ಮೂಲಕ ಜಗತ್ತಿನ ಮುಂದೆ ತೆರೆದಿಟ್ಟಳು.
449 ದಿನಗಳ ಕಠೋರ ವ್ರತ
ಕೊನೆಗೂ ಆಕೆಯ ಛಲಕ್ಕೆ ಸರಕಾರ ಮಣಿಯಿತು. 2013ರ ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ಸರಕಾರ ಟಾಸ್ಮೇನಿಯಾದ, ಅಪಾಯದಲ್ಲಿದ್ದ 1.7 ಲಕ್ಷ ಹೆಕ್ಟೇರ್ ಅರಣ್ಯವನ್ನು ವಿಶ್ವ ಪರಂಪರೆ ತಾಣದ ವ್ಯಾಪ್ತಿಗೆ ಸೇರಿಸುವ ಪ್ರಸ್ತಾವನೆ ಸಲ್ಲಿಸಿತು. ಅದೇ ಸಮಯದಲ್ಲಿ ಮಿರಾಂಡಾ ಇದ್ದ ಪ್ರದೇಶದ ಸಮೀಪ ಕಾಡ್ಗಿಚ್ಚು ಕಾಣಿಸಿಕೊಂಡಿತು. ಆಕೆ ಅಲ್ಲಿಯೇ ಇದ್ದರೆ ಜೀವಕ್ಕೆ ಅಪಾಯವಾಗಲಿತ್ತು. ಹೀಗಾಗಿ ಮಾರ್ಚ್ 7ರಂದು ಆಕೆ ಮರದಿಂದ ಕೆಳಗಿಳಿದಳು. ಆಕೆ ಮರದ ಮೇಲೆ ಕಳೆದಿದ್ದ ಸಮಯ 449 ದಿನಗಳು. ಇದು ಆಸ್ಟ್ರೇಲಿಯಾದ ಇತಿಹಾಸದಲ್ಲೇ ಅತಿ ದೀರ್ಘ ಮರದ ಮೇಲಿನ ಪ್ರತಿಭಟನೆ.
ಆ ಬಳಿಕದ ಬೆಳವಣಿಗೆ ಇನ್ನೂ ವಿಶೇಷ. 2013ರ ಜೂನ್‌ನಲ್ಲಿ ವಿಶ್ವ ಪರಂಪರೆ ಸಮಿತಿ, ಟಾಸ್ಮೇನಿಯಾದ ಸುಮಾರು 1,72,000 ಹೆಕ್ಟೇರ್ ಅರಣ್ಯವನ್ನು ವಿಶ್ವ ಪರಂಪರೆ ಪ್ರದೇಶಕ್ಕೆ ಸೇರಿಸಲು ಅನುಮೋದನೆ ನೀಡಿತು. ಆ ನಿರ್ಣಯ ಕೈಗೊಳ್ಳುತ್ತಿದ್ದ ಅವಧಿಯಲ್ಲಿ ಇಡೀ ಜಗತ್ತಿನ ಗಮನವನ್ನು ಆ ಕಾಡಿನತ್ತ ಸೆಳೆಯುವಲ್ಲಿ ಮಿರಾಂಡಾ ಪಾತ್ರ ದೊಡ್ಡದಾಗಿತ್ತು.
ವಿಜ್ಞಾನಿಗಳು ಹೇಳುವ ಪ್ರಕಾರ, ಟಾಸ್ಮೇನಿಯಾ ಮತ್ತು ವಿಕ್ಟೋರಿಯಾ ಭಾಗದಲ್ಲಿರುವ ಎತ್ತರದ ಯೂಕಲಿಪ್ಟಸ್ ಅರಣ್ಯಗಳು ಜಗತ್ತಿನಲ್ಲೇ ಅತಿ ಹೆಚ್ಚು ಕಾರ್ಬನ್ ಸಂಗ್ರಹಿಸಿಟ್ಟಿರುವ ಅರಣ್ಯಗಳಲ್ಲಿ ಒಂದು. ಈ ಕಾಡುಗಳನ್ನು ಕಡಿದರೆ ಶತಮಾನಗಳ ಕಾಲ ಸಂಗ್ರಹವಾಗಿದ್ದ ಕಾರ್ಬನ್ ಮತ್ತೆ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ. ಹವಾಮಾನ ಬದಲಾವಣೆಯ ಮೇಲೆ ಇದರ ಪರಿಣಾಮ ದೊಡ್ಡದು.
ಯೋಚಿಸಿ, ಪ್ರತಿಭಟನೆ ಅಂತ ಹೇಳ್ತಾ ಇನ್‌ಸ್ಟಾಗ್ರಾನಲ್ಲಿ ಪೋಸ್ಟ್ ಮಾಡುವುದು, ಆನ್‌ಲೈನ್ ಪಿಟಿಷನ್‌ಗೆ ಸಹಿ ಹಾಕೋದು ಎಷ್ಟು ಸುಲಭ! ಆದ್ರೆ 449 ದಿನ ಮರದ ಮೇಲೆ ಬದುಕುವುದು! ಎಷ್ಟು ಛಲ ಬೇಕು, ಛಲಗಾತಿ ಈಕೆ..


Click it and Unblock the Notifications
